ಪುತ್ತೂರು ವಾಣಿಜ್ಯ, ಕೈಗಾರಿಕಾ ಸಂಘದ ವಾರ್ಷಿಕ ಮಹಾಸಭೆ

0

ಉದ್ಯಮಗಳು ಬೆಳೆದಲ್ಲಿ ದೇಶ ಅಭಿವೃದ್ಧಿಯಾಗಲಿದೆ-ಶಾಸಕ ಅಶೋಕ್ ರೈ

ಪುತ್ತೂರು:ಉದ್ಯಮಿಗಳು ದೇಶದ ಬೆನ್ನೆಲುಬು, ಉದ್ಯಮಿಗಳು ತೆರಿಗೆ ಕಟ್ಟುತ್ತಾರೆ ಆದರೆ ಅವರಿಗೆ ಯಾವ ಲಾಭ ಸಿಗುತ್ತದೆ. ಸರಿಯಾಗಿ ತೆರಿಗೆ ಕಟ್ಟಿದವನಿಗೆ ಮತ್ತೇ ಸಂಕಷ್ಟ. ಇದು ನಮ್ಮ ದೇಶದ ದುರಾದೃಷ್ಟ. ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಆದಾಯ ತೆರಿಗೆ ಕಟ್ಟುವ ಉದ್ಯಮಿಗಳಿಗೆ ಏನಿದೆ? ಇದನ್ನು ನಾವು ಇಂದು ಪ್ರಶ್ನಿಸಬೇಕಾಗಿದೆ. ಆಮೇರಿಕಾದಲ್ಲಿ ಆರೋಗ್ಯದಲ್ಲಿನ ಸಮಸ್ಯೆಗೆ ಉದ್ಯಮಿಗೆ ಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತದೆ, ನಮ್ಮಲ್ಲಿ ಯಾಕಿಲ್ಲ?. ನಮ್ಮಲ್ಲಿ ಕಪ್ಪು ಹಣ ನಿಂತಿದಿಯಾ. ಕಪ್ಪುಹಣವನ್ನು ನಿಯಂತ್ರಿಸಲು ಸಾಧ್ಯವಿದೆಯಾ?. ಉದ್ಯಮಗಳು ಬೆಳೆದಲ್ಲಿ ದೇಶ ಅಭಿವೃದ್ಧಿಯಾಗಲಿದೆ. ಒಟ್ಟಾರೆ ನನ್ನ ಕನಸು ಪುತ್ತೂರಿನ ಅಭಿವೃದ್ಧಿಯೊಂದೇ ಎಂದು ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.


ಅ.25 ರಂದು ರೋಟರಿ ಮನಿಷಾ ಸಭಾಂಗಣದಲ್ಲಿ ಸಂಜೆ ಜರಗಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ೪೬ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪುತ್ತೂರಿನ ಸುಮಾರು ಏಳೆಂಟು ಸಮಾಜ ಬಾಂಧವರು ತಮಗೆ ಸ್ವಂತ ನಿವೇಶನ ಕೇಳಿಕೊಂಡಾಗೆ ಅವರಿಗೆ ಸ್ವಂತ ನಿವೇಶನವನ್ನು ಗುರುತಿಸಿಕೊಂಡಿರುತ್ತೇನೆ. ಪುತ್ತೂರು ವರ್ತಕ ಸಂಘದವರೂ ಸರಿಯಾದ ಜಾಗವನ್ನು ತಿಳಿಸಿದಲ್ಲಿ ಅದನ್ನು ಸರಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇನೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ತರುವಲ್ಲಿ ನಾನು ಎಷ್ಟು ಶ್ರಮ ಪಟ್ಟಿದ್ದೇನೆ ಎಂಬುದು ಎಲ್ಲರಿಗೆ ಗೊತ್ತು. ವರ್ತಕ ಸಂಘದವರೂ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ನನಗಲ್ಲ, ನನ್ನ ಪುತ್ತೂರಿನ ಜನತೆಗೆ. ಪುತ್ತೂರಿನಲ್ಲಿ ಉದ್ಯಮ ಕೇಂದ್ರಗಳು ಬರಬೇಕು, ಈ ನಿಟ್ಟಿನಲ್ಲಿ ಹಲವರಿಗೆ ಉದ್ಯೋಗ ಸಿಗುವಂತಾಗಬೇಕು, ಪುತ್ತೂರು ಟೂರಿಸಂ ಕೇಂದ್ರವಾಗಿ ಬೆಳೆಯಬೇಕು ಎಂದರು.


