ಕುಂಬ್ರದಲ್ಲಿ ಕಾರ್ಮಿಕರಿಗೆ, ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

0

ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ: ಗಣಪತಿ ಹೆಗ್ಡೆ

ಪುತ್ತೂರು: ಆರೋಗ್ಯ ಎನ್ನುವುದು ಅತ್ಯಂತ ಅಮೂಲ್ಯವಾದ ಸಂಪತ್ತು ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆರೋಗ್ಯ ಒಂದಿದ್ದರೆ ಯಾವುದೇ ಸಂಪತ್ತನ್ನು ಬೇಕಾದರೂ ಸಂಪಾದಿಸಬಹುದು ಆದ್ದರಿಂದ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಪುತ್ತೂರು ಹಿರಿಯ ಕಾರ್ಮಿಕ ನಿರೀಕ್ಷ ಗಣಪತಿ ಹೆಗ್ಡೆ ಹೇಳಿದರು.

ಅವರು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಬಿ.ಎಂ.ಎಸ್ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಕುಂಬ್ರ ವಲಯ ಇದರ ಆಶ್ರಯದಲ್ಲಿ ಆ.28 ರಂದು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕಾರ್ಮಿಕರಿಗೆ ಮತ್ತು ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಗಣಪತಿ ಹೆಗ್ಡೆಯವರು ಮಾಹಿತಿ ನೀಡಿದರು.

ಕುಂಬ್ರ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ಎಚ್.ಎಲ್.ಎಲ್ ಲೈಫ್ ಕೇರ್ ಲಿ.ಮಂಗಳೂರು ಇದರ ಜಿಲ್ಲಾ ಸಂಯೋಜಕ ಪಿ.ವಿ ಸುಬ್ರಹ್ಮಣ್ಯ , ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಬಿಎಂಎಸ್ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘ ಕುಂಬ್ರ ವಲಯದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲರವರುಗಳು ಸಂದರ್ಭೋಚಿತವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಜಯಂತ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ದಯಾನಂದ ವಂದಿಸಿದರು. ಕುಂಬ್ರ, ಕಾವು, ಈಶ್ವರಮಂಗಲ, ಆರ್ಲಪದವು, ಸಂಟ್ಯಾರು, ತಿಂಗಳಾಡಿ ಭಾಗದ ಕಾರ್ಮಿಕರು ಭಾಗವಹಿಸಿದ್ದರು.

19 ಬಗೆಯ ಪರೀಕ್ಷೆ, 130 ಕ್ಕೂ ಅಧಿಕ ಮಂದಿ ಭಾಗಿ

ಶಿಬಿರ ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯ ತನಕ ನಡೆಯಿತು. ಶಿಬಿರದಲ್ಲಿ ವೈದ್ಯರ ಸಮಾಲೋಚನೆ,ಸಂಪೂರ್ಣ ದೈಹಿಕ ಪರೀಕ್ಷೆ, ಲಿವರ್ ಕಾರ್ಯ ಪರೀಕ್ಷೆ, ಆಡಿಯೋಮೆಟ್ರಿ ಸ್ಕ್ರೀನ್ ಟೆಸ್ಟ್,ದೃಷ್ಟಿ ತಪಾಸಣೆ, ಸಿಬಿಸಿ ಪರೀಕ್ಷೆ, ಇಎಸ್‌ಆರ್ ಪರೀಕ್ಷೆ,ರಕ್ತದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷೆ, ಕಿಡ್ನಿ ಕಾರ್ಯ ಪರೀಕ್ಷೆ, ಮಲೇರಿಯಾ ಪ್ಯಾರಸೈಟ್ ಪರೀಕ್ಷೆ, ಮೂತ್ರ ಪರೀಕ್ಷೆ, ರಕ್ತದ ಗುಂಪು ಪರೀಕ್ಷೆ ಸೇರಿದಂತೆ 19 ಬಗೆಯ ಪರೀಕ್ಷೆಗಳು ನಡೆಯಿತು. ಸುಮಾರು 130 ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here