







ಯೋಗ ಋಷಿ ಮುನಿಗಳು ನೀಡಿರುವ ಅಮೂಲ್ಯ ಆಸ್ತಿ: ಸುಬ್ರಮಣ್ಯ ನಟ್ಟೋಜ


ಪುತ್ತೂರು: ಭಾರತ ದೇಶದ ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರ ಮೂಲಕ ಸನಾತನ ಧರ್ಮವನ್ನು ಉಳಿಸಬೇಕು. ಜ್ಞಾನವೆಂಬುದು ದೊಡ್ಡ ಆಸ್ತಿ. ಈ ಆಸ್ತಿಯನ್ನು ನಮ್ಮ ಹಿರಿಯರ ಮೂಲಕ, ಜ್ಞಾನಿಗಳ ಮೂಲಕ ಸಂಪಾದಿಸಿಕೊಳ್ಳಬೇಕು, ಇದರಲ್ಲಿ ಯೋಗ ಅನ್ನುವುದು ಅಮೂಲ್ಯ ಆಸ್ತಿಯಾಗಿದೆ ಎಂದು ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದರು.



ಅವರು ಇತ್ತೀಚೆಗೆ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಹಠ ಯೋಗ ಶಿಬಿರ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಗವೆಂಬುದು ಸನಾತನ ಕಾಲದಿಂದಲೇ ಋಷಿ ಮುನಿಗಳು ಮಾಡಿದ ಅಮೋಘ ಸಾಧನೆಯಾಗಿದೆ. ಅವರಿಂದ ಬಂದಿರುವ ಅಮೂಲ್ಯವಾದ ಆಸ್ತಿ. ಸನಾತನ ಹಿಂದೂ ಧರ್ಮದ ಅವಕಾಶಗಳನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕಬೇಕು. ದೇಶದ ರಕ್ಷಣೆ ಯೋಗದ ರಕ್ಷಣೆ ನಾವೆಲ್ಲ ಮಾಡಬೇಕಿದೆ. ಹಾಗಾಗಿ ಭಾರತೀಯರಾದ ನಾವು ಅನುಷ್ಠಾನದಲ್ಲಿ ಭಾರತೀಯರಾಗಬೇಕು. ಆ ಮೂಲಕ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ನಮ್ಮಿಂದ ಆಗಬೇಕು ಎಂದರು.
ಮುಖ್ಯ ಅತಿಥಿ ಹಠ ಯೋಗ ಶಿಬಿರದ ಯೋಗ ಗುರು ಹಾಗೂ ಇಂಡಿಯನ್ ಯೋಗ ಅಸೋಸಿಯೇಷನ್ನ ಅಜೀವ ಸದಸ್ಯರಾದ ಜಿಜ್ಞಾಸು ವಾಸುದೇವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಠಯೋಗದ ಮೂಲ ತತ್ವಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸುತ್ತಾ ಅನುಭವಾತ್ಮಕ ನುಡಿಗಳನ್ನಾಡಿದರು. ಯೋಗಕ್ಕೆ ಮೊದಲು ರೋಗದ ಬಗ್ಗೆ ತಿಳುವಳಿಕೆ ಇರಬೇಕು, ಮನೋದೈಹಿಕ ಕಾಯಿಲೆಗಳನ್ನು ನೋಡಿದಾಗ ಆ ಕಾಯಿಲೆಗಳು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದೆ. ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಪಡೆಯಲು ಯೋಗ ಬೇಕು. ದೇಹದಲ್ಲಿ ಜೀವ ಶಕ್ತಿ ಹೆಪ್ಪುಗಟ್ಟಿದಾಗ ರೋಗಗಳು ಬರುತ್ತವೆ. ಇದಕ್ಕೆ ಉತ್ತೇಜನ – ವಿಶ್ರಾಂತಿ ನೀಡಬೇಕು. ಜೀವದ ಅತ್ಯಂತ ಮೂಲಭೂತ ಲಕ್ಷಣ ಮಿಡಿಯುವಿಕೆ. ಮನುಷ್ಯನಲ್ಲಿ ಜೀವಂತಿಕೆಯ ಮಟ್ಟವನ್ನು ಹೆಚ್ಚಿಸುವುದಕ್ಕೆ ಯೋಗ ಮೂಲ ವ್ಯವಸ್ಥೆಯಾಗಿದೆ. ಆದುದರಿಂದ ಪ್ರತಿಯೊಬ್ಬರೂ ಸಮಗ್ರ ದೈಹಿಕ, ಮಾನಸಿಕ ಸ್ವಾಸ್ತ್ಯಕ್ಕೆ ಯೋಗ ಒಂದು ಪ್ರಮುಖ ಔಷಧಿಯಾಗಿದೆ ಎಂದರು.
ಕಾರ್ಯಕ್ರಮದ ಬಳಿಕ ಹಠ ಯೋಗದಲ್ಲಿ ಬರುವ ಉಜ್ಜಾಯಿ ಪ್ರಾಣಾಯಾಮ ಪ್ರಾತ್ಯಕ್ಷಿಕೆ ನಡೆಸಲಾಯಿತು. ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಶಿಬಿರದ ಸಹಾಯಕ ಗುರು ಮೇಘಶ್ರೀ ಉಪಸ್ಥಿತರಿದ್ದರು. ಭೌತಶಾಸ್ತ್ರ ಉಪನ್ಯಾಸಕಿ ವರ್ಷಾ ಮೊಳೆಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