ಸಂಘದಲ್ಲಿನ ಸಾಮರಸ್ಯ ಶ್ಲಾಘನೀಯ-ರವಿಕೃಷ್ಣ ಕಲ್ಲಾಜೆ:
ಅಧ್ಯಕ್ಷತೆ ವಹಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ.ಕಲ್ಲಾಜೆ ಮಾತನಾಡಿ, ಒಂದು ವರ್ಷದ ಅಧ್ಯಕ್ಷೀಯ ಪಯಣದಲ್ಲಿ ಸಂಘದ ಸದಸ್ಯರನ್ನು ಒಗ್ಗೂಡಿಸಿ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ ಹೆಮ್ಮೆಯಿದೆ. ವರ್ತಕರ ಉದ್ಯಮದ ಅಭಿವೃದ್ಧಿಗೋಸ್ಕರ ಮೂರು ತಿಂಗಳ ಶಾಪಿಂಗ್ ಹಬ್ಬದಲ್ಲಿ ಸಂಘಕ್ಕೆ ರೂ.ಮೂರು ಲಕ್ಷ ಲಾಭ ಬಂದಿದೆ. ಸಂಘಕ್ಕೆ ಸ್ವಂತ ನಿವೇಶನಗೋಸ್ಕರ ಈಗಾಗಲೇ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದೇವೆ ಮಾತ್ರವಲ್ಲ ಈಗಾಗಲೇ ಮೂರ್ನಾಲ್ಕು ಕಡೆ ೯ ರಿಂದ ೧೩ ಸೆಂಟ್ಸ್ ಜಾಗವನ್ನು ನೋಡಿದ್ದೇವೆ. ಪುತ್ತೂರನ್ನು ಸ್ಮಾರ್ಟ್ ಪುತ್ತೂರನ್ನಾಗಿಸಬೇಕು ಎಂದು ಶಾಸಕರಲ್ಲಿ ಮಾತಾನಾಡಿದ್ದೇವೆ. ವಂದೇಮಾತರಂ ಎಕ್ಸ್‌ಪ್ರೆಸ್ ರೈಲು ಪುತ್ತೂರಿನಲ್ಲಿ ನಿಲ್ಲಿಸಬೇಕೆನ್ನುವ ಮನವಿಯನ್ನು ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿದ್ದು, ರೈಲ್ವೇ ಸಚಿವರು ನಮಗೆ ಹಿಂಬರಹದ ಪ್ರತಿಯನ್ನು ಕಳುಹಿಸಿದ್ದಾರೆ ಎಂದ ಅವರು ಉದ್ಯಮ ಕ್ಷೇತ್ರದಲ್ಲಿ ಎಲ್ಲಾ ಜಾತಿ-ದರ್ಮದವರು, ಬೇರೆ ಬೇರೆ ಪಕ್ಷದವರಿದ್ದು ನಮ್ಮಲ್ಲಿ ಸಾಮರಸ್ಯವಿರುವುದು ಶ್ಲಾಘನೀಯ. ಮುಂದಿನ ಅವಧಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ ತನ್ನ ಅವಧಿಯಲ್ಲಿ ಸಹಕರಿಸಿದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈರವರಿಗೆ ಕಿರು ಕಾಣಿಕೆ ನೀಡಿ ಗೌರವಿಸಿದರು.


