ಎಸ್‌ಐಆರ್ ಮತದಾರರ ಪಟ್ಟಿ ಪ್ರಕಟ : ಪುತ್ತೂರು ವಿಧಾನ ಸಭಾಕ್ಷೇತ್ರದಲ್ಲಿ 1,038 ಮತದಾರರು ಔಟ್‌

0

ಪುತ್ತೂರು:ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್)ಪ್ರಕ್ರಿಯೆ ಮುಕ್ತಾಯವಾಗಿದ್ದು,ಕರ್ನಾಟಕ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ.ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದಿನ ಪಟ್ಟಿಯಲ್ಲಿದ್ದ 1038 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು ಪ್ರಸ್ತುತ ಒಟ್ಟು 2,04,181 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ.


ಪರಿಷ್ಕರಣೆಗೆ ಪೂರ್ವ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2,16,542 ಮತದಾರರಿದ್ದರು. ಪರಿಷ್ಕರಣೆಯ ಮೊದಲ ಹಂತ ಪೂರ್ಣಗೊಂಡು ಆ.24ರಂದು ಪ್ರಕಟಗೊಂಡ ಕರಡು ಪಟ್ಟಿಯಂತೆ 99,418 ಪುರುಷರು ಹಾಗೂ 1,02,156 ಮಹಿಳೆಯರು ಸೇರಿದಂತೆ ಒಟ್ಟು 2,01,574 ಮತದಾರರ ಹೆಸರಗಳು ಮಾತ್ರ ಕರಡು ಮತದಾರರ ಪಟ್ಟಿಯಲ್ಲಿತ್ತು.14,968 ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು.ಎರಡನೇ ಹಂತದಲ್ಲಿ ನಮೂನೆ-6ರಲ್ಲಿ ಹೊಸ ಮತದಾರರಿಗೆ ಸೇರ್ಪಡೆಗೆ ಅವಕಾಶ ನೀಡಲಾಗಿದ್ದು ಒಟ್ಟು 3645 ಮಂದಿ ಸೇರ್ಪಡೆಯಾಗಿದ್ದಾರೆ.ನಮೂನೆ 6ರಲ್ಲಿ 2918, 6ಎ-17 ಹಾಗೂ ನಮೂನೆ 8 (ಸ್ಥಳಾಂತರ)ರಲ್ಲಿ 710 ಮಂದಿ ಸೇರ್ಪಡೆಯಾಗಿದ್ದಾರೆ.ಅಂತಿಮ ಪಟ್ಟಿಯಲ್ಲಿ 1,00,703 ಪುರುಷರು ಹಾಗೂ 1,03,478 ಮಹಿಳೆಯರು ಸೇರಿ ಒಟ್ಟು 2,04,181 ಮತದಾರರಿದ್ದಾರೆ.ಹೊಸ ಅಂತಿಮ ಪಟ್ಟಿಯ ಒಟ್ಟು ಮತದಾರರಲ್ಲಿ ಪುರುಷರಿಗಿಂತ 2,775 ಮಹಿಳಾ ಮತದಾರರು ಹೆಚ್ಚಿದ್ದಾರೆ.


ಜೂ.30ರಿಂದ ಪ್ರಾರಂಭಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟ ಆಗಿತ್ತು. ಆ.24ರಿಂದ ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅವಕಾಶ ನೀಡಲಾಗಿತ್ತು.ಈ ಪೈಕಿ ಪುತ್ತೂರಿನಲ್ಲಿ, ಮತದಾರರ ದಾಖಲೆಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗದ ಹಾಗೂ ಗುರುತು ದೃಢೀಕರಣ ಅಗತ್ಯವಿದ್ದ ಸುಮಾರು 12,330 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿತ್ತು.ಈ ಸಂಬಂಧ ವಿಚಾರಣೆಗಳನ್ನೂ ನಡೆಸಲಾಗಿದ್ದು, ಹೆಸರು ಸೇರ್ಪಡೆಗಾಗಿ ಫಾರ್ಮ್-6 ಮತ್ತು ಹೆಸರು ತೆಗೆದುಹಾಕುವ ಪ್ರಕ್ರಿಯೆಗೆ ಸಂಬಂಧಿಸಿದ ಫಾರ್ಮ್-7 ಅಡಿಯಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ.


ಕರಡು ಪಟ್ಟಿಯಲ್ಲಿ 2,01,574 ಮತದಾರರು:
ಆಗಸ್ಟ್ 24ರಂದು ಪ್ರಕಟಗೊಂಡಿದ್ದ ಕರಡು ಮತದಾರರ ಪಟ್ಟಿಯ ಪ್ರಕಾರ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಒಟ್ಟು 2,16,542 ಮತದಾರರ ಪೈಕಿ 99,418 ಪುರುಷರು ಹಾಗೂ 1,02,156 ಮಹಿಳೆಯರು ಸೇರಿದಂತೆ ಒಟ್ಟು 2,01,574 ಮತದಾರರ ಹೆಸರಗಳಿದ್ದವು.ಉಳಿದ ಹೆಸರುಗಳ ಪರಿಶೀಲನೆ ಹಾಗೂ ಅನರ್ಹ ಮತದಾರರನ್ನು ಗುರುತಿಸುವ ಉದ್ದೇಶದಿಂದ ಚುನಾವಣಾ ಆಯೋಗ ಮುಂದಿನ ಕ್ರಮಗಳನ್ನು ಕೈಗೊಂಡಿತ್ತು. ಕರಡು ಪಟ್ಟಿ ಪ್ರಕಟವಾದ ದಿನದಿಂದ ಸೆ.23ರವರೆಗೆ ಸಾರ್ವಜನಿಕರಿಗೆ ಹೆಸರುಗಳ ಸೇರ್ಪಡೆ, ತಿದ್ದುಪಡಿ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.


