ಧರ್ಮಪಾಲನಾಥ ಶ್ರೀಗಳ ನೇತೃತ್ವದಲ್ಲಿ ಗೌಡ ಸಂಘದಲ್ಲಿ ಪ್ರಮುಖರ ಸಭೆ
ಪುತ್ತೂರು:ಮಂಗಳೂರಿನ ಬಾವುಟಗುಡ್ಡೆಯಲ್ಲಿ 1837ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಸಮರವೀರ ಕೆದಂಬಾಡಿ ರಾಮಯ್ಯ ಗೌಡರನ್ನು ಇತಿಹಾಸಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡ ಕಂಚಿನ ಪ್ರತಿಮೆ ಆ.29ರಂದು ಪುತ್ತೂರಿಗೆ ಬರುವ ಸಂದರ್ಭ ಪುತ್ತೂರಿನಲ್ಲಿ ಸಾರ್ವಜನಿಕವಾಗಿ ಸ್ವಾಗತಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಆ.22ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಭಾರತದಲ್ಲಿ ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ ಸಂಗ್ರಾಮ ೧೮೫೭ ಸಿಪಾಯಿ ದಂಗೆ ಎನ್ನಲಾಗುತ್ತದೆ.ಆದರೆ ಅದಕ್ಕೂ ಮೊದಲೇ 1837ರಲ್ಲಿ ಕರ್ನಾಟಕದ ದ.ಕ.ಜಿಲ್ಲೆಯ ಸುಳ್ಯದಲ್ಲಿ ರೈತರೇ ಬ್ರಿಟಿಷರ ವಿರುದ್ಧ ದಂಗೆ ಎದ್ದಿರುವ ಬಗ್ಗೆ ದಾಖಲೆ ಇದೆ. ಈ ಸತ್ಯಾಂಶವನ್ನು ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ದೇಶಕ್ಕೆ ತಿಳಿಸುವ ಕಾಲ ಹತ್ತಿರ ಬಂದಿದೆ. ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಬೆಳಕು ಚೆಲ್ಲದ ಮಹಾನ್ ನಾಯಕನ ಸಾಧನೆಗೆ ಗೌರವ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಶ್ರೀಗಳು ಸಭೆಯಲ್ಲಿ ಹೇಳಿದರು.ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಬೆಳಿಗ್ಗೆ 11.30ಕ್ಕೆ ಪುತ್ತೂರಿಗೆ ಬರಲಿದೆ.ಬಳಿಕ ಪೇಟೆಯಲ್ಲಿ ವಾಹನ ಜಾಥಾ ಸಾಗಿ ಕಲ್ಲೇಗ ಭಾರತ್ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.ಜಾಥಾದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಚರಿತ್ರೆಯನ್ನು ತಿಳಿಸುವ ಧ್ವನಿವರ್ಧಕ, ಕಟೌಟ್, ಧ್ವಜಗಳು ಇರಲಿವೆ.ಈ ನಿಟ್ಟಿನಲ್ಲಿ ಒಂದೊಂದು ಕಾರ್ಯಕ್ರಮದ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರತಿಯೊಬ್ಬರು ನಿರ್ವಹಿಸಬೇಕೆಂದು ಶ್ರೀಗಳು ಕರೆ ನೀಡಿದರು.
ಪುತ್ತೂರಿನಲ್ಲಿ ವಾಹನ ಜಾಥಾ ಯಶಸ್ವಿಯಾಗಬೇಕು: ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸ್ವಾತಂತ್ರ್ಯವೀರನ ನೆನಪಿನಲ್ಲಿ,ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಡಗರದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ನಿರ್ಮಿಸಲಾಗುತ್ತಿದೆ.ಸುಳ್ಯ ಮಾರ್ಗವಾಗಿ ಪುತ್ತೂರಿಗೆ ಬರುವ ಕೆದಂಬಾಡಿ ರಾಮಯ್ಯ ಗೌಡ ಕಂಚಿನ ಪ್ರತಿಮೆಯನ್ನು ಪೆರ್ನಾಜೆಯಲ್ಲಿ ಸ್ವಾಗತಿಸಿ, ಪುತ್ತೂರು ದರ್ಬೆಯಲ್ಲಿ ಮಹಿಳಾ ಸಂಘಟನೆಯಿಂದ ಪುಷ್ಪಾರ್ಚನೆ ಪುತ್ತೂರು ಪೇಟೆಯುದ್ದಕ್ಕೂ ನಡೆಯಬೇಕು. ಗಾಂಧಿಕಟ್ಟೆಯಲ್ಲಿ ವಿಶೇಷ ಗೌರವ ನೀಡಬೇಕು.ಒಟ್ಟು ಸಾರ್ವಜನಿಕವಾಗಿ ವಾಹನ ಜಾಥಾ ಯಶಸ್ವಿಯಾಗಿ ನಡೆಯಬೇಕೆಂದರು.
ಗೌಡ ಸಂಘದ ವಲಯದಿಂದ ಹೆಚ್ಚಿನ ಸಂಖ್ಯೆ ನಿರೀಕ್ಷೆ: ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ತೆಂಕಿಲ ಅವರು ಮಾತನಾಡಿ ಕೆದಂಬಾಡಿ ರಾಮಯ್ಯ ಗೌಡ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅವರಿಗೆ ಸಾರ್ವಜನಿಕ ವಲಯದಲ್ಲಿ ಗೌರವ ನೀಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿ ಬೇಕು.ಗೌಡ ಸಂಘದ ವಲಯ ಮಟ್ಟದಿಂದ ಜಾಥಾದಲ್ಲಿ ಎಲ್ಲರು ಸೇರಿ ಮಂಗಳೂರಿನ ತನಕ ಹೋಗುವ ವ್ಯವಸ್ಥೆ ಆಗಬೇಕು ಎಂದರು.ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ.ಗೌಡ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್, ಸಂಘದ ಪದಾಽಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.