






@ ಸಿಶೇ ಕಜೆಮಾರ್


ಪುತ್ತೂರು : ಸಿನಿಮಾವೊಂದರಲ್ಲಿ ನಾಯಕನಷ್ಟೇ ಪ್ರಾಮುಖ್ಯತೆ ಇರುವ ಮತ್ತೊಂದು ಪಾತ್ರವೆಂದರೆ ಅದು ’ಖಳನಾಯಕ’ (ವಿಲನ್). ಒಬ್ಬ ಸಶಕ್ತ, ಖಡಕ್ ವಿಲನ್ ಇದ್ದಾಗಷ್ಟೇ ಕಥೆಗೆ ರಂಗು, ನಾಯಕನ ಪಾತ್ರಕ್ಕೆ ಗತ್ತು ಸಿಗುವುದು. ಅಂತಹ ಖಡಕ್ ಡೈಲಾಗ್ ಡೆಲಿವರಿ, ರಗಡ್ ಲುಕ್, ಎತ್ತರ, ದೇಹದಾರ್ಢ್ಯ ಮತ್ತು ಗಂಭೀರ ನಟನೆಯ ಮೂಲಕವೇ ಸಿನಿಪ್ರಿಯರ ಗಮನಸೆಳೆಯುತ್ತಿರುವ ನಟ ಶರತ್ ಆಳ್ವ ಕೂರೇಲು. ಇತ್ತೀಚೆಗೆ ತೆರೆಕಂಡ ‘ಬನ’ ತುಳು ಸಿನಿಮಾದ ಮೂಲಕ ಪೂರ್ಣಪ್ರಮಾಣದ ಖಳನಾಯಕನಾಗಿ ಹೊರಹೊಮ್ಮಿರುವ ಇವರು, ತುಳು ಚಿತ್ರರಂಗಕ್ಕೆ ಭರವಸೆಯ ಹೊಸ ವಿಲನ್ ಆಗಿ ಪರಿಚಯಗೊಂಡಿದ್ದಾರೆ.




ಬಾಲ್ಯದ ಕಲಾಸೇವೆ ಹಾಗೂ ರಂಗಭೂಮಿಯ ತರಬೇತಿ
ಆರ್ಯಾಪು ಗ್ರಾಮದ ಸಂಟ್ಯಾರು ಸಮೀಪದ ಕೂರೇಲು ಸಂಕಪ್ಪ ಆಳ್ವ ಹಾಗೂ ಯಮುನಾ ಆಳ್ವರ ಪುತ್ರರಾದ ಶರತ್ ಆಳ್ವ ಅವರಿಗೆ ಬಾಲ್ಯದಿಂದಲೇ ಕಲೆ, ರಂಗಭೂಮಿ ಮತ್ತು ಯಕ್ಷಗಾನದ ಮೇಲೆ ಅಪಾರ ಹುಚ್ಚು. ಪುತ್ತೂರಿನ ‘ಲಿಟ್ಲ್ ಫ್ಲವರ್’ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪೂರೈಸಿದ ಇವರು, ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಉತ್ತಮ ವಾಲಿಬಾಲ್ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದರು. ಛದ್ಮವೇಷ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿದ್ದ ಶರತ್ ಅವರ ಕಲಾಪಯಣಕ್ಕೆ ಭದ್ರ ಬುನಾದಿ ಹಾಕಿದ್ದು ಯಕ್ಷಗಾನ. ಗುರುಗಳಾದ ಉಂಡೆಮನೆ ಕೃಷ್ಣ ಭಟ್ ಅವರಿಂದ ಯಕ್ಷಗಾನ ಕಲಿತು, ವೆಂಕಟೇಶ್ ಮಯ್ಯರ ಪ್ರೋತ್ಸಾಹದೊಂದಿಗೆ ರಂಗಕ್ಕಿಳಿದ ಶರತ್ ಆಳ್ವರು, ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ಬು ಸಂಟ್ಯಾರ್ ಅವರ ಜೊತೆಗೂಡಿ ಯಕ್ಷಗಾನದಲ್ಲಿ ’ಬಣ್ಣದ ವೇಷ’ ಹಾಗೂ ’ಹಾಸ್ಯ ಪಾತ್ರ’ಗಳನ್ನು ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದರು.
ನಾಟಕ ಮತ್ತು ಕಿರುಚಿತ್ರಗಳ ಸವಾರಿ
ರಂಗಭೂಮಿಯ ಒಡನಾಟ ಬೆಳೆಸಿಕೊಂಡ ಶರತ್ ಆಳ್ವ, 2015 ರಲ್ಲಿ ’ಬೊಳ್ಳಿ ಬೊಲ್ಪು ಕಲಾವಿದರು’ ಎಂಬ ನಾಟಕ ತಂಡವನ್ನು ಕಟ್ಟಿ, ಹಲವು ವರ್ಷಗಳ ಕಾಲ ತುಳು ನಾಟಕ ಸ್ಪರ್ಧೆಯನ್ನು ಕೂಡ ನಡೆಸಿಕೊಂಡು ಬಂದಿದ್ದರು. ನೂರಕ್ಕೂ ಹೆಚ್ಚು ಪ್ರದರ್ಶನ ಕಂಡ ‘ನನ ಮರ್ಲ್ ಕಟ್ಟೊಡ್ಚಿ’, ’ಮಂಡೆ ಹಾಕೊಡ್ಚಿ’ ಮುಂತಾದ ಸೂಪರ್ ಹಿಟ್ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಇವರದ್ದು ಆಗಿದೆ. ವಿಶೇಷವೆಂದರೆ, ಆರಂಭದಲ್ಲಿ ಹಾಸ್ಯ ನಟನಾಗಿ ಪ್ರೇಕ್ಷಕರನ್ನು ನಗಿಸುತ್ತಿದ್ದ ಶರತ್ ಆಳ್ವರವರು, 2015 ರ ನಂತರ ತಮ್ಮ ನಟನೆಯ ಪಥವನ್ನು ಬದಲಿಸಿ ವಿಲನ್ ಪಾತ್ರಗಳತ್ತ ಹೆಜ್ಜೆ ಇಟ್ಟರು. ಕಿರುಚಿತ್ರ ರಂಗದಲ್ಲೂ ಸಕ್ರಿಯರಾದ ಇವರು ವಿತಿನ್ ಶೆಟ್ಟಿ ಕೈಕಾರ ಅವರ ’ಅಡಿಕ್ಟ್’ ಹಾಗೂ ಡಾ. ಹರ್ಷ ಕುಮಾರ್ ರೈ ಮಾಡಾವು ಅವರ ’ಅಪರೇಷನ್ ಸಿಂಧೂರ’ ಸೇರಿದಂತೆ ಹಲವು ಪ್ರಸಿದ್ಧ ಕಿರುಚಿತ್ರಗಳಲ್ಲಿ ಅಭಿನಯಿಸಿ ಸಭಾಷ್ ಎನಿಸಿಕೊಂಡರು.

