ಕೆಲವೆಡೆ ಶೇ.40ಕ್ಕಿಂತಲೂ ಹೆಚ್ಚು ಕಮಿಷನ್ ಕೇಳುತ್ತಿದ್ದಾರೆ ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದಿಂದ ಕೂಡಿದೆ : ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ

0

 

  • ಎಲ್ಲ ಶಾಸಕರೂ ಶೇ.10ರಿಂದ 15ರಷ್ಟು ಕೇಳುತ್ತಿದ್ದಾರೆ
  • ಶೇ.40 ಕಮಿಷನ್ ಬಗ್ಗೆ ಪ್ರಧಾನಿಗೆ ಮತ್ತೊಮ್ಮೆ ಪತ್ರ
  • ನಮ್ಮ ಹೋರಾಟ ಮುಂದುವರಿಯಲಿದೆ

ಬೆಂಗಳೂರು:ಇದು ಅತ್ಯಂತ ಭ್ರಷ್ಟ ಸರ್ಕಾರ. ನನ್ನ ಸೇವಾ ಅವಧಿಯಲ್ಲೇ ಇಂತಹ ಸರ್ಕಾರವನ್ನು ನೋಡಿಲ್ಲ. ಶೇ 40 ಮಾತ್ರವಲ್ಲ ಕೆಲವು ಕಡೆ ಅದಕ್ಕಿಂತಲೂ ಹೆಚ್ಚು ಕಮಿಷನ್ ಕೇಳುತ್ತಿದ್ದಾರೆ.ಎಲ್ಲ ಶಾಸಕರೂ ಶೇ.10ರಿಂದ 15ರಷ್ಟು ಕೇಳುತ್ತಿದ್ದಾರೆ.ಇಡೀ ವ್ಯವಸ್ಥೆ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ.ಒಬ್ಬರು, ಇಬ್ಬರು ಅಂತ ಅಲ್ಲ, ಯಾರಿಗೂ ರ‍್ಯಾಂಕಿಂಗ್ ಕೊಡಲು ಆಗುವುದಿಲ್ಲ. ಎಲ್ಲ ಸಚಿವರು, ಶಾಸಕರು ನಂಬರ್ 1 ಸ್ಥಾನದಲ್ಲಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಮನುಷ್ಯ. ಆದರೆ, ಅವರ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ. ಮುಖ್ಯಮಂತ್ರಿ ಆದೇಶ ನೀಡಿದರೂ ಹಣ ಬಿಡುಗಡೆ ಆಗುತ್ತಿಲ್ಲ” ಎಂದರು.

“ಕೋರ್ಟ್ಗೆ ಹೋಗಿ ಗುತ್ತಿಗೆ ಹಣ ಬಿಡಿಸಿಕೊಂಡಿದ್ದೇವೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಲೆಕ್ಷನ್ ಮಾಡಲು ಹೇಳಿದ್ದಾರೆ. ಇವರಿಗೆಲ್ಲಾ ನಾಚಿಕೆ ಆಗಬೇಕು. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೀಗೆ ಹೇಳಿದರೆ ಹೇಗೆ? ಅವರಷ್ಟೇ ಅಲ್ಲ, ಇನ್ನೂ ಹಲವು ಸಚಿವರು ಹೀಗೆ ಮಾಡುತ್ತಿದ್ದಾರೆ” ಎಂದು ಕೆಂಪಣ್ಣ ಆರೋಪಿಸಿದರು.

