ಕುಂಜಾರು ಮದಗ ಜನಾರ್ದನ ದೇವಸ್ಥಾನದಲ್ಲಿ 35 ನೇ ವರ್ಷದ ಗಣೇಶೋತ್ಸವ

0

  • ಗಣೇಶೋತ್ಸವದಿಂದ ಧಾರ್ಮಿಕ ಚಳುವಳಿ ಸಂಘಟಿತ

ಪುತ್ತೂರು; ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ನಡೆಯುವ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವು ಆ.31ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಹಿರಿಯ ಅರ್ಚಕರಾದ ಚಂದ್ರಶೇಖರ ಮಯ್ಯರವರ ಮಾರ್ಗದರ್ಶನದಲ್ಲಿ ಚಾಲನೆ ದೊರೆಯಿತು.

ಬೆಳಿಗ್ಗೆ ಗಣೇಶನ ವಿಗ್ರಹ ಆಗಮನದ ಬಳಿಕ ಬಿಂಬ ಶುದ್ಧಿ, ಗಣಪತಿ ವಿಗ್ರಹ ಪ್ರತಿಷ್ಠಾಪನೆ, ಗಣಪತಿ ಹೋಮ, ಸೇವಾ ಪೂಜೆಗಳು, ಬನ್ನೂರು ಅಯೋಧ್ಯನಗರ ನವೋದಯ ಮಹಿಳಾ ಮಂಡಲದವರಿಂದ ಭಜನೆ ನಡೆಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮಾತನಾಡಿ, ಹಿಂದು ಸಮಾಜ ಸಂಘಟಿತರಾಗಬೇಕು. ಹಿಂದು ಸಮಾಜ ಹೋರಾಟಕ್ಕೆ ದುಮುಕಬೇಕು. ಹಿಂದುಗಳಲ್ಲಿ ಧರ್ಮ ಜಾಗೃತಿಯಾಗಬೇಕು ಎಂಬ ಉದ್ದೇಶದಿಂದ ಮನೆ ಮನೆಗಳಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಇಂದು ಬೀದಿ ಬೀದಿಗಳಲ್ಲಿ ನಡೆಯುತ್ತಿದೆ. ಅದರ ಮೂಲಕ ಧಾರ್ಮಿಕ ಚಳುವಳಿ ನಡೆದು ಅಸಂಘಟಿತ ಹಿಂದು ಸಮಾಜ ಸಂಘಟಿತವಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಆದರ್ಶ ಆಸ್ಪತ್ರೆಯ ವೈದ್ಯ ಡಾ.ಎಂ.ಕೆ ಪ್ರಸಾದ್ ಮಾತನಾಡಿ, ಜಾತಿಯ ಹೆಸರಿನಲ್ಲಿ ವಿಭಜನೆ ಮಾಡಬಾರದು. ಜಾತಿ ಕಟ್ಟುಪಾಡುಗಳಿಂದ ಹಿಂದು ಸಮಾಜ ಹೊರಬರಬೇಕು. ನಮ್ಮೊಳಗೆ ಜಗಳವಾಡುವುದು ಸರಿಯಲ್ಲ. ಎಲ್ಲಾ ಜಾತಿಯವರು ಒಂದೇ. ಹೊಟೇಲ್ ನಲ್ಲಿ ಒಟ್ಟಿಗೆ ಕುಲಿತು ಊಟ ಮಾಡುವವರು ದೇವಸ್ಥಾನದಲ್ಲಿ ಪ್ರತ್ಯೇಕತೆ ಮಾಡುವುದು ಸರಿಯಲ್ಲ. ಶೇ.18 ರಷ್ಟಿರುವ ದಲಿತರೂ ಹಿಂದುಗಳೇ. ಅವರನ್ನು ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸೇರಿಸಿಕೊಳ್ಳಬೇಕು ಎಂದರು.

ಮದಗ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ದೇವಸ್ಥಾನದ ನಿವೃತ್ತ ಅರ್ಚಕ ಚಂದ್ರಶೇಖರ ಮಯ್ಯ ಹಾಗೂ ಗಣೇಶೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಜೊಯಿಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ
ಐ.ಎಂ.ಎ ಕೆ.ಎಸ್.ಬಿ ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಎಂ.ಕೆ ಪ್ರಸಾದ್ ಹಾಗೂ ಮದಗ ಶ್ರೀ ಜನಾರ್ದನ ದೇವಸ್ಥಾನದ ನಿವೃತ್ತ ಅರ್ಚಕ ಚಂದ್ರಶೇಖರ ಮಯ್ಯರವರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ನವೀನ್ ಮುಂಡಾಜೆ ಸ್ವಾಗತಿಸಿದರು. ಪೂವಪ್ಪ ದೇಂತಡ್ಕ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ನವೀನ್ ಮುಂಡಾಜೆ, ಹಾಗೂ ಪ್ರಧಾನ ಕಾರ್ಯದರ್ಶಿ ಶೇಖರ್ ಸ್ವಾಮಿಜಿಯವರಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು. ವ್ಯವಸ್ಥಾಪನಾ ಸದಸ್ಯ ಮಧುಸೂದನ ಪಡ್ಡಾಯೂರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

 

ಸಂಜೆ ಶೋಭಾಯಾತ್ರೆ;
ಸಂಜೆ ವಿಶೇಷ ರಂಗಪೂಜೆ, ಮಹಾಪೂಜೆ, ಶೋಭಾಯಾತ್ರೆ ನಡೆದು ವಿಗ್ರಹದ ಜಲಸ್ಥಂಬನದೊಂದಿಗೆ ಗಣೇಶೋತ್ಸವವು ಸಂಪನ್ನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here