ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಡಬ ತಾಲೂಕು ಇದರ ನೆಲ್ಯಾಡಿ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅ.24ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್‌ಕುಮಾರ್ ಪಾಲೇರಿ, ಯೋಜನೆಯ ಪ್ರತಿಯೊಂದು ಕಾರ್ಯಕ್ರಮವೂ ಅರ್ಥಪೂರ್ಣವಾಗಿದ್ದು, ಜನರಲ್ಲಿ ಶಿಸ್ತು, ನಂಬಿಕೆ ಹಾಗೂ ಪರಸ್ಪರ ವಿಶ್ವಾಸವನ್ನು ಬೆಳೆಸುತ್ತದೆ. ಸುಲಭವಾಗಿ ಸಾಲ ಸೌಲಭ್ಯ ಪಡೆಯಲು ನೆರವಾಗುವ ಯೋಜನೆಯು ಜನರ ಅಭಿವೃದ್ಧಿಗೆ ಪ್ರೇರಣೆಯಾಗಿದೆ. ಸಂಸ್ಥೆಯ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ಹೋಗುವುದು ಸದಸ್ಯರ ಕರ್ತವ್ಯವಾಗಿದೆ ಎಂದು ಹೇಳಿದರು.

ಯೋಜನೆಯ ದ.ಕ.ಜಿಲ್ಲೆ-2ರ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ, 44 ವರ್ಷಗಳನ್ನು ಪೂರೈಸಿ 45ನೇ ವರ್ಷಕ್ಕೆ ಕಾಲಿಡುತ್ತಿರುವ ಯೋಜನೆ ಕರ್ನಾಟಕದ ಸುಮಾರು 22 ಸಾವಿರ ಗ್ರಾಮಗಳಿಗೆ ವಿಸ್ತರಿಸಿದೆ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಯೋಜನೆಯ ಮುಖ್ಯ ಉದ್ದೇಶ ಎಂದರು.

ನೆಲ್ಯಾಡಿ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಪಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಎಲೈಟ್ ರಬ್ಬರ್ ಇಂಡಸ್ಟ್ರೀಸ್‌ನ ಮಾಲಕ ಶಾಜಿ ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ವರ್ತಕ ಸಂಘದ ಗೌರವಾಧ್ಯಕ್ಷ ರಫೀಕ್ ಸೀಗಲ್, ಕಡಬ ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಸಂತೋಷ್ ಕೇನ್ಯ, ಕಡಬ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್‌ನ ಅಧ್ಯಕ್ಷ ಸುಂದರ ಗೌಡ ಒಗ್ಗು, ಕಡಬ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ರಮೇಶ್ ಬಾಣಜಾಲು, ಯೋಜನೆಯ ಸಮನ್ವಯಾಧಿಕಾರಿ ಸಂತೋಷ್ ಕುಮಾರ್, ಕಡಬ ತಾಲೂಕು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ ಹಾಗೂ 10 ಒಕ್ಕೂಟದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿದರು. ಮೇಲ್ವಿಚಾರಕಿ ಜಯಶ್ರೀ ವರದಿ ವಾಚಿಸಿದರು. ನವ್ಯ ಹಾಗೂ ನ್ಯಾನ್ಸಿ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಿತು.


ಅಧಿಕಾರ ಹಸ್ತಾಂತರ:
ನೆಲ್ಯಾಡಿ ವಲಯದ 10 ಒಕ್ಕೂಟಗಳಿಗೆ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನೆಲ್ಯಾಡಿ ವಲಯಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು ತಂಡದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಎಂಟು ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ಸುಜ್ಞಾನ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೆರವು, ಜ್ಞಾನದೀಪ ಯೋಜನೆಯಡಿ ಆಯ್ಕೆಯಾದ ಶಿಕ್ಷಕರಿಗೆ ಮಂಜೂರು ಪತ್ರ, ವಾತ್ಸಲ್ಯ ಯೋಜನೆಯಡಿ ಮನೆ ದುರಸ್ತಿಗೆ ಸಹಾಯಧನ ಮತ್ತು ಜಯಮಂಗಳ ಕಾರ್ಯಕ್ರಮದಡಿ ವಿಕಲಚೇತನರಿಗೆ ವೀಲ್‌ಚೇರ್ ಹಸ್ತಾಂತರಿಸಲಾಯಿತು. ಸದಸ್ಯರಿಗೆ ಆಟೋಟ, ರಂಗೋಲಿ ಹಾಗೂ ಹೂಗುಚ್ಛ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here