







ರಸ್ತೆ, ಜಂಕ್ಷನ್ ಅಭಿವೃದ್ಧಿ, ಸಂಚಾರ ನಿರ್ವಹಣೆಗೆ 10 ವರ್ಷಗಳ ಅಭಿವೃದ್ಧಿ ಯೋಜನೆ


ಪುತ್ತೂರು: ನಗರ ಸಾರಿಗೆ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಮೈಸೂರು ವಿಭಾಗದಲ್ಲಿ ಆಯ್ಕೆ ಮಾಡಿರುವ ನಾಲ್ಕು ನಗರಗಳ ಪೈಕಿ ಪುತ್ತೂರು ಕೂಡ ಸ್ಥಾನ ಪಡೆದಿದೆ. ಪುತ್ತೂರು ನಗರಸಭೆ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳ ಸರ್ವೆ ನಡೆಸಿ, ಮುಂದಿನ 10 ವರ್ಷಗಳ ನಗರ ಸಾರಿಗೆ ಮತ್ತು ರಸ್ತೆ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸುವ ಮಹತ್ವದ ಯೋಜನೆ ಇದಾಗಿದೆ.



ಈ ಹಿನ್ನೆಲೆಯಲ್ಲಿ ಅ.14ರಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರ ನೇತೃತ್ವದಲ್ಲಿ DULT ಅಧಿಕಾರಿಗಳು, ಪುತ್ತೂರು ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಆನ್ಲೈನ್ ಸಭೆ ನಡೆಯಿತು. ಸಭೆಯಲ್ಲಿ ಪುತ್ತೂರು ಪಟ್ಟಣದ ಸಮಗ್ರ ಸರ್ವೆ ಕಾರ್ಯದ ವ್ಯಾಪ್ತಿ, ನಗರ ಸಾರಿಗೆ ವ್ಯವಸ್ಥೆಯ ಸುಧಾರಣೆ, ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿ, ವಾಹನ ದಟ್ಟಣೆ ನಿಯಂತ್ರಣ ಹಾಗೂ ಭವಿಷ್ಯದ ನಗರ ಅಭಿವೃದ್ಧಿ ಯೋಜನೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಸರ್ವೆ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಗರಸಭೆ ಮತ್ತು ಸಂಚಾರ ಪೊಲೀಸ್ ಇಲಾಖೆಯ ಸಹಕಾರದ ಅಗತ್ಯವನ್ನು ಒತ್ತಿ ಹೇಳಲಾಯಿತು.
ರಸ್ತೆಗಳ ಸಮಗ್ರ ಮಾಹಿತಿ ಸಂಗ್ರಹ;
DULT ವತಿಯಿಂದ ಕೈಗೊಳ್ಳಲಾಗುವ RIMP (ರೋಡ್ ಇನ್ವೆಂಟರಿ ಆಂಡ್ ಮೊಬಿಲಿಟಿ ಪ್ಲಾನ್) ಅಧ್ಯಯನದಡಿ ಪುತ್ತೂರು ನಗರಸಭೆ ವ್ಯಾಪ್ತಿಯ ಎಲ್ಲಾ ರಸ್ತೆಗಳು ಹಾಗೂ ಸುತ್ತಲಿನ ಮೂರು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಒಳಗೊಂಡಂತೆ ಸಮಗ್ರ ಸರ್ವೆ ನಡೆಸಲಾಗುತ್ತದೆ. ರಸ್ತೆಗಳ ಅಗಲ, ಕಾಲುದಾರಿಗಳು, ಜಂಕ್ಷನ್ಗಳು, ವಾಹನ ಸಂಚಾರದ ಪ್ರಮಾಣ, ಪಾರ್ಕಿಂಗ್ ವ್ಯವಸ್ಥೆ, ಸಾರ್ವಜನಿಕ ಸಾರಿಗೆ ಹಾಗೂ ಪಾದಚಾರಿ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಮಾಹಿತಿಯನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಆಧಾರದಲ್ಲಿ ದಾಖಲಿಸಿ, ವೈಜ್ಞಾನಿಕ ರಸ್ತೆ ಡೇಟಾಬೇಸ್ ಸಿದ್ಧಪಡಿಸಲಾಗುತ್ತದೆ. ಪ್ರಸ್ತುತ ರಸ್ತೆ ವ್ಯವಸ್ಥೆಯನ್ನು ನಗರ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ, ಸಂಪರ್ಕದ ಕೊರತೆಯಿರುವ ರಸ್ತೆಗಳನ್ನು ಹಾಗೂ ಸಂಚಾರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಲಾಗುತ್ತದೆ.
10 ವರ್ಷಗಳ ಅಭಿವೃದ್ಧಿಗೆ ರೂಪುರೇಷೆ;
