ಪುತ್ತೂರು:ತಿಂಗಳ ಹಿಂದೆ ಮಹಿಳೆಯೋರ್ವರಿಗೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯಾಗಿರುವ ಆಕೆಯ ಪತಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪೆರ್ನೆ ಗ್ರಾಮದ ಅಡಿಕೆಹಿತ್ಲು ನಿವಾಸಿ ಶ್ರೀಮತಿ ಶೋಭಾ(42ವ.) ಎಂಬವರು ನೀಡಿದ್ದ ದೂರಿನ ಮೇರೆಗೆ ಆಕೆಯ ಪತಿ ಗಂಗಾಧರ ಶೆಟ್ಟಿ(58ವ.)ಮತ್ತು ಆತನ ಆಕ್ಕನ ಮಗ ಹರಿಪ್ರಸಾದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಜು.20ರಂದು ಘಟನೆ ನಡೆದಿತ್ತು.ತಾನು ಗಂಡ, ಮಕ್ಕಳೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದೇನೆ.ಜು.20ರಂದು ಪೆರ್ನೆ ಹೊಸಮನೆ ಶಂಕರ್ಮೋಹನ್ ಪೂಂಜ ಎಂಬವರ ಮನೆಗೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ ವಿಶ್ರಾಂತಿ ಸಮಯ ಮನೆಗೆ ಬಂದು ಹಳೆಯ ಮನೆಯ ಹತ್ತಿರ ಇದ್ದ ಸಮಯ ಪತಿ ಅಲ್ಲಿಗೆ ಬಂದು ಹಲ್ಲೆ ನಡೆಸಿ ಬೈದು ಮಾನಸಿಕ ಕಿರುಕುಳ ನೀಡಿದ್ದರು.ಗಂಡನ ಅಕ್ಕನ ಮಗ ಹರಿಪ್ರಸಾದ್ ಬಂದು ಬೈದು, ಹೊಡೆದು ಮಾನಭಂಗಕ್ಕೆ ಯತ್ನಿಸಿದ್ದ.ಬೊಬ್ಬೆ ಕೇಳಿ ನನ್ನ ಮಗ ಪವಿತ್ ಅಲ್ಲಿಗೆ ಬಂದಿದ್ದು ಅವನಿಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶೋಭಾರವರು ಪೊಲೀಸರಿಗೆ ದೂರು ನೀಡಿದ್ದರು.ಜಮೀನಿನ ವಿಚಾರ ಮತ್ತು ಈ ಹಿಂದೆ ತಾನು ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಕಾರಣಕ್ಕಾಗಿ ಈ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಅವರು ತಿಳಿಸಿದ್ದರು.ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದ ಆರೋಪಿ ಗಂಗಾಧರ ಶೆಟ್ಟಿಯವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ, ಕು.ಹರ್ಷಿತಾ ವಾದಿಸಿದ್ದರು.