






ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀವತ್ಸ ಅವರು ಕೇರಳದ ಮಂಜೇಶ್ವರದಲ್ಲಿ ಪತ್ತೆಯಾಗಿದ್ದಾರೆ. ನಿರಂತರವಾಗಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ಪತ್ತೆ ಹಚ್ಚಲು ಕಾರಣಕರ್ತರಾದ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್‌ಐ ಈರಯ್ಯ ದೂಂತೂರು ಅವರನ್ನು ಪುತ್ತೂರು ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಠಾಣೆಯಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ.



ಘಟನೆಯ ವಿವರ:
ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದ ರವಿಕುಮಾರ್ ಪೂಜಾರಿ ಎಂಬವರ ಪುತ್ರ, ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀವತ್ಸ ಅವರು
ಅ.22ರಂದು ನಾಪತ್ತೆಯಾಗಿದ್ದರು. ಮನೆಯಿಂದ ಬಂದಿದ್ದ ಶ್ರೀವತ್ಸ ಅವರ ನಾಪತ್ತೆ ಪ್ರಕರಣ ಆತಂಕ ಸೃಷ್ಟಿಸಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳಾರೆ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಈರಯ್ಯ ದೂಂತೂರು ಅವರ ನೇತೃತ್ವದಲ್ಲಿ ಪೊಲೀಸ್ ಪಡೆ ಕಳೆದ ಐದು ದಿನಗಳಿಂದ ವಿವಿಧೆಡೆ ನಿರಂತರವಾಗಿ ಕಾರ್ಯಾಚರಣೆ ನಡೆಸಿತ್ತು. ಹಗಲು ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಅ.28ರಂದು ಕೇರಳದ ಮಂಜೇಶ್ವರದಲ್ಲಿ ಶ್ರೀವತ್ಸ ಅವರನ್ನು ಪತ್ತೆ ಹಚ್ಚಿದೆ. ಬಳಿಕ ಪೊಲೀಸ್ ಠಾಣೆಗೆ ಕರೆ ತಂದು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಶ್ರೀವತ್ಸ ಅವರು ನಾಪತ್ತೆಯಾದ ಬಳಿಕ ಅವರ ಹೆತ್ತವರೊಂದಿಗೆ ಮತ್ತು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಪುತ್ತೂರು ಬಿಲ್ಲವ ಬ್ರಿಗೆಡ್ ಪದಾಧಿಕಾರಿಗಳು ಪತ್ತೆ ಕಾರ್ಯಾಚರಣೆಗೆ ಸಹಕಾರ ನೀಡಿದ್ದರು. ಶ್ರೀವತ್ಸ ಅವರ ಪತ್ತೆ ಕಾರ್ಯಾಚರಣೆಗೆ ವಿಶೇಷ ಮುತುವರ್ಜಿ ವಹಿಸಿದ ಎಸ್.ಐ. ಈರಯ್ಯ ಅವರನ್ನು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಭೇಟಿಯಾದ ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಪದಾಧಿಕಾರಿಗಳಾದ ಚಂದ್ರಶೇಖರ ಕಲ್ಲಗುಡ್ಡೆ, ಅಜಿತ್ ಕೆ.ಆರ್. ಪೂಜಾರಿ ಕೋಡಿಂಬಾಡಿ, ದಿನೇಶ್ ಕರ್ಕೇರ, ರಾಜೇಶ್, ಗುಣಕರ, ನವೀನ್ ಪೂಜಾರಿ ಮುಂತಾದವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಜಯಪ್ರಕಾಶ್ ಬದಿನಾರು ಅವರು ನಿಸ್ವಾರ್ಥದಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಎಎಸ್ಐ ರವೀಂದ್ರ, ಹೆಡ್‌ಕಾನ್ಸ್‌ಟೇಬಲ್‌ಗಳಾದ ಅನುಕುಮಾರ್, ಉದಯ ಗೌಡ, ಕಾನ್ಸಟೇಬಲ್ ಗಂಗಾಧರ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.













