ರಾಮಕುಂಜ: ಪ್ರಾಂಶುಪಾಲ ಚಂದ್ರಶೇಖರ ಕೆ.ರವರಿಗೆ ಶಿಷ್ಯವೃಂದದಿಂದ ಚಂದ್ರಾಭಿನಂದನಾ, ನಿವೃತ್ತ ಉಪನ್ಯಾಸಕರಿಗೆ ಗುರುವಂದನೆ

0

ಶಿಕ್ಷಕರಿಂದಾಗಿ ಸನಾತನ ಪರಂಪರೆಯ ಜೀವನ ಮೌಲ್ಯ ಉಳಿದುಕೊಂಡಿದೆ; ಕ್ಯಾ| ಗಣೇಶ್ ಕಾರ್ಣಿಕ್

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ಸುದೀರ್ಘ 36 ವರ್ಷ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಅ.31ರಂದು ನಿವೃತ್ತಿ ಹೊಂದಲಿರುವ ಚಂದ್ರಶೇಖರ ಕೆ.ಅವರಿಗೆ ಶಿಷ್ಯವೃಂದದಿಂದ ಚಂದ್ರಾಭಿನಂದನಾ ಹಾಗೂ ಸದ್ರಿ ಕಾಲೇಜಿನಲ್ಲಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಉಪನ್ಯಾಸಕರಿಗೆ ಗುರುವಂದನೆ ಕಾರ್ಯಕ್ರಮ ಅ.25ರಂದು ಬೆಳಗ್ಗೆ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಅಭಿನಂದನಾ ಭಾಷಣ ಮಾಡಿದ ವಿಧಾನಪರಿಷತ್‌ನ ಮಾಜಿ ಮುಖ್ಯ ಸಚೇತಕರಾದ ಕ್ಯಾ| ಗಣೇಶ್ ಕಾರ್ಣಿಕ್ ಅವರು, ರಾಜ್ಯದಲ್ಲಿ ಕೆಜಿಯಿಂದ ಪಿಜಿ ತನಕ ಸರಿಸುಮಾರು 6 ಲಕ್ಷ ಶಿಕ್ಷಕರಿದ್ದಾರೆ. ಈ ಶಿಕ್ಷಕರು 1.5 ಕೋಟಿ ಮಕ್ಕಳಿಗೆ ಪ್ರತಿನಿತ್ಯ ಪಾಠ ಮಾಡುತ್ತಾರೆ. ಆದ್ದರಿಂದ ಶಿಕ್ಷಕರಿಂದ ಸಮಾಜದ ಬದಲಾವಣೆ ಸಾಧ್ಯವಿದೆ. ಸನಾತನ ಪರಂಪರೆಯ ಜೀವನ ಮೌಲ್ಯಗಳು ಉಳಿದುಕೊಂಡಿರುವುದು ಶಿಕ್ಷಕರಿಂದ. ಅವರು ಗೊತ್ತಿಲ್ಲದಂತೆ ರಾಷ್ಟ್ರ ನಿರ್ಮಾಣದ ಪುಣ್ಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಶಿಕ್ಷಕರು ಮೌಲ್ಯಗಳನ್ನು ಮಕ್ಕಳ ವ್ಯಕ್ತಿತ್ವದಲ್ಲಿ ಬಿಂಬಿಸುವ ಮೂಲಕ ಜವಾಬ್ದಾರಿಯುತ ನಾಗರಿಕ ಸಮಾಜದ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು. ಪ್ರಾಂಶುಪಾಲ ಚಂದ್ರಶೇಖರ ಅವರು 36 ವರ್ಷಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಿದ್ದಾರೆ. ಕೃತಜ್ಞತೆ ಮಾನವನ ವ್ಯಕ್ತಿತ್ವದಲ್ಲಿ ಅಡಕವಾಗಿರುವ ಅತ್ಯಂತ ದೊಡ್ಡ ಮೌಲ್ಯ ಆಗಿದೆ. ಚಂದ್ರಶೇಖರ ಅವರು ಅಪಾರ ವಿದ್ಯಾರ್ಥಿಗಳ, ಸಹೋದ್ಯೊಗಿಗಳ ಪ್ರೀತಿ ಸಂಪಾದಿಸಿದ್ದಾರೆ. ಇದು ಅವರಿಗೆ ಜೀವನಪೂರ್ತಿ ನೆನಪಿರುತ್ತದೆ ಎಂದು ಕ್ಯಾ| ಗಣೇಶ್ ಕಾರ್ಣಿಕ್ ಹೇಳಿದರು.

