ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಪರಿಹಾರ ಪ್ರಾಯಶ್ಚಿತ ಹೋಮ, ವಿವಿಧ ಸಮರ್ಪಣೆ

0

  •  ವೇದದ ಒಂದೊಂದು ಅಕ್ಷರದಲ್ಲೂ ಮಹಾಲಿಂಗೇಶ್ವರ ಕೂತಿದ್ದಾರೆ-ಶಂಕರನಾರಾಯಣ ಭಟ್
  •  ಇದು ಪ್ರಾರಂಭದ ನಿವೃತ್ತಿ,ಮುಂದಿನ ಹಂತದಲ್ಲಿ ಎಲ್ಲರೂ ಸೇರಬೇಕು-ರವೀಶ ತಂತ್ರಿ
ಚಿನ್ನದ ತ್ರಿನೇತ್ರ, ಬೆಳ್ಳಿ ನಾಣ್ಯಗಳ ಸಮರ್ಪಣೆ

ಪುತ್ತೂರು:ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ದೈವಜ್ಞರು ತಿಳಿಸಿದ ಪ್ರಕಾರ ವಿವಿಧ ಪರಿಹಾರ ಕಾರ್ಯಕ್ರಮಗಳು ಮತ್ತು ಸಮರ್ಪಣೆಗಳು ಆ.26ರಂದು ಬ್ರಹ್ಮಶ್ರೀ ವೇ.ಮೂ.ರವೀಶ ತಂತ್ರಿ ಕುಂಟಾರು ಅವರ ನೇತೃತ್ವದಲ್ಲಿ ಜರುಗಿತು.

ಪರಿಹಾರ ಕಾರ್ಯಕ್ರಮದಲ್ಲಿ 12 ತೆಂಗಿನಕಾಯಿ ಗಣಪತಿ ಹವನ, ಶತರುದ್ರಾಭಿಷೇಕ, ಪವಮಾನ ಅಭಿಷೇಕ ಸಹಿತ ಪರಿವಾರ ದೇವರುಗಳಿಗೆ, ದೈವಗಳಿಗೆ ವಿಶೇಷ ಪೂಜೆ ಮತ್ತು ವಿವಿಧ ಸಮರ್ಪಣೆಗಳು ಜರುಗಿತು.ದೇವರಿಗೆ ಒಂದು ಚಿನ್ನದ ತ್ರಿನೇತ್ರ ಸಮರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಭಕ್ತರು ಚಿನ್ನದ ತುಂಡು, ಬೆಳ್ಳಿಯ ತುಂಡು, ೫ ರೂಪಾಯಿ ಒಳಗಿನ ಚಲಾವಣೆಯಲ್ಲಿರುವ ನಾಣ್ಯಗಳನ್ನು ಕಲಶದಲ್ಲಿ ಸಮರ್ಪಣೆ ಮಾಡಿದರು.ಒಂದು ಕೋಲು ಎತ್ತರದ ಬೆಳ್ಳಿಯ ತುಪ್ಪ ದೀಪವನ್ನು ದೇವರಿಗೆ ಸಮರ್ಪಿಸಿ ಪ್ರಾರ್ಥಿಸಲಾಯಿತು.ಹನ್ನೊಂದು ರುದ್ರರನ್ನು ಸಂಕಲ್ಪಿಸಿ ಸಕಲೋಪಚಾರಗಳಿಂದ ಪೂಜಿಸಿ, ವೈದಿಕರಿಗೆ ವಸ ಉತ್ತರೀಯ ಊಟೋಪಚಾರ ಕೊಟ್ಟು ದ್ರವ್ಯ ಗಂಟು ಕಟ್ಟಿ ಸಮರ್ಪಿಸಿ ಆಶೀರ್ವಾದ ಪೂರ್ವಕ ಮಂತ್ರಾಕ್ಷತೆ, ಪ್ರವಚನ ಪಡೆಯುವ ಕಾರ್ಯಕ್ರಮ ನಡೆಯಿತು.

ವೇದದ ಒಂದೊಂದು ಅಕ್ಷರದಲ್ಲೂ ಮಹಾಲಿಂಗೇಶ್ವರ ಕೂತಿದ್ದಾರೆ: ಹಿರಿಯರಾದ ವೇ.ಮೂ.ಪಲ್ಲತ್ತಡ್ಕ ಶಂಕರನಾರಾಯಣ ಭಟ್ ಅವರು ಆಶೀರ್ವಚನ ನೀಡಿದರು.ಧರ್ಮಕ್ಕೆ ಆಧಾರ ವೇದ.ವೇದದ ಒಂದೊಂದು ಅಕ್ಷರದಲ್ಲೂ ಮಹಾಲಿಂಗೇಶ್ವರ ದೇವರು ಕೂತಿದ್ದಾರೆ.ವೇದಗಳನ್ನು ಯಾರು ಕಲಿಸಿದ್ದಾರೋ ಅವರು ಸಾಕ್ಷಾತ್ ಪರಮೇಶ್ವರನೇ.ಅದಕ್ಕೆ ಸಂಶಯ ಬೇಡ. ಧ್ವನಿ, ಸ್ಥಾನ, ಕರಣ, ಪ್ರಯತ್ನ, ಸ್ವರ, ತ್ಯಾಗಿ ಸೇರಿದಂತೆ 24 ಅಂಶಗಳನ್ನು ಕಲಿಯುವುದೇ ಸಲಕ್ಷಣ.ಹಾಗಾಗಿ ಮಹಾಲಿಂಗೇಶ್ವರ ದೇವರು ಕೇಳಿದನ್ನು ಕೊಡುವಂಥವರು.ಈ ನಿಟ್ಟಿನಲ್ಲಿ ಆತನ ಆರಾಧನೆ ಅತೀ ಅಗತ್ಯ ಎಂದವರು ಹೇಳಿದರು.

