






ಪುತ್ತೂರು:ಸರ್ವೆ ಗ್ರಾಮದ ಭಕ್ತ ಕೋಡಿಯ ಶ್ರೀರಾಮ ಭಜನಾ ಮಂದಿರ ಸಂಕೀರ್ಣದಲ್ಲಿರುವ ಎಸ್.ಕೆ.ಡಿಜಿಟಲ್ ಸ್ಟುಡಿಯೋ ಮಾಲೀಕ ಸುಬ್ರಹ್ಮಣ್ಯ ಕರಂಬಾರು ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಶರತ್, ಅವರ ತಾಯಿ ಮೀನಾಕ್ಷಿ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.


‘ಅ.24ರಂದು ರಾತ್ರಿ ತಾನು ತನ್ನ ಸ್ಟುಡಿಯೋ ಮುಂಭಾಗ ನಿಂತಿದ್ದಾಗ, ರಸ್ತೆಯಲ್ಲಿ ತೆರಳುತ್ತಿದ್ದ ಪರಿಚಯದ ಶರತ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.ಈ ಘಟನೆಯನ್ನು ತಾನು ಮೊಬೈಲ್ನಲ್ಲಿ ಚಿತ್ರೀಕರಿಸಲು ಆರಂಭಿಸಿದಾಗ, ಶರತ್ ಆತನ ತಾಯಿ ಮೀನಾಕ್ಷಿ ಹಾಗೂ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು, ಸ್ಟುಡಿಯೋ ಮತ್ತು ತನ್ನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.ತಾನು ವೀಡಿಯೋ ಚಿತ್ರೀಕರಿಸುತ್ತಿದ್ದಾಗ ಶರತ್ ತನ್ನ ತಾಯಿಯನ್ನು ಮುಂದೆ ಕರೆತಂದು, ಮೊಬೈಲ್ ಹಿಡಿದಿದ್ದ ನನ್ನ ಕೆನ್ನೆಗೆ ಕೈಯಿಂದ ಹೊಡೆದಿದ್ದಾನೆ. ಬಳಿಕ ಮೊಬೈಲ್ ಕೆಳಗೆ ಬಿದ್ದಾಗ ಅದನ್ನು ಮೀನಾಕ್ಷಿ ಅವರು ತೆಗೆದುಕೊಂಡಿದ್ದು, ಈ ಸಂದರ್ಭದಲ್ಲಿ ಶರತ್ ಅವರು ನನ್ನ ಹೊಟ್ಟೆಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ.ಈ ವೇಳೆ ಸ್ನೇಹಿತ ಮನೋಜ್ ಅವರು ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದಾಗ, ಅವರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಚಿತ್ರೀಕರಿಸಿದ ವಿಡಿಯೋವನ್ನು ಹಂಚಿಕೊಂಡರೆ ಕೊಲೆ ಮಾಡುವುದಾಗಿ ಇಬ್ಬರಿಗೂ ಜೀವ ಬೆದರಿಕೆ ಹಾಕಲಾಗಿದೆ. ಅಲ್ಲದೆ, ತಾನು ಕರೆದರೆ ಎಷ್ಟು ಜನ ಬೇಕಾದರೂ ಬರುತ್ತಾರೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಸುಬ್ರಹ್ಮಣ್ಯ ಅವರು ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.



ಘಟನೆಯ ಬಳಿಕ ಸ್ಟುಡಿಯೋ ಬಾಗಿಲು ಮುಚ್ಚಿ ಮನೆಗೆ ತೆರಳಲೆಂದು ತಾನು ಮೋಟಾರ್ ಸೈಕಲ್ ಏರಿದಾಗ, ಶರತ್ ಅವರು ಬೈಕ್ ಸಮೇತ ತನ್ನನ್ನು ದೂಡಿ ಬೀಳಿಸಿದ್ದು ಇದರಿಂದ ಬೈಕ್ ಸಮೇತ ನೆಲಕ್ಕೆ ಬಿದ್ದಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ. ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದಿನ ವೈಮನಸ್ಸೇ ಘಟನೆಗೆ ಕಾರಣ ಎಂಬ ಆರೋಪ: ಶ್ರೀರಾಮ ಭಜನಾ ಮಂದಿರದ ಸಂಕೀರ್ಣದಲ್ಲಿ ಶರತ್ ಅವರಿಗೆ ಆತ್ಮೀಯರಾದ ವ್ಯಕ್ತಿಯೊಬ್ಬರು ಬಾಡಿಗೆಗೆ ಇದ್ದು, ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅವರನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು.ಇದೇ ವಿಚಾರ ಘಟನೆಗೆ ಒಂದು ಕಾರಣವಾಗಿರಬಹುದು ಎಂದು ಸುಬ್ರಹ್ಮಣ್ಯ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.