ವ್ಯಾಪಾರಸ್ಥ-ಗ್ರಾಹಕ ಉತ್ತಮ ಸಂಬಂಧವಿದ್ದಲ್ಲಿ ಯಶಸ್ಸು-ಸುದರ್ಶನ್ ರಾವ್:
ಪುತ್ತೂರು ವಾರ್ಡ್ 1ರ ಆದಾಯ ತೆರಿಗೆ ಅಧಿಕಾರಿ ಸುದರ್ಶನ್ ರಾವ್ ಕೆ.ಮಾತನಾಡಿ, ವ್ಯಾಪಾರಸ್ಥರು ಕೇವಲ ಉದ್ಯೋಗ ಮಾಡುವುದಲ್ಲ, ಬದಲಾಗಿ ಹಲವರಿಗೆ ಉದ್ಯೋಗ ನೀಡಿ ಉದ್ಯೋಗದಾತರಾಗುವ ಮೂಲಕ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ವ್ಯಾಪಾರಸ್ಥರು ತಮ್ಮ ಸರಕಾರಕ್ಕೆ ಕಾಲಕಾಲಕ್ಕೆ ತೆರಿಗೆಯನ್ನು ಪಾವತಿ ಮಾಡಿ. ವ್ಯಾಪಾರರಸ್ಥರು ಗ್ರಾಹಕರಲ್ಲಿ ವಿನಯತೆ, ವಿಶ್ವಾಸ, ಉತ್ತಮ ಸಂಬಂಧ ಮೂಡಿಸಿದಾಗ ವ್ಯಾಪಾರ ವೃದ್ಧಿಯಾಗುತ್ತದೆ ಎಂದು ಹೇಳಿ ಆದಾಯ ತೆರಿಗೆ ಕುರಿತು ಮಾತನಾಡಿದರು.


ಮಾಜಿ ಅಧ್ಯಕ್ಷರುಗಳಿಗೆ ಗೌರವಾರ್ಪಣೆ:
ಪದ್ಮನಾಭ ಶೆಟ್ಟಿ, ಜೇಮ್ಸ್ ಮಾಡ್ತಾ, ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಕೇಶವ ಪೈ, ವಿ.ಕೆ ಜೈನ್, ವಾಮನ್ ಪೈ, ಸುರೇಂದ್ರ ಕಿಣಿ, ಗಿಲ್ಬರ್ಟ್ ಡಿ’ಸೋಜ, ಸುಂದರ ಗೌಡ, ಜೋನ್ ಕುಟಿನ್ಹಾ, ಲೋಕೇಶ್ ಹೆಗ್ಡೆರವರುಗಳಿಗೆ ಅಧ್ಯಕ್ಷ ರವಿಕೃಷ್ಣ ಡಿ.ಕಲ್ಲಾಜೆರವರು ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಿದರು.


ಮೌನ ಪ್ರಾರ್ಥನೆ:
ಇತ್ತೀಚೆಗೆ ಅಗಲಿದ ಸಂಘದ ಸದಸ್ಯರಾದ ಇಂಜಿನಿಯರ್ ವೇಣುಗೋಪಾಲ್, ಮುಳಿಯ ಶ್ಯಾಮ್ ಭಟ್, ಸುಬ್ರಹ್ಮಣ್ಯ ಕೊಳತ್ತಾಯ, ಇಂದಾಜೆ ವಿನಾಯಕ್ ನಾಯಕ್‌ರವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.