ಹಿಂದಿನ ಪಟ್ಟಿಯಿಂದ ಕೈಬಿಡಲಾದ ಮತದಾರರು;
ಪುತ್ತೂರಿನಲ್ಲಿ ಪರಿಷ್ಕರಣೆಗಾಗಿ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿದಾಗ-5,293 ಮರಣ ಹೊಂದಿದವರು, 7,508 ಶಾಶ್ವತ ಸ್ಥಳಾಂತರಗೊಂಡಿರುವವರು, 1,566 ಎರಡು ಕಡೆ ಮತದಾರರ ಪಟ್ಟಿಯಲ್ಲಿರುವವರು, 537 ಗೈರಾಗಿರುವವರು ಹಾಗೂ 64 ಇತರ ಮತದಾರರನ್ನು ಗುರುತಿಸಲಾಗಿತ್ತು.ಒಟ್ಟು 1038 ಮತದಾರರನ್ನು ಅಂತಿಮ ಪಟ್ಟಿಯಲ್ಲಿ ಕೈಬಿಡಲಾಗಿದೆ.ಈ ಪೈಕಿ ಮರಣ ಹೊಂದಿದವರು-33,ಶಾಶ್ವತವಾಗಿ ಸ್ಥಳಾಂತರಗೊಂಡವರು-915, ದ್ವಿಪ್ರತಿಯಲ್ಲಿ ನೋಂದಣಿ-99 ಮಂದಿಯ ಹೆಸರನ್ನು ಡಿಲೀಟ್ ಮಾಡಲಾಗಿದೆ.ಒಟ್ಟು 12330 ಮತದಾರರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗಿತ್ತು.ಈ ಪೈಕಿ 12060 ಮತದಾರರು ಅರ್ಹರೆಂದು ಪರಿಶೀಲನೆಯಲ್ಲಿ ಕಂಡು ಬಂದಿದ್ದು 270 ಮಂದಿ ಅನರ್ಹರಾಗಿ ಗುರುತಿಸಲ್ಪಟ್ಟಿದ್ದರು.


3645 ಹೊಸ ಮತದಾರರ ಸೇರ್ಪಡೆ;
ಎಸ್‌ಐಆರ್ ಪ್ರಕ್ರಿಯೆಯ ಎರಡನೇ ಅವಧಿಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ನಮೂನೆ-6ರಲ್ಲಿ ಅರ್ಜಿ ಸಲ್ಲಿಕೆಯಾಗಿರುವಂತೆ ಪುತ್ತೂರಿನಲ್ಲಿ 3645 ಮಂದಿ ಹೊಸ ಮತದಾರರು ಸೇರ್ಪಡೆಗೊಂಡಿರುತ್ತಾರೆ.


ಮತಗಟ್ಟೆಗಳ ಸಂಖ್ಯೆ 245ಕ್ಕೆ ಏರಿಕೆ:
ಎಸ್‌ಐಆರ್ ಪ್ರಕ್ರಿಯೆಗೆ ಮೊದಲು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 221 ಮತಗಟ್ಟೆಗಳಿದ್ದವು.ಎಸ್‌ಐಆರ್ ನಂತರ ಚುನಾವಣಾ ಆಯೋಗದ ನಿರ್ದೇಶನದಂತೆ, 1,200ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಬೇರ್ಪಡಿಸಿ ಹೆಚ್ಚುವರಿ ಮತಗಟ್ಟೆಗಳನ್ನು ರಚಿಸಲಾಗಿದೆ.ಅದರಂತೆ ಪುತ್ತೂರಿನಲ್ಲಿ 24 ಹೊಸ ಮತಗಟ್ಟೆಗಳನ್ನು ರಚಿಸಲಾಗಿದ್ದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಮತಗಟ್ಟೆಗಳ ಸಂಖ್ಯೆ 245ಕ್ಕೆ ಏರಿಕೆಯಾಗಿದೆ.


ಸೇರ್ಪಡೆ ಪ್ರಕ್ರಿಯೆ ನಿರಂತರ:
ಅಂತಿಮ ಪಟ್ಟಿಯಲ್ಲಿ ಮತದಾರರ ಹೆಸರು ಸೇರ್ಪಡೆಯಾಗದ ಅರ್ಹ ವ್ಯಕ್ತಿಗಳು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬಹುದು.ಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ-7, ಅಂತಿಮ ಪಟ್ಟಿಯಲ್ಲಿರುವ ವಿವರಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ನಮೂನೆ-8ರ ಮೂಲಕ ಅರ್ಜಿ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಹೀಗೆ ಚೆಕ್ ಮಾಡಿ…
ಮುಂಬರುವ ಚುನಾವಣೆಗಳಲ್ಲಿ ನೀವು ಮತದಾನದ ಹಕ್ಕು ಚಲಾಯಿಸಬೇಕಾದರೆ ನಿಮ್ಮ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿದೆಯೇ ಎಂದು ಈಗಲೇ ಖಚಿತಪಡಿಸಿಕೊಳ್ಳುವುದು ಅನಿವಾರ್ಯ.ಹೀಗಾಗಿ ಆಯಾ ಬೂತ್‌ಗಳ ಬಿಎಲ್‌ಓಗಳಲ್ಲಿ ಅಂತಿಮ ಪಟ್ಟಿಯು ಲಭ್ಯವಿದೆ.ಅವರಲ್ಲಿ ವಿಚಾರಿಸಿಕೊಳ್ಳಬಹುದು. ಅಲ್ಲದೆ ಮೊಬೈಲ್ ಆಪ್ ECINET App ಅಥವಾ
https://voters.eci.gov.In ಮುಖಾಂತರ ಪರಿಶೀಲಿಸಿ ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here