








ಪುತ್ತೂರು: ಧಾರ್ಮಿಕ ಸೌಹಾರ್ದತೆಯ ದ್ಯೋತಕವಾದ ಅಧ್ಯಾಯವೊಂದು ಕರಾವಳಿಯ ಕಲೆ ಯಕ್ಷಗಾನದಲ್ಲಿ ಅನಾವರಗಣಗೊಂಡಿದೆ. ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಅ.20ರಂದು ನಡೆದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದಲ್ಲಿ ಹವ್ಯಾಸಿ ಕಲಾವಿದೆ ಅರ್ಷಿಯಾ ಖಾನ್ ಶ್ರೀದೇವಿ ಮಹಾತ್ಮೆ ಪ್ರಸಂಗದ ಪ್ರಮುಖ ಪಾತ್ರ ಅಷ್ಟಭುಜೆಯ ಜಗನ್ಮಾತೆ ದೇವಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕಲಾಪ್ರೇಮಿಗಳ ಮನ ಸೆಳೆದಿದ್ದಾರೆ. ಗುರುಮುಖೇನ ಯಕ್ಷಗಾನ ಅಭ್ಯಸಿಸಿರುವ ವಿಟ್ಲ ಮೂಲದ ಅರ್ಷಿಯಾ ಅವರು ಹಿಂದೆ ಮಹಿಷಾಸುರ ಸೇರಿದಂತೆ ಅನೇಕ ಪಾತ್ರ ನಿರ್ವಹಿಸಿ ಸೈ ಎನಿಸಿದ್ದರು. ಕದಳಿ ಕಲಾ ಕೇಂದ್ರದವರು ದಸರಾ ಅಂಗವಾಗಿ ಕದಳಿ ದಶಾಹ ಹೆಸರಿನಲ್ಲಿ ಆಯೋಜಿಸಿದ್ದ ಈ ಯಕ್ಷಗಾನದಲ್ಲಿ ಶ್ರೀದೇವಿಯಾಗಿ ಮಿಂಚಿದ ಅರ್ಷಿಯಾ ಅವರು ಕಲೆಗೆ ಜಾತಿ ಮತ್ತು ಧರ್ಮದ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.





6 ತಿಂಗಳಿನಿಂದ ಕಠಿಣ ವೃತಾಚರಣೆಯಲ್ಲಿದ್ದ ಅರ್ಷಿಯಾ:
ಯಕ್ಷಪ್ರಿಯೆ ಅರ್ಷಿಯಾ ಎಂದೇ ಖ್ಯಾತರಾಗಿರುವ ಅರ್ಷಿಯಾ ಖಾನ್ ಅವರು ನವರಾತ್ರಿ ಸಂದರ್ಭ ನಡೆದ ಶ್ರೀದೇವಿ ಮಹಾತ್ಮೆಯ ಯಕ್ಷಗಾನ ಪ್ರದರ್ಶನದಲ್ಲಿ ದೇವಿಯಾಗಿ ರಂಗಸ್ಥಳವೇರಲು ಆರು ತಿಂಗಳಿನಿಂದ ಕಠಿಣ ವೃತಾಚರಿಸಿದ್ದರು. ಯಕ್ಷಪ್ರಿಯೆ ತನು ವಿಟ್ಲ ಎಂದೇ ಚಿರಪರಿಚಿತರಾಗಿರುವ ಅರ್ಷಿಯಾ ಅವರು ಕದ್ರಿಯ ಕದಳಿ ಕಲಾ ಕೇಂದ್ರದ ವಿದ್ಯಾರ್ಥಿನಿಯಾಗಿದ್ದು ಕಳೆದ 12 ವರ್ಷಗಳಿಂದ ಯಕ್ಷಗಾನ ಪಾತ್ರಗಳನ್ನು ಮಾಡುತ್ತಿದ್ದಾರೆ. ಆದಿಮಾಯೆ, ಮಹಿಷಾಸುರ, ಶುಂಭ, ನಿಶುಂಭ ಮುಂತಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.




ಕಟೀಲು ದುರ್ಗಾಪರಮೇಶ್ವರಿಯ ಮೇಲಿನ ಭಕ್ತಿಯಿಂದಾಗಿ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ಈ ಬಾರಿ ನವರಾತ್ರಿಯ ಪರ್ವಕಾಲದಲ್ಲಿ ದೇವಿ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಯಕ್ಷಗುರು ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ಕಲಿತಿರುವ ಅರ್ಷಿಯಾ ಅವರು ಯಕ್ಷಗಾನ ರಂಗದಲ್ಲಿ ಹೆಣ್ಣು ಮಕ್ಕಳು ಪಾತ್ರ ನಿರ್ವಹಿಸುವುದೇ ವಿರಳವಾಗಿರುವ ಈ ದಿನಗಳಲ್ಲಿ ಬಣ್ಣ ಹಚ್ಚುವ ಮೂಲಕ ಮನೆ ಮಾತಾಗಿದ್ದಾರೆ. ಮುಸ್ಲಿಮ್ ಸಮುದಾಯದ ಪ್ರಥಮ ಯಕ್ಷಗಾನ ಕಲಾವಿದೆ ಎಂಬ ಹೆಗ್ಗಳಿಕೆ ಪಡೆದಿರುವ ಅರ್ಷಿಯಾ ಸಾಕ್ಷಾತ್ ಶ್ರೀದೇವಿಯ ಪಾತ್ರದಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ. ವಿಟ್ಲ ಸಮೀಪದ ಮಾಡ ಮೂಲದ ಅರ್ಷಿಯಾ ಅವರು ಕಟೀಲು ಹಾಗೂ ಪಾವಂಜೆ ಮೇಳ ಸೇರಿದಂತೆ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಜತೆ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನಿವೃತ್ತ ಉಪತಹಸೀಲ್ದಾರ್ ಅಬ್ದುಲ್ ಖಾದರ್ ಮತ್ತು ಮುಮ್ತಾಜ್ ದಂಪತಿಯ ಮಗಳಾಗಿರುವ ಆರ್ಷಿಯಾ ತಮ್ಮ ಮನೆಯ ಆಸುಪಾಸಿನಲ್ಲಿ ನಡೆಯುತ್ತಿದ್ದ ಯಕ್ಷಗಾನಗಳನ್ನು ನೋಡಿ ಆಕರ್ಷಿತರಾಗಿದ್ದರು. 4ನೇ ತರಗತಿಯಲ್ಲಿದ್ದಾಗ ತನ್ನ 9ನೇ ವಯಸ್ಸಿನಲ್ಲಿ ಯಕ್ಷಗಾನ ಕಲಿಯಲು ಆರಂಭಿಸಿದ್ದರು. ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಹಲವೆಡೆ ಅರ್ಷಿಯಾ ಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ.