ಕಿಟ್ ವಿತರಣೆ:
ಸಂಘದ ಸದಸ್ಯರ ಪ್ರಾಯೋಜಕತ್ವದೊಂದಿಗೆ ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಿಗೆ ದಿನ ಬಳಕೆಯ ವಸ್ತುಗಳ ಕಿಟ್ ಅನ್ನು ಈ ಸಂದರ್ಭದಲ್ಲಿ ಕೋಆರ್ಡಿನೇಟರ್ ಶ್ರೀಮತಿ ತನುಜಾ ಝೇವಿಯರ್‌ರವರಿಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘಕ್ಕೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರಮಾಣಪತ್ರದೊಂದಿಗೆ ಸಂಘಕ್ಕೆ ಸೇರ್ಪಡೆಗೊಳಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಮೇಶ್ ಪ್ರಭು ಉಪಸ್ಥಿತರಿದ್ದರು. ಶ್ರೀಮತಿ ಸವಿತಾ ಎಸ್. ಪ್ರಾರ್ಥಿಸಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ.ಕಲ್ಲಾಜೆ ಸ್ವಾಗತಿಸಿ, ಉಪಾಧ್ಯಕ್ಷ ಮನೋಜ್ ಟಿ.ವಿ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಉಲ್ಲಾಸ್ ಪೈರವರು ವರದಿ ಮಂಡಿಸಿದರು. ಕೋಶಾಧಿಕಾರಿ ಜೋನ್ ಕುಟಿನ್ಹಾ ಲೆಕ್ಕಪತ್ರ ಮಂಡಿಸಿದರು. ಸಂಘದ ಕಾರ್ಯದರ್ಶಿ ಶಶಿರಾಜ್ ರೈ ಹಾಗೂ ನಿರ್ದೇಶಕ ವಿಶ್ವಪ್ರಸಾದ್ ಸೇಡಿಯಾಪು ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ..
ಪುತ್ತೂರು/ಕುಂಬ್ರ/ಕೆಯ್ಯೂರು/ಉಪ್ಪಿನಂಗಡಿ ಹಾಗೂ ವಿಟ್ಲ ವರ್ತಕ ಸಂಘದ ವತಿಯಿಂದ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿನ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿದ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಜಿ.ಎಲ್ ಗ್ರೂಪ್ ಆಫ್ ಕಂಪನೀಸ್ ಚೇರ್ಮನ್ ಬಲರಾಮ ಆಚಾರ್ಯ, ಹಿರಿಯ ಉದ್ಯಮಿ ಆಯ್ಕೆ ಗ್ಲಾಸ್‌ನ ಕೆ.ರಝಾಕ್ ಖಾನ್, ಮುಳಿಯ ಗೋಲ್ಡ್ ಡೈಮಂಡ್ಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವಪ್ರಸಾದ್ ಮುಳಿಯ, ಕೃಷಿ ಉಪಕರಣ ತಯಾರಕ ಫಿಲಿಪ್ ಡಿ’ಸೋಜ ಉರಿಮಜಲುರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕ್ರೀಡಾಕೂಟ ಬಹುಮಾನ ವಿತರಣೆ..
ವಾಕಿಂಗ್(70ವರ್ಷ ಮೇಲ್ಪಟ್ಟು):ಮೊಹಮ್ಮದ್ ಸಾಬ್(ಪ್ರ), ಶಾಂತಕುಮಾರ್(ದ್ವಿ), (60 ವರ್ಷ ಮೇಲ್ಪಟ್ಟು):ಉಲ್ಲಾಸ್ ಪೈ(ಪ್ರ), ಮುರಳೀ ಎಚ್(ದ್ವಿ), (50ವರ್ಷ ಮೇಲ್ಪಟ್ಟು):ದಿನೇಶ್ ಹೆಗ್ಡೆ(ಪ್ರ), ರವಿಪ್ರಕಾಶ್ ಕಲ್ಲಾಜೆ(ದ್ವಿ), (50ವರ್ಷದೊಳಗೆ):ಮನೋಜ್ ಟಿ.ವಿ(ಪ್ರ), ಶಶಿರಾಜ್ ರೈ(ದ್ವಿ), ರನ್ನಿಂಗ್(70 ವರ್ಷ ಮೇಲ್ಪಟ್ಟು):ಶಾಂತಕುಮಾರ್(ಪ್ರ), ಮೊಹಮ್ಮದ್ ಸಾಬ್(ದ್ವಿ), (50 ವರ್ಷ ಕೆಳಗಡೆ): ನೌಶಾದ್ ಹಾಜಿ ಬೊಳ್ವಾರು(ಪ್ರ), ಮನೋಜ್ ಟಿ.ವಿ(ದ್ವಿ) ಕ್ರಿಕೆಟ್: ಕಾರ್ಯದರ್ಶಿ ಬಳಗ(ಪ್ರ), ಅಧ್ಯಕ್ಷರ ಬಳಗ(ದ್ವಿ) ಹಾಗೂ ಕಳೆದ ಹತ್ತು ವರ್ಷದಿಂದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿರುವ ನೌಶಾದ್ ಹಾಜಿ ಬೊಳ್ವಾರುರವರಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here