






ಪುತ್ತೂರು:ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ ಯುವತಿಯನ್ನು ಮನೆಗೆ ಕರೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಜಯರಾಮ ಎಂಬಾತನ ವಿರುದ್ಧ ಬಿಳಿನೆಲೆಯ ಯುವತಿಯೊಬ್ಬರು ದೂರು ನೀಡಿದ್ದಾರೆ.


ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ, ಕಡಬದ ಬಿಳಿನೆಲೆಯಿಂದ ಪ್ರತಿದಿನ ಮಂಗಳೂರಿಗೆ ಪ್ರಯಾಣಿಸಲು ಕಷ್ಟವಾಗುತ್ತಿದ್ದ ಕಾರಣ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಸಹಪಾಠಿ ಮಮತಾ ಅವರ ನಿವಾಸದಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದರು. ಈ ಸಂದರ್ಭದಲ್ಲಿ, ತಮ್ಮ ಮನೆಯ ಜಮೀನಿನ ದಾಖಲೆಗಳಲ್ಲಿ ಸಮಸ್ಯೆಯಿರುವುದಾಗಿ ಮಮತಾ ಅವರಲ್ಲಿ ತಿಳಿಸಿದ್ದರು. ಇದನ್ನು ಸರಿಪಡಿಸಿಕೊಡಬಹುದೆಂದು ಮಮತಾ ಅವರ ಪತಿ ಜಯರಾಮ ಹೇಳಿದ್ದರಿಂದ ಆ.17ರಂದು ಜಯರಾಮ, ಯುವತಿಯ ಮನೆಯ ದಾಖಲೆಗಳನ್ನು ಪಡೆದುಕೊಂಡು ಆಕೆಯನ್ನು ಶಾಸಕರ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಅಂದು ಶಾಸಕರು ಕಚೇರಿಯಲ್ಲಿ ಇಲ್ಲದ ಕಾರಣ ಇಬ್ಬರೂ ವಾಪಸ್ ಮಂಗಳೂರಿಗೆ ತೆರಳಿದ್ದರು.ನಂತರ ಆಗಸ್ಟ್ 23ರಂದು ತನಗೆ ಕರೆ ಮಾಡಿದ ಜಯರಾಮ, ಮರುದಿನ ಒಬ್ಬಳೇ ಪುತ್ತೂರಿಗೆ ಬರುವಂತೆ ತಿಳಿಸಿ,ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಹೇಳಿದ್ದರಿಂದ ಆಗಸ್ಟ್ 24ರಂದು ಪುತ್ತೂರಿಗೆ ಬಂದ ತನ್ನನ್ನು ಶಾಸಕರ ಕಚೇರಿಗೆ ಕರೆದೊಯ್ದಾಗ ಅಲ್ಲಿ ಶಾಸಕರು ಇರಲಿಲ್ಲ. ಬಳಿಕ ಜಯರಾಮ ತನ್ನ ಸ್ಕೂಟರ್‌ನಲ್ಲಿ ನನ್ನನ್ನು ಪುತ್ತೂರು ಕಸಬಾ ಗ್ರಾಮದ ನೆಲ್ಲಿಗುಂಡಿಯಲ್ಲಿರುವ ಆತನ ಮನೆಗೆ ಕರೆದುಕೊಂಡು ಹೋಗಿದ್ದು, ಮನೆಯೊಳಗೆ ಯಾರೂ ಇಲ್ಲದ ಸಂದರ್ಭದಲ್ಲಿ ಒಳಗೆ ಕರೆದೊಯ್ದು ಬಾಗಿಲು ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.



ಈ ವೇಳೆ ತಾನು ಜೋರಾಗಿ ಬೊಬ್ಬೆ ಹಾಕಿ, ಬಾಗಿಲು ತೆರೆದು ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಜಯರಾಮ ಬೆದರಿಕೆ ಹಾಕಿದ್ದಾಗಿಯೂ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.ಇದಾದ ಬಳಿಕವೂ ಜಯರಾಮ ಪದೇಪದೇ ಕಿರುಕುಳ ನೀಡುತ್ತಿದ್ದು, ತನ್ನ ಬೇಡಿಕೆಗೆ ಒಪ್ಪುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.ಆರೋಪಿಯ ಬೆದರಿಕೆಯಿಂದ ಹಾಗೂ ತನ್ನ ಮನೆಯವರಿಗೆ ತೊಂದರೆಯಾಗಬಹುದೆಂಬ ಭಯದಿಂದ ಈವರೆಗೆ ದೂರು ನೀಡಿರಲಿಲ್ಲ. ಇದೀಗ ಮನೆಯವರಿಗೆ ವಿಷಯ ತಿಳಿಸಿ ದೂರು ನೀಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಆಕೆಯ ದೂರಿನ ಮೇರೆಗೆ ಆರೋಪಿ ಜಯರಾಮನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