ಸರ್ವೆ ಮತ್ತು ಅಧ್ಯಯನದ ಆಧಾರದಲ್ಲಿ ಮುಂದಿನ 10 ವರ್ಷಗಳ ರಸ್ತೆ ಹಾಗೂ ನಗರ ಸಾರಿಗೆ ಅಭಿವೃದ್ಧಿಗೆ ಹಂತ ಹಂತದ ಯೋಜನೆ ರೂಪಿಸಲಾಗುತ್ತದೆ. ಪ್ರಮುಖ ಜಂಕ್ಷನ್ಗಳು ಮತ್ತು ರಸ್ತೆ ಕಾರಿಡಾರ್ಗಳ ಸುಧಾರಣೆಗೆ ಆದ್ಯತೆ ನೀಡುವುದರೊಂದಿಗೆ, ಅಗತ್ಯವಿರುವ ಕಾಮಗಾರಿಗಳ ವಿನ್ಯಾಸ ಹಾಗೂ ವೆಚ್ಚದ ಅಂದಾಜುಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನಿಗದಿಪಡಿಸಲು ಮತ್ತು ಅನುದಾನ ಪಡೆಯಲು ಅನುಕೂಲವಾಗಲಿದೆ. ಟ್ರಾಫಿಕ್ ದಟ್ಟಣೆ ಹೆಚ್ಚಿರುವ ಪ್ರದೇಶಗಳು, ಅಪಾಯಕಾರಿ ಜಂಕ್ಷನ್ಗಳು ಹಾಗೂ ರಸ್ತೆ ಸಂಪರ್ಕದ ಕೊರತೆಗಳನ್ನು ಗುರುತಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲಾಗುತ್ತದೆ. ಕಾಲುದಾರಿಗಳು, ಪಾದಚಾರಿ ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಸುಧಾರಣೆಗೂ ಯೋಜನೆಯಲ್ಲಿ ಗಮನ ನೀಡಲಾಗುತ್ತದೆ.
ಏಳು ತಿಂಗಳಲ್ಲಿ ಅಧ್ಯಯನ ಪೂರ್ಣಗೊಳಿಸುವ ಗುರಿ;
ಈ ಯೋಜನೆಯು DULTನ ಸ್ವಂತ ಉಪಕ್ರಮವಾಗಿದ್ದು, ರಾಜ್ಯ ನಗರ ಸಾರಿಗೆ ನಿಧಿ (SUTF) ಅಡಿಯಲ್ಲಿ ಶೇ.100ರಷ್ಟು ಹಣಕಾಸು ಒದಗಿಸಲಾಗುತ್ತದೆ. ಬೆಂಗಳೂರಿನ M/s Citi Labs ಸಂಸ್ಥೆಯು ಅಧ್ಯಯನದ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದೆ. ಸುಮಾರು ಏಳು ತಿಂಗಳ ಅವಧಿಯಲ್ಲಿ ಅಧ್ಯಯನ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದ್ದು, ಪ್ರತಿಯೊಂದು ಹಂತದಲ್ಲೂ ಸ್ಥಳೀಯ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ.
ನಗರ ಅಭಿವೃದ್ಧಿಗೆ ಮಹತ್ವದ ಹೆಜ್ಜೆ;
ಪುತ್ತೂರಿನ ರಸ್ತೆ ವ್ಯವಸ್ಥೆ, ಸಂಚಾರ ನಿರ್ವಹಣೆ ಹಾಗೂ ಒಟ್ಟಾರೆ ನಗರ ಅಭಿವೃದ್ಧಿಗೆ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ನಗರಸಭೆ ವ್ಯಾಪ್ತಿಯ ರಸ್ತೆಗಳಿಗೆ ಸಂಬಂಧಿಸಿದ ನಿಖರವಾದ ಮಾಹಿತಿ ಲಭ್ಯವಾಗುವುದರಿಂದ ಭವಿಷ್ಯದ ಅಭಿವೃದ್ಧಿ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಯೋಜಿಸಲು ಸಾಧ್ಯವಾಗಲಿದೆ. ಅಲ್ಲದೆ, ನಗರ ಯೋಜನೆ ಮತ್ತು ಸಾರಿಗೆ ಅಭಿವೃದ್ಧಿಯನ್ನು ಮಾಸ್ಟರ್ ಪ್ಲಾನ್ಗೆ ಅನುಗುಣವಾಗಿ ಸಮನ್ವಯಗೊಳಿಸಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಭೆಯಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್, ಸದಸ್ಯರಾದ ಅನ್ವರ್ ಖಾಸಿಂ, ನಿಹಾಲ್ ಶೆಟ್ಟಿ, ನಗರಸಭೆ ಆಯುಕ್ತೆ ವಿದ್ಯಾ ಕಾಳೆ, ಪುತ್ತೂರು ಡಿವೈಎಸ್ಪಿ ಪ್ರಮೋದ್, ನಗರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಸುಹಾಸ್, DULT ಟೌನ್ ಪ್ಲಾನರ್ ಅಜಯಕೃಷ್ಣ ಉಪ್ಪಂಗಳ ಸೇರಿದಂತೆ DULT ಅಧಿಕಾರಿಗಳು ಹಾಗೂ ಸಲಹೆಗಾರರು ಆನ್ಲೈನ್ ಮೂಲಕ ಭಾಗವಹಿಸಿದ್ದರು. ಒಟ್ಟಿನಲ್ಲಿ ಪುತ್ತೂರಿನ ರಸ್ತೆ ವ್ಯವಸ್ಥೆಯ ಸಂಪೂರ್ಣ ಡಿಜಿಟಲ್ ನಕ್ಷೆ ಹಾಗೂ ಮುಂದಿನ 10 ವರ್ಷಗಳ ಅಭಿವೃದ್ಧಿಯ ಮಾರ್ಗಸೂಚಿ ಸಿದ್ಧಪಡಿಸುವ ಮೂಲಕ ಸಂಚಾರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಈ ಯೋಜನೆ ನೆರವಾಗುವ ನಿರೀಕ್ಷೆಯಿದೆ.










