ಪುತ್ತೂರು: ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಲೋಕೇಶ್ ಎಸ್.ಆರ್ ರವರ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿಗೆ ವರ್ಗಾವಣೆಗೊಂಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಎಸ್.ಆರ್ ರವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಯೋಗೇಶ್ ಕೆ ಅವರ ಮುಂಭಡ್ತಿಯಿಂದ ತೆರವಾದ ಸ್ಥಾನಕ್ಕೆ ವರ್ಗಾವಣೆಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶಿಸಿದ್ದಾರೆ.
2022ರಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇವರ ಅವಧಿಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಪುತ್ತೂರು ತಾಲೂಕು ಸತತವಾಗಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. 2024-25ನೇ ಸಾಲಿನಲ್ಲಿ ಪುತ್ತೂರು ತಾಲೂಕು ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ. 2023-24ರಲ್ಲಿ 53 ಶಾಲೆಗಳು ಶೇ.100 ಫಲಿತಾಂಶ ಗಳಿಸುವ ಮೂಲಕ ತಾಲೂಕು ಶೇ.97.47 ಫಲಿತಾಂಶ ದಾಖಲಿಸಿತ್ತು. 2024-25ರಲ್ಲಿ ಪುತ್ತೂರು ತಾಲೂಕು ಶೇ.94.08 ಫಲಿತಾಂಶದೊಂದಿಗೆ 29 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದೆ.

2023ರಲ್ಲಿ ರಾಜ್ಯ ಮಟ್ಟದ ಇಲಾಖೆಯ ಅಥ್ಲೆಟಿಕ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿರುತ್ತಾರೆ. ಅಲ್ಲದೆ ವಿಶೇಷವಾಗಿ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೂತನ ಕಟ್ಟಡ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ.
ವಿಷ್ಣುಪ್ರಸಾದ್ ಪ್ರಭಾರ ಬಿಇಓ;
ಲೋಕೇಶ್ ಎಸ್.ಆರ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಶಾಂತಿನಗರ ಸರಕಾರಿ ಪ್ರೌಢಶಾಲಾ ಮುಖ್ಯ ಗುರು, ಪ್ರಸ್ತುತ ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾಗಿರುವ ವಿಷ್ಣುಪ್ರಸಾದ್ ಸಿ. ಅವರು ಪ್ರಭಾರವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಬೀಳ್ಕೊಡುಗೆ:
ವರ್ಗಾವಣೆಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರಿಗೆ ಬೀಳ್ಕೊಡುಗೆ ಸಮಾರಂಭವು ಸೆ.11ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಿಕ್ಷಕರ ವಿವಿಧ ಸಂಘಟನೆಗಳು ನೇತೃತ್ವದಲ್ಲಿ ನಡೆಯಿತು.