ಹಿರಿತೆರೆಗೆ ಬಿಗ್ ಬ್ರೇಕ್ ಹಾಗೂ ’ಬನ’ ಚಿತ್ರದ ಖಡಕ್ ಲುಕ್!
ಶರತ್ ಆಳ್ವ ಅವರ ಅಭಿನಯ ಜೀವನಕ್ಕೆ ದೊಡ್ಡ ತಿರುವು ನೀಡಿದ್ದು ಯಶಸ್ವಿ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಅವರ ನಿರ್ದೇಶನದ ಸೂಪರ್ ಹಿಟ್ ತುಳು ಸಿನಿಮಾ ‘ಧರ್ಮ ಚಾವಡಿ’. ಈ ಸಿನಿಮಾದಲ್ಲಿನ ನಟನೆ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತು.ಈ ಯಶಸ್ಸಿನ ಬೆನ್ನಲ್ಲೇ, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಹಾಗೂ ಸಿನಿಮಾ ವಿತರಕರಾದ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಅವರ ಪ್ರೋತ್ಸಾಹದೊಂದಿಗೆ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ‘ಬನ’ ತುಳು ಸಿನಿಮಾದಲ್ಲಿ ಪೂರ್ಣಕಾಲಿಕ ಖಳನಾಯಕನಾಗಿ ಅಭಿನಯಿಸುವ ಅವಕಾಶ ಶರತ್ ಆಳ್ವ ಅವರಿಗೆ ಒಲಿದುಬಂತು. ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಒಬ್ಬ ಅದ್ಭುತ, ರಗಡ್ ವಿಲನ್ ಪರಿಚಯವಾದಂತಾಗಿದೆ. ಖಳನಾಯಕನಿಗೆ ಇರಬೇಕಾದ ಎತ್ತರ-ತೂಕ , ಖಡಕ್ ಧ್ವನಿ, ಗಂಭೀರ ನೋಟ ಹಾಗೂ ವಿಶಿಷ್ಟ ಬಾಡಿ ಲ್ಯಾಂಗ್ವೇಜ್ ಇವೆಲ್ಲವೂ ಶರತ್ ಆಳ್ವ ಅವರಲ್ಲಿದ್ದು, ಬೆಳ್ಳಿಪರದೆಯ ಮೇಲೆ ಅವರ ಪಾತ್ರ ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತಿದೆ.
ಯಕ್ಷಗಾನ, ನಾಟಕ, ಕಿರುಚಿತ್ರಗಳಿಂದ ಪಕ್ವಗೊಂಡು ಈಗ ಬೆಳ್ಳಿಪರದೆಯ ಮೇಲೆ ಭರವಸೆಯ ನಟನಾಗಿ ಮಿಂಚುತ್ತಿರುವ ಶರತ್ ಆಳ್ವ ಕೂರೇಲು ಅವರ ಈ ಖಡಕ್ ನಟನೆಯನ್ನು ಕಣ್ಣುಂಬಿಕೊಳ್ಳಲು, ಅವರ ಅಭಿನಯದ ‘ಬನ’ ತುಳು ಸಿನಿಮಾವನ್ನು ಇಂದೇ ಚಿತ್ರಮಂದಿರಗಳಲ್ಲಿ ವೀಕ್ಷಿಸಿ, ಕರಾವಳಿಯ ಈ ಉದಯೋನ್ಮುಖ ಕಲಾವಿದನನ್ನು ಹಾರೈಸಿ…










