







ಪುತ್ತೂರು: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಬಳಕೆಗೆ ಕಾಯ್ದಿರಿಸಲಾದ ಜಮೀನನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ, ಮರಳಿ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು. ಈ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಗಳು ಮತ್ತೊಮ್ಮೆ ನಿರ್ಲಕ್ಷ್ಯ ತೋರಿದರೆ, ದೇವಸ್ಥಾನಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.


ವೇದಿಕೆಯ ಅಧ್ಯಕ್ಷ ಪ್ರಶಾಂತ್ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನದ ಜಮೀನಿಗೆ ಸಂಬಂಧಿಸಿದ ವಿವಾದ, ಅತಿಕ್ರಮಣ ತೆರವು ಹಾಗೂ ಇತ್ತೀಚೆಗೆ ದೇವಸ್ಥಾನದ ಮುಂಭಾಗದಲ್ಲಿ ನಡೆದ ಗಲಾಟೆ ಪ್ರಕರಣಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.



1993ರಲ್ಲೇ ದೇವಸ್ಥಾನದ ಬಳಕೆಗೆ 1.99 ಎಕರೆ ಕಾಯ್ದಿರಿಸಲಾಗಿತ್ತು
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ರಾಜ್ಯ ಹಾಗೂ ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದು, ಪ್ರತಿದಿನ ನೂರಾರು, ಸಾವಿರಾರು ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ. ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನ ‘ಎ’ ದರ್ಜೆಯ ದೇವಸ್ಥಾನವಾಗಿದೆ. ಕೊಕ್ಕಡ ಗ್ರಾಮದ ಸರ್ವೆ ನಂಬರ್ 215/1ರಲ್ಲಿ ದೇವಸ್ಥಾನಕ್ಕೆ ಸೇರಿದ 1.29 ಎಕರೆ ಜಮೀನಿದೆ. ಇದೇ ಸರ್ವೆ ನಂಬರಿನ ಹೆಚ್ಚುವರಿ 1.99 ಎಕರೆ ಜಮೀನನ್ನು ದೇವಸ್ಥಾನದ ಬಳಕೆಗಾಗಿ 1993ರಲ್ಲಿ ಅಂದಿನ ಸಹಾಯಕ ಆಯುಕ್ತರು ಕಾಯ್ದಿರಿಸಿದ್ದರು. ಈ ಜಮೀನು ದೇವಸ್ಥಾನದ ಎದುರು ಭಾಗದಲ್ಲಿದೆ. ಆದರೆ, ದೇವಸ್ಥಾನದ ಹೆಸರಿನಲ್ಲಿ ಕಾನೂನುಬಾಹಿರವಾಗಿ ಖಾಸಗಿ ಟ್ರಸ್ಟ್ವೊಂದು ಕಾರ್ಯಾಚರಿಸುತ್ತಿದ್ದು, ಅದರ ಅಧ್ಯಕ್ಷರಾಗಿರುವ ಕೃಷ್ಣ ಭಟ್ ಅವರ ನೇತೃತ್ವದಲ್ಲಿ ದೇವಸ್ಥಾನದ ಜಮೀನಿನ ವಿಚಾರದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬುದು ವೇದಿಕೆಯ ಆರೋಪವಾಗಿದೆ ಎಂದ ಪ್ರಶಾಂತ್ ರೈ ಅವರು 2004ರಲ್ಲಿ ಭಕ್ತರ ಸಹಕಾರದಿಂದ ದೇವಸ್ಥಾನದ ಬಳಕೆಗಾಗಿ ಪಕ್ಕದ 3.46 ಎಕರೆ ಜಮೀನನ್ನು ಖರೀದಿಸಲಾಗಿತ್ತು. ಈ ಜಮೀನನ್ನು ಖಾಸಗಿ ಟ್ರಸ್ಟ್ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಅಲ್ಲದೆ, 1993ರಲ್ಲಿ ದೇವಸ್ಥಾನದ ಬಳಕೆಗೆ ಕಾಯ್ದಿರಿಸಿದ ಜಮೀನಿನ ಒಂದು ಭಾಗವನ್ನು ಅತಿಕ್ರಮಿಸಿ ಅಂಗಡಿ ಕಟ್ಟಡಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡುವ ಮೂಲಕ ಅನಧಿಕೃತ ಆದಾಯ ಗಳಿಸಲಾಗುತ್ತಿದೆ ಎಂದು ಪ್ರಶಾಂತ್ ರೈ ಆರೋಪಿಸಿದರು.
ಎರಡು ದಿನಗಳ ಧರಣಿಯ ಬಳಿಕವೂ ಪರಿಹಾರ ಸಿಕ್ಕಿಲ್ಲ
ದೇವಸ್ಥಾನಕ್ಕೆ ಸೇರಿದ ಜಮೀನನ್ನು ಮರಳಿ ಪಡೆಯುವ ಉದ್ದೇಶದಿಂದ 2024ರ ಅಕ್ಟೋಬರ್ನಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯನ್ನು ರಚಿಸಲಾಯಿತು. ಬಳಿಕ 2024ರ ನವೆಂಬರ್ 11 ಮತ್ತು 12ರಂದು ಎರಡು ದಿನಗಳ ಧರಣಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಪುತ್ತೂರು ಸಹಾಯಕ ಆಯುಕ್ತರು ದೇವಸ್ಥಾನದ ಜಮೀನನ್ನು ಮರಳಿ ಹಸ್ತಾಂತರಿಸುವ ಭರವಸೆ ನೀಡಿದ್ದರು ಎಂದು ವೇದಿಕೆ ತಿಳಿಸಿದೆ. ಆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಅಂದಿನ ಮುಜರಾಯಿ ಸಚಿವರು, ರಾಜ್ಯ ಧಾರ್ಮಿಕ ದತ್ತಿ ಆಯುಕ್ತರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ. ತಹಶೀಲ್ದಾರ್ ಅವರ ಆದೇಶದಂತೆ ಜಮೀನಿನ ಅಳತೆ ಮತ್ತು ಸರ್ವೆ ನಡೆಸಿ, ದೇವಸ್ಥಾನದ ಬಳಕೆಗೆ ಕಾಯ್ದಿರಿಸಿದ ಜಮೀನನ್ನು ಗುರುತಿಸಲಾಗಿದೆ. ಅಂಗಡಿ ಕಟ್ಟಡಗಳು ಕಾಯ್ದಿರಿಸಿದ ಜಮೀನಿನ ವ್ಯಾಪ್ತಿಯಲ್ಲಿರುವುದು ಸರ್ವೆಯಿಂದ ದೃಢಪಟ್ಟಿದ್ದರೂ, ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಗಲಾಟೆ ಪ್ರಕರಣದ ತನಿಖೆ ಬಗ್ಗೆಯೂ ಅಸಮಾಧಾನ
ಅ.18ರಂದು ದೇವಸ್ಥಾನದ ಎದುರಿನ ಅಂಗಡಿ ಕಟ್ಟಡಗಳ ವ್ಯಾಪಾರಸ್ಥರ ನಡುವೆ ಗಲಾಟೆ ನಡೆದಿದ್ದು, ಸಾರ್ವಜನಿಕವಾಗಿ ಮಹಿಳೆಯರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಗಳಿವೆ. ಈ ಘಟನೆಯಿಂದ ದೇವಸ್ಥಾನದ ಘನತೆ ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದು, ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್ ಅವರು ತಿಳಿಸಿದರು. ಈ ಪ್ರಕರಣದಲ್ಲಿ ಸ್ಥಳದ ಅಧಿಕೃತ ಮಾಲೀಕರಲ್ಲದ ಖಾಸಗಿ ಟ್ರಸ್ಟ್ನ ಅಧ್ಯಕ್ಷರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಹಲ್ಲೆಗೊಳಗಾದವರು ಆಸ್ಪತ್ರೆಯಲ್ಲಿ ದೂರು ನೀಡಿದ್ದರೂ, ಅವರ ದೂರಿನ ಆಧಾರದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಅನ್ವಯ ಅಗತ್ಯವಿರುವ ಕಠಿಣ ಕಲಂಗಳನ್ನು ಅಳವಡಿಸದೆ ಎಫ್ಐಆರ್ ದಾಖಲಿಸಿರುವುದು ಖಂಡನೀಯ ಎಂದು ಅವರು ಆಕ್ಷೇಪಿಸಿದರು.
ಕಾಯ್ದಿರಿಸಿದ ಜಮೀನನ್ನಾದರೂ ಮರಳಿ ಹಸ್ತಾಂತರಿಸಿ
ಒಂದೆಡೆ ಭಕ್ತರ ಸಹಕಾರದಿಂದ ಖರೀದಿಸಲಾದ 3.46 ಎಕರೆ ಜಮೀನಿನ ಸ್ವಾಧೀನದ ವಿವಾದ, ಮತ್ತೊಂದೆಡೆ ದೇವಸ್ಥಾನದ ಬಳಕೆಗೆ ಕಾಯ್ದಿರಿಸಿದ ಜಮೀನಿನ ಅತಿಕ್ರಮಣ ಹಾಗೂ ಅಲ್ಲಿ ಅಂಗಡಿ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆ ಪಡೆಯುತ್ತಿರುವ ಆರೋಪಗಳಿವೆ. ಈ ಎಲ್ಲ ವಿಚಾರಗಳ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇಲಾಖೆಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವೇದಿಕೆ ದೂರಿದೆ.ಇತ್ತೀಚೆಗೆ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ ಹಾಗೂ ಮಹಿಳೆಯರ ಮೇಲಿನ ಹಲ್ಲೆಯ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಮುಜರಾಯಿ ಮತ್ತು ಕಂದಾಯ ಇಲಾಖೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ದೇವಸ್ಥಾನದ ಜಮೀನಿನ ವಿಚಾರದಲ್ಲಿ ಸಮಗ್ರ ಪರಿಶೀಲನೆ ನಡೆಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಕನಿಷ್ಠ ದೇವಸ್ಥಾನದ ಬಳಕೆಗೆ ಕಾಯ್ದಿರಿಸಲಾದ 1.99 ಎಕರೆ ಜಮೀನನ್ನಾದರೂ ಅತಿಕ್ರಮಣದಿಂದ ಮುಕ್ತಗೊಳಿಸಿ ದೇವಸ್ಥಾನಕ್ಕೆ ಮರಳಿ ಹಸ್ತಾಂತರಿಸಬೇಕು ಎಂದು ಪ್ರಶಾಂತ್ ರೈ ಒತ್ತಾಯಿಸಿದರು. ಈ ಬಾರಿಯೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ, ದೇವಸ್ಥಾನಕ್ಕೆ ನ್ಯಾಯ ದೊರೆಯುವವರೆಗೆ ಹಂತ ಹಂತವಾಗಿ ಹೋರಾಟ ನಡೆಸಲು ಸಂರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ಅವರು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಸಿಐಟಿಯು ಜಿಲ್ಲಾಧ್ಯಕ್ಷರು ಮತ್ತು ಸಂರಕ್ಷಣಾ ವೇದಿಕೆ ಕಾನೂನು ಸಲಹೆಗಾರ ಬಿ.ಎಂ. ಭಟ್ ಅವರು ಉಪಸ್ಥಿತರಿದ್ದರು.