ಶಿಕ್ಷಣ ಸಂಸ್ಥೆಗಳಿಗೆ ಚಿರಋಣಿಗಳಾಗಿರಬೇಕು-ಶಕುಂತಳಾ ಶೆಟ್ಟಿ;
ಮುಖ್ಯ ಅತಿಥಿಗಳಾಗಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿನ ಸಂಸ್ಕಾರ, ಸಂಸ್ಕೃತಿ ಉಳಿಸಿಕೊಂಡ ಕೀರ್ತಿ ಚಂದ್ರಶೇಖರ ಅವರಿಗೆ ಬಂದಿದೆ. ಅವರು ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಅಭಿನಂದಿಸುತ್ತಿರುವುದು ಅತ್ಯುತ್ತಮ ಕಾರ್ಯ ಆಗಿದೆ ಎಂದರು. ಹೆತ್ತವರಿಗೆ, ಗುರುಗಳಿಗೆ, ಕಳಿಸಿದ ಶಿಕ್ಷಣ ಸಂಸ್ಥೆಗಳಿಗೆ ಎಂದಿಗೂ ಚಿರಋಣಿಗಳಾಗಿರಬೇಕು. ಚಂದ್ರಶೇಖರ ಅವರ ಜೊತೆಗೆ ಈ ಹಿಂದೆ ಸೇವೆ ಸಲ್ಲಿಸಿದ ಗುರುಗಳಿಗೂ ಗುರುವಂದನೆ ಸಲ್ಲಿಸಿರುವುದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ವೃತ್ತಿಯಿಂದ ನಿವೃತ್ತಿಯಾದರೂ ಮುಂದೆ ಚಂದ್ರಶೇಖರ ಅವರು ಜನರ ಮಧ್ಯೆ ಇರುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ನಿವೃತ್ತಿಯಾದರೂ ಸಾಮಾಜಿಕವಾಗಿ ತೊಡಗಿಕೊಳ್ಳಬೇಕು; ರಂಗಯ್ಯ ಶೆಟ್ಟಿಗಾರ್;
ಇನ್ನೋರ್ವ ಅತಿಥಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್ ಅವರು ಮಾತನಾಡಿ, ನನ್ನ ಶಿಷ್ಯನೂ ಆಗಿರುವ ಚಂದ್ರಶೇಖರ ಕೆ.ಅವರಿಗೆ ಅವರ ಶಿಷ್ಯವೃಂದದಿಂದ ಚಂದ್ರಾಭಿನಂದನಾ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ಹಾಗೂ ಹೆಮ್ಮೆಯೂ ತಂದಿದೆ. 36 ವರ್ಷ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಚಂದ್ರಶೇಖರ ಕೆ.ಅವರು ಹಲವಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪ ಆದವರು. ಅವರಿಂದ ಶಿಕ್ಷಣ ಪಡೆದವರು ಈಗ ಉನ್ನತ ಸ್ಥರದಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ. ಈ ತನಕ ಆಕ್ಟೀವ್ ಆಗಿದ್ದ ಚಂದ್ರಶೇಖರ ಅವರು ನಿವೃತ್ತಿಯ ಬಳಿಕ ಸೈಲೆಂಟ್ ಮೋಡ್‌ಗೆ ಹೋಗದೇ ಸಾಮಾಜಿಕವಾಗಿ ತೊಡಗಿಕೊಳ್ಳಬೇಕೆಂದು ಹೇಳಿದರು.

