







ಪುತ್ತೂರು: ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸುವ ರಾಜ್ಯಮಟ್ಟದ “ಕನಸುಗಳು-2026” ಅಕ್ಟೋಬರ್ 30ರ ಶುಕ್ರವಾರ ನಡೆಯಲಿದೆ.


ಬೆಳಗ್ಗೆ 9ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ನಿರ್ದೇಶಕ ರಮೇಶ್ಚಂದ್ರ ಎಂ. ವಹಿಸಿಕೊಳ್ಳಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ವೇದಾಂತ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಗೋವಾ ಇದರ ಅಸೋಸಿಯೇಟ್ ಮ್ಯಾನೇಜರ್ ಸಿಎ ಶ್ರದ್ಧಾ ವಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.



ಸಭಾ ಕಾರ್ಯಕ್ರಮದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಪೆನ್ಸಿಲ್ ಸ್ಕೆಚ್, ಕನ್ನಡ ಕವನ ರಚನೆ ಮತ್ತು ವಾಚನ, ಪ್ರಾಕೃತಿಕ ರಂಗೋಲಿ, ಮುಖವರ್ಣಿಕೆ, ವೀಡಿಯೋ ಸಂಕಲನ, ಚರ್ಚಾ ಸ್ಪರ್ಧೆ, ತಾಳವಾದ್ಯ, ಕಲರವ ಸಾಂಸ್ಕೃತಿಕ ವೈವಿಧ್ಯ, ನಿಧಿಶೋಧ, ಭಗವದ್ಗೀತಾ ಕಂಠಪಾಠ ಸೇರಿದಂತೆ 14 ವಿವಿಧ ಸ್ಪರ್ಧೆಗಳು ನಡೆಯಲಿವೆ.
ಅಪರಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಯಾಗಿ ಯೂಟ್ಯೂಬರ್ ಹಾಗೂ ನಟ ಧನರಾಜ್ ಆಚಾರ್, ವಿಶೇಷ ಅಭ್ಯಾಗತರಾಗಿ ಖ್ಯಾತ ವೈದ್ಯ ಹಾಗೂ ಹಿರಿಯ ವಿದ್ಯಾರ್ಥಿ ಡಾ. ವೇಣುಗೋಪಾಲ ಶರ್ಮ ಭಾಗವಹಿಸಲಿದ್ದಾರೆ.