“ನಮ್ಮ ಸಂಘದ ಇಬ್ಬರಿಗೆ ತೊಂದರೆ ಕೊಟ್ಟಿದ್ದರು. ಸಂಘವನ್ನೇ ಒಡೆಯಲು ಮುಂದಾಗಿದ್ದರು. ಶೇ.40 ಕಮಿಷನ್ ಬಗ್ಗೆ 15 ದಿನಗಳಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇನೆ.ಸ್ವಾತಂತ್ರ‍್ಯ ದಿನಾಚರಣೆ ದಿನ ಭ್ರಷ್ಟಾಚಾರ ದೇಶಕ್ಕೆ ಮಾರಕವೆಂದು ಅವರು ಭಾಷಣ ಮಾಡಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ.ಆದರೆ, ನಾವು ಕೊಟ್ಟಿದ್ದ ದೂರಿನ ಬಗ್ಗೆ ಇನ್ನೂ ಯಾಕೆ ಕ್ರಮಕೈಗೊಂಡಿಲ್ಲ” ಎಂದು ಕೆಂಪಣ್ಣ ಪ್ರಶ್ನಿಸಿದರು.
“ನಮ್ಮ ಹೋರಾಟ ಮುಂದುವರಿಯಲಿದೆ. ಮುಖ್ಯಮಂತ್ರಿ ಮಾತನ್ನು ಅಧಿಕಾರಿಗಳು ಕೇಳದ ಸ್ಥಿತಿ ನಿರ್ಮಾಣವಾಗಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಬದಲಾಯಿಸಲು ಮುಖ್ಯಮಂತ್ರಿ ಹೇಳಿದ್ದರು.ಆದರೆ, ಅವರ ಮಾತೇ ಕೇಳ್ತಾ ಇಲ್ಲ”ಎಂದರು.

“ನಾವು ಸಿದ್ದರಾಮಯ್ಯಗೆ ಯಾವುದೇ ದಾಖಲೆ ಕೊಟ್ಟಿಲ್ಲ. ದಾಖಲೆಗಳನ್ನು ಕೊಡುವುದು ದೊಡ್ಡದಲ್ಲ. ಕೊಟ್ಟ ಬಳಿಕ ದೊಡ್ಡ ಸಮಸ್ಯೆಗಳು ಆಗುತ್ತದೆ. ತನಿಖೆ ಮಾಡಿದಾಗ ದಾಖಲೆ ಕೊಡುತ್ತೇವೆ.ನ್ಯಾಯಾಂಗ ತನಿಖೆ ನಡೆಸಲಿ. ಈಗ ಸಂಪೂರ್ಣ ವ್ಯವಸ್ಥೆಯೇ ಹದಗೆಟ್ಟಿದೆ. ಕೆಲವು ಸಚಿವರು, ಪಿಡಬ್ಲ್ಯುಡಿ ಸಚಿವರು ನಮ್ಮ ಸಂಘಟನೆ ಒಡೆಯಲು ಪ್ರಯತ್ನ ಮಾಡಿದರು.ಮೂರು ವರ್ಷಗಳಿಂದ ಬಿಲ್ ಬಾಕಿ ಇದೆ. ಸಿದ್ದರಾಮಯ್ಯ ಅವರಿಗೆ ಕೆಲವು ಮಾಹಿತಿಗಳನ್ನು ನೀಡಿದ್ದೇನೆ. ಸದನದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂದಿದ್ದಾರೆ.
ದಾಖಲೆ ಯಾರಿಗೆ ಕೊಟ್ಟರೂ ಯಾರು ಕೊಟ್ಟರು ಅಂತ ಗೊತ್ತಾಗುತ್ತದೆ.ನಮ್ಮ ಗುತ್ತಿಗೆದಾರರಿಗೆ ಭಯ ಇದೆ. ಸಮಯ ಬಂದಾಗ ಮತ್ತಷ್ಟು ಮಾಹಿತಿ ಕೊಡುತ್ತೇವೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿ ಎಲ್ಲರೂ ಭ್ರಷ್ಟರಾಗಿದ್ದಾರೆ. ಕೆಲವು ಕಡೆ ಶೇ.100 ಭ್ರಷ್ಟಾಚಾರ ಇದೆ. ಕೆಲವು ಕಡೆ ಒಂದು ಪೈಸೆ ಕೆಲಸ ಮಾಡದೇ ಶೇ.100ನ್ನೂ ತಿಂದಿಲ್ಲವೇ” ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಪಣ್ಣ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here