ವಿದ್ಯಾರ್ಥಿಗಳ ಪರವಾದ ಪ್ರಾಂಶುಪಾಲರು-ಸೇಸಪ್ಪ ರೈ;
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕೋಶಾಧಿಕಾರಿ ಕೆ.ಸೇಸಪ್ಪ ರೈ ಅವರು ಮಾತನಾಡಿ, ಚಂದ್ರಶೇಖರ ಅವರು ವಿದ್ಯಾರ್ಥಿಗಳ ಪರವಾದ ಪ್ರಾಂಶುಪಾಲರು. ಅವರಿಗೆ ವಿದ್ಯಾರ್ಥಿಗಳ ಜೊತೆಗೆ ಹೆಚ್ಚಿನ ಒಡನಾಟವಿತ್ತು. ಅದರ ಪ್ರತಿಫಲ ಇಂದು ಅವರಿಗೆ ದೊರೆತಿದೆ. ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿಯೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯುತ್ತಿದ್ದಾರೆ. ಚಂದ್ರಶೇಖರ ಅವರು ನಿವೃತ್ತಿಯ ಬಳಿಕವೂ ಪಾದರಸದಂತೆ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಹೊಸ ಚಿಗುರಿನಂತೆ ಬೆಳೆಯಬೇಕೆಂದು ಹೇಳಿದರು.

ಚಂದ್ರಶೇಖರ ಅವರ ಸೇವೆ ಮುಂದೆಯೂ ಸಂಸ್ಥೆಗೆ ಬೇಕು-ರಾಧಾಕೃಷ್ಣ ಕೆ.ಎಸ್.;
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಅವರು ಮಾತನಾಡಿ, ರಾಮಕುಂಜೇಶ್ವರ ಪ.ಪೂ.ಕಾಲೇಜಿಗೆ ಈ ಹಿಂದೆ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಉಪನ್ಯಾಸಕರಿಂದ ಉತ್ತಮ ಹೆಸರು ಬಂದಿದೆ. ಅದೇ ರೀತಿ ಈಗ ಪ್ರಾಂಶುಪಾಲರಾಗಿ ನಿವೃತ್ತಿ ಅಂಚಿನಲ್ಲಿರುವ ಚಂದ್ರಶೇಖರ ಕೆ.ಅವರು ಮಕ್ಕಳ ಸಮಗ್ರ ಬೆಳವಣಿಗೆಗೆ ಕಾರಣಕರ್ತರಾದವರು. ಈ ವಿದ್ಯಾಸಂಸ್ಥೆಯ ಬೆಳವಣಿಗೆಯಲ್ಲೂ ಚಂದ್ರಶೇಖರ ಅವರ ಪಾತ್ರ ಮಹತ್ವದ್ದಾಗಿದೆ. ಅವರು ಉಪನ್ಯಾಸಕರಾಗಿರುವುದರಿಂದಲೇ ಹಲವು ಪೋಷಕರು ತಮ್ಮ ಮಕ್ಕಳನ್ನು ಈ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ವಿಭಾಗಕ್ಕೆ ಸೇರಿಸುತ್ತಿದ್ದರು. ಅವರು ತನ್ನ ಶಿಷ್ಯರಿಗೆ ಸಂತೃಪ್ತ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು. ಚಂದ್ರಶೇಖರ ಅವರ ಉಪನ್ಯಾಸಕರಾಗಿರುವ ವಾಣಿಜ್ಯ ವಿಭಾಗಕ್ಕೆ ಸತತವಾಗಿ ಶೇ.100 ರಷ್ಟು ಫಲಿತಾಂಶ ಬರುತ್ತಿದೆ. ಅವರು ಪ್ರಾಂಶುಪಾಲರಾದ ಬಳಿಕ ಕಾಲೇಜಿನ ಫಲಿತಾಂಶ ಪ್ರತಿವರ್ಷವೂ ಶೇ.98ಕ್ಕಿಂತ ಮೇಲೆ ಬರುತ್ತಿದೆ. ಚಂದ್ರಶೇಖರ ಅವರಂತಹ ಉಪನ್ಯಾಸಕರಿದ್ದಾಗ ಸಂಸ್ಥೆಯ ಸೇವೆ ಉನ್ನತಮಟ್ಟಕ್ಕೆ ತಲುಪಲಿದೆ. ನಿವೃತ್ತಿ ಬಳಿಕವೂ ಅವರ ಸೇವೆ ಈ ಶಿಕ್ಷಣ ಸಂಸ್ಥೆಗೆ ಬೇಕು. ಹಿರಿಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಮೇಲಿಟ್ಟಿರುವ ಪ್ರೀತಿಗೆ ಆಡಳಿತ ಮಂಡಳಿ ಚಿರಋಣಿಯಾಗಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಕೆ.