







ಪುತ್ತೂರು: 25 ವರ್ಷಗಳ ಹಿಂದೆ ನೀಡಿದ್ದ ಚಿನ್ನವನ್ನು ವಾಪಸ್ ನೀಡುವಂತೆ ಕೇಳಿದ್ದಕ್ಕೆ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡು ವ್ಯಕ್ತಿಯೋರ್ವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಮುಡ್ನೂರು ಗ್ರಾಮದ ಆನೆಮಜಲಿನಲ್ಲಿ ನಡೆದಿದೆ.


ಮಂಗಳೂರಿನ ಬಿಜೈನಲ್ಲಿರುವ ಲಕ್ಷ್ಮೀ ಲಂಚ್ ಹೋಂನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಆನೆಮಜಲು ನಿವಾಸಿ ರವಿರಾಜ್ ಡಿ’ಸೋಜಾ(52)ರವರು ದಸರಾ ರಜೆ ಹಿನ್ನೆಲೆಯಲ್ಲಿ ಅ.18ರಂದು ತಮ್ಮ ಮನೆಗೆ ಬಂದಿದ್ದರು. ಅವಿವಾಹಿತರಾಗಿರುವ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ.’ಸುಮಾರು 25 ವರ್ಷಗಳ ಹಿಂದೆ ತನ್ನ ಅಣ್ಣ ರೆಮ್ಮಿ ಡಿ’ಸೋಜ ಅವರಿಗೆ ಸುಮಾರು 35 ಗ್ರಾಂ ತೂಕದ ಚಿನ್ನ ನೀಡಿದ್ದು, ಅದನ್ನು ಅಥವಾ ಅದರ ಮೌಲ್ಯದ ಹಣವನ್ನು ಹಲವು ಬಾರಿ ವಾಪಸ್ ಕೇಳಿದ್ದರೂ ನೀಡಿರಲಿಲ್ಲ.ಅ.18ರಂದು ಸಂಜೆ ಸುಮಾರು 5 ಗಂಟೆಗೆ ಮನೆಯ ಕಂಪೌಂಡ್ ಒಳಗಿನಿಂದ ಅಣ್ಣನಲ್ಲಿ, ಚಿನ್ನ ಅಥವಾ ಅದರ ಮೌಲ್ಯದ ಹಣವನ್ನು ವಾಪಸ್ ನೀಡುವಂತೆ ಕೇಳಿಕೊಂಡಿದ್ದೆ.ಈ ಸಂದರ್ಭದಲ್ಲಿ ಅಣ್ಣನ ಮಗ ರಾನ್ಸ್ ಡಿ’ಸೋಜ, ಅಕ್ಕ ಲೀನಾ ಡಿ’ಸೋಜ ಅವರ ಮಗ ರಾಕೇಶ್ ಡಿ’ಸೋಜ ಹಾಗೂ ರೋನಿತ್ ಡಿ’ಸೋಜ ಅವರು ಮನೆಯ ಕಂಪೌಂಡ್ ಒಳಗೆ ಅಕ್ರಮವಾಗಿ ಪ್ರವೇಶಿಸಿ, ತನ್ನನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ.ಬಳಿಕ ರಾನ್ಸ್ ಡಿ’ಸೋಜ ಮತ್ತು ರೋನಿತ್ ಡಿ’ಸೋಜ ಅವರು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡಾಗ, ರಾಕೇಶ್ ಡಿ’ಸೋಜ ಅವರು ಅಡಿಕೆ ಮರದ ಸಲಾಕೆಯಿಂದ ಬಲಗಾಲಿನ ಹಿಂಭಾಗಕ್ಕೆ ಹಾಗೂ ಎದೆಯ ಎಡಭಾಗಕ್ಕೆ ಹೊಡೆದಿದ್ದಾರೆ.ಬಳಿಕ ದೂಡಿ ಕೆಳಗೆ ಬೀಳಿಸಿ, ಎಡ ಕೆನ್ನೆಗೆ ಕಾಲಿನಿಂದ ತುಳಿದ ಪರಿಣಾಮ ಕಿವಿಯಿಂದ ರಕ್ತಸ್ರಾವವಾಗಿದೆ. ಗಾಯಗೊಂಡ ನಾನು ಬಳಿಕ 108 ಆ್ಯಂಬುಲೆನ್ಸ್ ಗೆ ಕರೆ ಮಾಡಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದೇನೆ” ಎಂದು ರವಿರಾಜ್ ಆರೋಪಿಸಿದ್ದಾರೆ.ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.













