ಆರ್.ಎಸ್.ಎಸ್. ಸಹ ಸರಕಾರ್ಯವಾಹ ಮುಕುಂದ್ ನೇತೃತ್ವದಲ್ಲಿ ನಡೆಯಲಿರುವ ಚರ್ಚೆ
ಹಿಂದೂ ಸಂಘಟನೆ ಮತ್ತು ಬಿಜೆಪಿ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಸಾಧ್ಯತೆ
ಪುತ್ತೂರು: ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಆರ್.ಎಸ್.ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ಆ.26ರಿಂದ ಆ.28ರವರೆಗೆ ನಡೆಯಲಿದೆ.
ಆರ್.ಎಸ್.ಎಸ್. ಸಹ ಸರಕಾರ್ಯವಾಹ ಮುಕುಂದರವರ ನೇತೃತ್ವದಲ್ಲಿ ಬೈಠಕ್ ನಡೆಯಲಿದೆ. ಆರ್.ಎಸ್.ಎಸ್. ಮತ್ತು ಅದರ ಪರಿವಾರ ಸಂಘಟನೆಗಳ ವಿಚಾರದಲ್ಲಿ ಚರ್ಚೆ ನಡೆಸಲು ಪ್ರತೀ ವರ್ಷ ಬೈಠಕ್ ನಡೆಯುತ್ತದೆಯಾದರೂ ಚುನಾವಣೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಬೈಠಕ್ ವಿಶೇಷ ಮಹತ್ವ ಪಡೆದುಕೊಂಡಿದೆ. ಆರ್.ಎಸ್.ಎಸ್. ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ್, ಕ್ಷೇತ್ರೀಯ ಪ್ರಚಾರಕ ಸುಧೀರ್, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಸೇರಿದಂತೆ ಸಂಘದ ಪ್ರಮುಖರು ಮೂರು ದಿನಗಳ ಬೈಠಕ್ ನಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಆರ್.ಎಸ್.ಎಸ್ ಅಖಿಲ ಭಾರತ ಪ್ರತಿನಿಧಿ ಸಭಾದ ಪ್ರಮುಖರು ಸೇರಿ 800 ಮಂದಿ ಅಪೇಕ್ಷಿತರು ಆಗಮಿಸಲಿದ್ದಾರೆ. ಆಗಸ್ಟ್ 27ರಂದು ಆರ್.ಎಸ್.ಎಸ್ ಮತ್ತು ಬಿಜೆಪಿ ಸಮನ್ವಯ ಬೈಠಕ್ ನಡೆಯಲಿದೆ.
ಬಿಜೆಪಿಯಿಂದ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದ್ದು ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಹಲವು ವಿಚಾರಗಳ ಬಗ್ಗೆ ಚರ್ಚೆಗಳಾಗುವ ಸಾಧ್ಯತೆಗಳಿವೆ. ಅಗಸ್ಟ್ 28ರ ಕೊನೆಯ ದಿನದ ಬೈಠಕ್ ನಲ್ಲಿ ಆರ್.ಎಸ್.ಎಸ್ ದಕ್ಷಿಣ ಪ್ರಾಂತದ ಜವಾಬ್ದಾರಿಗಳ ಬದಲಾವಣೆಯ ಘೋಷಣೆಯಾಗುವ ಸಾಧ್ಯತೆಗಳಿದೆ. ಒಟ್ಟು ಬೈಠಕ್ ಅಲ್ಲಿ ಸಂಘದ ಕಾರ್ಯಚಟುವಟಿಕೆ ಹಾಗೂ ಪಕ್ಷದ ನಡೆಯ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ. ಕಾರ್ಯಕರ್ತರ ಹತ್ಯೆಗಳಿಗೆ ಕಡಿವಾಣ ಹಾಕುವ ಬಗ್ಗೆಯೂ ಬಿಜೆಪಿಗೆ ಸಂಘ ಬಿಸಿ ಮುಟ್ಟಿಸುವುದೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಳ್ಳಾರೆಯಲ್ಲಿ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಕೊಲೆಯ ನಂತರದ ಬೆಳವಣಿಗೆಯಲ್ಲಿ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳ ನಡುವೆ ಬಹುದೊಡ್ಡ ಅಂತರ ಸೃಷ್ಠಿಯಾಗಿದೆ. ಪರಸ್ಪರ ವಾಗ್ವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಈ ವಿಚಾರದ ಕುರಿತು ಈಗಾಗಲೇ ಸಂಘ ಪರಿವಾರದ ನಾಯಕರು ಕಾರ್ಯಕರ್ತರ ಜತೆ ಪುತ್ತೂರು ಸಹಿತ ವಿವಿಧ ತಾಲೂಕುಗಳಲ್ಲಿ ಚರ್ಚೆ ನಡೆಸಿದ್ದಾರೆ. ಈ ವಿಚಾರ ಬೈಠಕ್ ನಲ್ಲಿಯೂ ಚರ್ಚೆಗೆ ಬರುವ ನಿರೀಕ್ಷೆ ಇದೆ. ಅಲ್ಲದೆ, ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕವಾಗಿ ತೆರೆ ಬೀಳುವ ಸಾಧ್ಯತೆ ಇದೆ.