ಅವರು, ಈ ಹಿಂದೆ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿದ್ದ ವೇದವ್ಯಾಸ ಆಚಾರ್ ಅವರು ಯಾವುದೇ ದಾಖಲೆ ಪತ್ರ ಕೇಳದೇ ಸಂಸ್ಥೆಗೆ ಉದ್ಯೋಗಕ್ಕೆ ಸೇರ್ಪಡೆಗೊಳಿಸಿದ್ದರು. ಇಜ್ಜಾವು ಸುಬ್ರಾಯರು ದೇವಸ್ಥಾನದ ಗೋಪುರದ ಕೊಠಡಿಯಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರು ಎಂಬುದನ್ನು ನೆನಪಿಸಿಕೊಂಡು, ನಾನು ಜಗತ್ತಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿಯಾಗಿದ್ದೇನೆ. ಈ ತನಕ ವಾಣಿಜ್ಯ ವಿಭಾಗದ 3058 ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ. ಈ ಎಲ್ಲಾ ವಿದ್ಯಾರ್ಥಿಗಳು ಸಮಾಜದಲ್ಲಿ ಅತ್ಯುತ್ತಮ ಸ್ಥಾನ ಗಳಿಸಿಕೊಂಡಿದ್ದಾರೆ. ಉಪನ್ಯಾಸಕನಾಗಿ ಮಕ್ಕಳಿಗೆ ಸಚ್ಚಾರಿತ್ರ್ಯ, ರಾಷ್ಟ್ರೀಯತೆ ಬಗ್ಗೆ ಈಗಾಲೂ ಬೋಧನೆ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳಲ್ಲಿ ಎಂದಿಗೂ ತಾರತಮ್ಯ ಮಾಡಿಲ್ಲ. ಜೀವನದಲ್ಲಿ ೧ ಕೋಟಿ ರೂ.ಆಸ್ತಿ ಸಂಪಾದನೆ ಮಾಡದೇ ಇದ್ದರೂ ಹಲವು ಶಿಷ್ಯರು ಕೋಟ್ಯಾಧಿಪತಿಗಳಿದ್ದಾರೆ. ರಾಜಕೀಯವಾಗಿಯೂ ಗುರುತಿಸಿಕೊಂಡಿರುವುದು ಹೆಮ್ಮೆ ತಂದಿದೆ. ಇಂತಹ ಶಿಷ್ಯರಿಂದ ದೊರೆತಿರುವ ಪ್ರೀತಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಸಮಾನ ಎಂದು ಹೇಳಿದ ಚಂದ್ರಶೇಖರ ಅವರು, ಕುಟುಂಬಸ್ಥರೂ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಂಡರು.

ಚಂದ್ರಶೇಖರ ಕೆ.ಅವರ ಪತ್ನಿ, ಕಲ್ಲಡ್ಕ ಶ್ರೀ ರಾಮ ಪ್ರೌಢಶಾಲೆಯ ಹಿರಿಯ ಪದವೀಧರ ಸಹಶಿಕ್ಷಕಿ ಸೌಮ್ಯ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕೊಯಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿಗಳಾದ ಸಮರ್ಥ ನಿಧಿ ಲಿಮಿಟೆಡ್‌ನ ನವೀನ್ ಕೆ., ಸಹಕಾರ ಇಲಾಖೆಯ ಹಿರಿಯ ಲೆಕ್ಕಪರಿಶೋಧಕರಾದ ಹಂಝ ಹಳೆನೇರೆಂಕಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ವ್ಯವಸ್ಥಾಪಕಿ ಆಶಾಲತಾ, ಜಾನ್ ಜೋಸೆಫ್ ಚೆನ್ನೈ, ನವೀನ್ ಶೆಟ್ಟಿ ನೇಲಡ್ಕ, ಗಣೇಶ್ ಕಟ್ಟಪುಣಿ, ಭಾಗೀರಥಿ, ಕರುಣಾಕರ ದೊಡ್ಡ ಉರ್ಕ, ದೀಪಕ್ ಕೀಳೆ ಕಾಣಿಯೂರು, ಅಶ್ವತ್ ಸಾಂತ್ಯ, ಫಾರೂಕ್ ಅಮೈ ಅವರು ಅತಿಥಿಗಳಿಗೆ ಗುಲಾಬಿ ಹೂ, ಶಾಲು ಹಾಕಿ ಗೌರವಿಸಿದರು. ಚಂದ್ರಾಭಿನಂದನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಬಾರಿಂಜ ವಂದಿಸಿದರು. ಕೋಶಾಧಿಕಾರಿ ಲೋಕನಾಥ ರೈ ಕೇಳ್ಕ ನಿರೂಪಿಸಿದರು. ಇಂಚರ ಮ್ಯೂಸಿಕಲ್ಸ್ ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಹಿರಿಯ ವಿದ್ಯಾರ್ಥಿಗಳು, ಚಂದ್ರಶೇಖರ ಕೆ.ಅವರ ಹಿತೈಷಿಗಳು, ಕುಟುಂಬಸ್ಥರು, ಶಾಲೆಯ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗ್ಗೆ ಕಾಲೇಜು ಕಚೇರಿಯಿಂದ ಸಭಾಂಗಣದವರೆಗೆ ಅತಿಥಿಗಳನ್ನು ಚೆಂಡೆಯೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಮಧ್ಯಾಹ್ನ ಸಹಭೋಜನ ನಡೆಯಿತು.

ದೀಪ ಪ್ರಜ್ವಲನೆ;
ಬೆಳಗ್ಗೆ ದೀಪ ಪ್ರಜ್ವಲಿಸಿ ಮಾತನಾಡಿದ ವಿಶ್ರಾಂಶ ಪ್ರಾಂಶುಪಾಲ ಎಂ.ಸತೀಶ್ ಭಟ್ ಅವರು, ಭಾರತೀಯ ಪರಂಪರೆಯಲ್ಲಿ ಗುರುಶಿಷ್ಯರ ಸಂಬಂಧಕ್ಕೆ ಹೆಚ್ಚಿನ ಮಹತ್ವವಿದೆ. ಗುರುಶಿಷ್ಯರ ಸಂಬಂಧವನ್ನು ಪ್ರಪಂಚಕ್ಕೆ ಪರಿಯಚಿಸಿಕೊಟ್ಟಿರುವ ದೇಶ ಭಾರತ ಆಗಿದೆ. ಇದೊಂದು ನಿರೀಕ್ಷೆಯೇ ಮಾಡಲು ಆಗದಂತಹ ಕಾರ್ಯಕ್ರಮವಾಗಿದೆ. ಅ.೩೧ರಂದು ನಿವೃತ್ತರಾಗಲಿರುವ ಸಮರ್ಥ ಪ್ರಾಂಶುಪಾಲರಾಗಿದ್ದ ಚಂದ್ರಶೇಖರ ಕೆ.ಅವರಿಗೆ ಹಿರಿಯ ವಿದ್ಯಾರ್ಥಿಗಳು, ಶಿಷ್ಯವೃಂದದಿಂದ ನಡೆಯುವ ಚಂದ್ರಾಭಿನಂದನೆ ಹಾಗೂ ನಿವೃತ್ತ ಉಪನ್ಯಾಸಕರಿಗೆ ನಡೆಯುವ ಗುರುವಂದನೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ನಿವೃತ್ತ ಉಪನ್ಯಾಸಕರಿಗೆ ಗುರುವಂದನೆ
ನಿವೃತ್ತ ಉಪನ್ಯಾಸಕ, ವಿಶ್ರಾಂತ ಪ್ರಾಂಶುಪಾಲರೂ ಆದ ಎಂ.ಸತೀಶ್ ಭಟ್, ನಿವೃತ್ತ ಉಪನ್ಯಾಸಕರಾದ ಹರಿನಾರಾಯಣ ಆಚಾರ್ಯ ಹಾಗೂ ವಸಂತಕುಮಾರ ಡಿ.ಅವರ‍್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಪ್ರಕಾಶ್ ಬಾಕಿಲ, ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಎ.ಸಿ.ಬಾಲಕೃಷ್ಣ ಏಣಿತ್ತಡ್ಕ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ ಅವರು ಸನ್ಮಾನಿತರನ್ನು ಪರಿಚಯಿಸಿದರು.