ಮುಂದಿನ ಹಂತದ ನಿವೃತ್ತಿಯಲ್ಲೂ ಎಲ್ಲರೂ ಸೇರಬೇಕು: ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಮಾತನಾಡಿ, ಇವತ್ತು ಪ್ರಾರಂಭದ ನಿವೃತ್ತಿಯಲ್ಲಿದ್ದೇವೆ.ಮುಂದೆ ಇನ್ನೂ ಬೇರೆ ಬೇರೆ ನಿವೃತ್ತಿಗಳಿವೆ ಅದರಲ್ಲೂ ಎಲ್ಲರೂ ಸೇರಬೇಕು.ಎಲ್ಲರು ಸೇರಿದಾಗ ಅದಕ್ಕೆ ಪೂರ್ಣಾಹುತಿ ಬರುತ್ತದೆ.ಕಿಂಚಿತ್ ಭೇದಗಳನ್ನು ಇಟ್ಟು ಕೊಂಡು ಹೋಗಬಾರದೆಂಬ ಕಲ್ಪನೆ,ಈ ನಿಟ್ಟಿನಲ್ಲಿ ಇವತ್ತು ತಾಂತ್ರಿಕ ಪರಂಪರೆಯೂ ಬೇಕು, ವೈದಿಕ ಪರಂಪರೆಯೂ ಬೇಕೆಂಬ ಕಲ್ಪನೆಯಂತೆ ಕಾರ್ಯಕ್ರಮ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ಡಾ.ಸುಧಾ ಎಸ್ ರಾವ್, ಬಿ.ಕೆ.ವೀಣಾ, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ,ಸಂತೋಷ್ ಕುಮಾರ್ ಎ, ಎನ್.ಕರುಣಾಕರ ರೈ ಸೇರಿದಂತೆ ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದರು.ದೇವಳದ ಪ್ರಧಾನ ಅರ್ಚಕ, ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ.ಮೂ.ವಿ.ಎಸ್.ಭಟ್ ವೈದಿಕ ಕಾರ್ಯ ನಿರ್ವಹಿಸಿದರು.ವೇ.ಮೂ.ವಸಂತ ಕೆದಿಲಾಯ ನಿತ್ಯ ಗಣಪತಿ ಹವನ ನೆರವೇರಿಸಿದರು.

11 ರುದ್ರರಿಗೆ ಪೂಜೆ

ತಾಂತ್ರಿಕ ಪರಂಪರೆಯೂ ಬೇಕು, ವೈದಿಕ ಪರಂಪರೆಯೂ ಬೇಕೆಂಬ ಕಲ್ಪನೆಯಂತೆ ತಾಂತ್ರಿಕ ಪರಂಪರೆಯವರಾದ, ಹಿಂದೆ ಕ್ಷೇತ್ರದಲ್ಲಿ ತಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಕುಡುಪು ತಂತ್ರಿ ಕುಟುಂಬ, ಮುಳಿಯ, ಕುಂಟಾರು ಶ್ರೀಧರ್ ತಂತ್ರಿ, ದೇಲಂಪಾಡಿ ತಂತ್ರಿ ಪರಂಪರೆಯವರು ಮತ್ತು ವೈದಿಕರಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವೇ.ಮೂ.ಕೆಶೆಕೋಡಿ ಸೂರ್ಯನಾರಾಯಣ ಭಟ್, ಹಿರಿಯರಾದ ವೇ.ಮೂ.ಪಲ್ಲತ್ತಡ್ಕ ಶಂಕರನಾರಾಯಣ ಭಟ್ ಸೇರಿದಂತೆ ಬ್ರಹ್ಮತ್ವವನ್ನು ತಿಳಿದ ಜ್ಞಾನಿಗಳನ್ನು ಹನ್ನೊಂದು ರುದ್ರರನ್ನಾಗಿ ಸಂಕಲ್ಪಿಸಿ ಅವರನ್ನು ಸಕಲೋಪಚಾರಗಳಿಂದ ಪೂಜಿಸಿ, ವಸ, ಉತ್ತರೀಯ, ಊಟೋಪಚಾರ ನೀಡಿ ಅವರಿಂದ ಆಶೀರ್ವಾದ ಪೂರ್ವಕ ಮಂತ್ರಾಕ್ಷತೆಯನ್ನು ಪಡೆಯಲಾಯಿತು.

LEAVE A REPLY

Please enter your comment!
Please enter your name here