ಚಂದ್ರಾಭಿನಂದನೆ;
ಪ್ರಾಂಶುಪಾಲ ಚಂದ್ರಶೇಖರ ಕೆ.ಹಾಗೂ ಅವರ ಪತ್ನಿ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಹಿರಿಯ ಪದವೀಧರ ಶಿಕ್ಷಕಿಯಾಗಿರುವ ಸೌಮ್ಯ ಅವರನ್ನು ಶಿಷ್ಯವೃಂದದಿಂದ ಸನ್ಮಾನಿಸಿ ಗೌರವಿಸಲಾಯಿತು. ಬೃಹತ್ ಸನ್ಮಾನ ಪತ್ರ, ಶಾಲು, ಪೇಟ, ಹಾರ, ನೆನಪಿನ ಕಾಣಿಕೆ ನೀಡಿ ಚಂದ್ರಶೇಖರ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಚಂದ್ರಶೇಖರ-ಸೌಮ್ಯ ದಂಪತಿ ಪುತ್ರಿಯರಾದ ವಾಸವಿ, ಅನಿಖಾ ಅವರು ಉಪಸ್ಥಿತರಿದ್ದರು. ಚಂದ್ರಶೇಖರ ಕೆ.ಅವರ ಶಿಷ್ಯರೂ ಆದ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಶರವೂರು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ| ಹೇಮಂತ ರೈ ಅವರು ಸನ್ಮಾನ ಪತ್ರ ವಾಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ;
ಬೆಳಗ್ಗೆ ವಿದುಷಿ ಪ್ರಮೀಳಾ ಲೋಕೇಶ್ ಶಿಷ್ಯವೃಂದದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಸುಬ್ರಹ್ಮಣ್ಯ ಕಾರಂತ ಸಾರಥ್ಯದ ಇಂಚರ ಮ್ಯೂಸಿಕಲ್ಸ್ ತಂಡ ರಾಮಕುಂಜ ಇವರಿಂದ ರಸಮಂಜರಿ ನಡೆಯಿತು.


ಶಿಷ್ಯರಿಂದ ಅನಿಸಿಕೆ;
ಚಂದ್ರಶೇಖರ ಕೆ.ಅವರ ಶಿಷ್ಯರೂ ಆದ ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಫಲೂಲುದ್ದೀನ್ ಹೇಂತಾರ್, ಮೆಸ್ಕಾಂ ಸಹಾಯಕ ಲೆಕ್ಕಾಧಿಕಾರಿಯಾಗಿರುವ ಕೃಷ್ಣಮೂರ್ತಿ ಕೆಮ್ಮಾರ, ಬೆಂಗಳೂರಿನಲ್ಲಿ ಚಾರ್ಟಡ್ ಎಕೌಂಟೆಂಟ್ ಆಗಿರುವ ಪ್ರದೀಪ್ ಮೇರುಗುಡ್ಡೆ, ವಿವೇಕಾನಂದ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ದೇವಿಪ್ರಸಾದ್ ಹಳೆನೇರೆಂಕಿ, ಕಸ್ವಿ ಹಸಿರು ದಿಬ್ಬಣದ ಕೇಶವ ರಾಮಕುಂಜ, ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಯತೀಂದ್ರ, ಪೆರಾಬೆ ಗ್ರಾ.ಪಂ.ಗ್ರಂಥಾಲಯದ ಮೇಲ್ವಿಚಾರಕಿ ಜಯಕುಮಾರಿ, ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಜ್ಯೋತಿ ಕೆ.ಅವರು ಅನಿಸಿಕೆ ವ್ಯಕ್ತಪಡಿಸಿ ಶುಭಹಾರೈಸಿದರು. ಹಿರಿಯ ವಿದ್ಯಾರ್ಥಿಗಳಾದ ಕೃಷ್ಣಮೂರ್ತಿ ಕೆಮ್ಮಾರ, ಗುರುಕಿರಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here