ಸನಾತನ ಹಿಂದು ಧರ್ಮ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಧರ್ಮ – ಡಾ| ವಿಜಯ ಸರಸ್ವತಿ
ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳು ಆಳವಾಗಿದೆ – ಕೇಶವಪ್ರಸಾದ್ ಮುಳಿಯ
ಗಣೇಶನೂ ಒಬ್ಬ ಸೈನಿಕ – ಜಗನ್ನಾಥ್ ಎಮ್
ಸನಾತನ ಹಿಂದು ಧರ್ಮ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಧರ್ಮ
ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಪದವಿ ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ| ವಿಜಯ ಸರಸ್ವತಿ ಅವರು ಧಾರ್ಮಿಕ ಉಪನ್ಯಾಸ ಮಾಡಿದರು. ಒಂದೊಂದು ದೇಶಕ್ಕೆ ಅದರದ್ದೆ ಆದ ಸಂಸ್ಕೃತಿಕ ಧರ್ಮ ಇದೆ. ಆದರೆ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ಧರ್ಮ ಇದ್ದರೆ ಅದು ಸನಾತನ ಧರ್ಮ ಅದು ಹಿಂದು ಧರ್ಮ ಎಂದ ಅವರು ಇವತ್ತು ನಮ್ಮ ಸಂಸ್ಕೃತಿಯನ್ನು ಹೊರಗಡೆ ಕೇಳಿ ತಿಳಿದು ಕೊಳ್ಳುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ನಮ್ಮ ಶಿಕ್ಷಣ. ಈ ನಿಟ್ಟಿನಲ್ಲಿ ಶಿಕ್ಷಣದ ಮೂಲಕ ಸಮಾಜದ ಪ್ರಗತಿಯನ್ನು ಹೇಗೆ ಕಾಣಬಹುದು ಎಂಬುದು ಒಂದು ಪ್ರಶ್ನೆಯಾದರೆ ಸಮಾಜದ ಆಶೋತ್ತರಗಳನ್ನು ಉದ್ದೇಶದ ಹಿನ್ನೆಲೆಯನ್ನು ಶಿಕ್ಷಣದ ಮಾರ್ಪಾಟನ್ನು ಚಿಂತಿಸಬೇಕಾಗಿದೆ. ಅದೇ ರೀತಿ ಸಂಸ್ಕೃತಿಯ ಆಚರಣೆಗೆ ಆರಾಧನೆ ಮಾತ್ರವಲ್ಲ ಆಚರಣೆಯೂ ಬೇಕು. ನೈತಿಕ ಶಿಕ್ಷಣ ಇವತ್ತು ಬೇಕಾಗಿದೆ. ನಮ್ಮ ಬದುಕಿಗೆ ಸವಾಲು ಬಂದಾಗ ಅದನ್ನು ಗಣೇಶನನ್ನು ಅನುಸರಿಬೇಕು ಎಂದರು.
ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳು ಆಳವಾಗಿದೆ:
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ ನಮ್ಮ ಆಚಾರ ವಿಚಾರಗಳು ಬಹಳ ಆಳವಾಗಿದೆ. ಆದರೆ ಮೆಕಾಲೆ ಶಿಕ್ಷಣದಿಂದಾಗಿ ದಾರಿ ತಪ್ಪಿದೆ. ಅದನ್ನು ಸರಿಪಡಿಸುವ ಕೆಲಸ ನಾವು ಮಾಡ್ಲಿಲ್ಲ. ಹಾಗಾಗಿ ಧಾರ್ಮಿಕ ಶಿಕ್ಷಣದ ಜೊತೆಗೆ ಭಾರತೀಯ ಶಿಕ್ಷಣ ಬೇಕಾಗಿದೆ. ಇದರೆ ಜೊತೆಗೆ ದೇಶ ಪ್ರೇಮವು ಇರಬೇಕು. ಈ ನಿಟ್ಟಿನಲ್ಲಿ ಯುವಕರು ಅವಕಾಶ ಸಿಕ್ಕಾಗ ಸೈನ್ಯಕ್ಕೆ ಸೇರುವ ಮೂಲಕ ದೇಶ ಸೇವೆ ಮಾಡಬೇಕೆಂದರು.
ಗಣೇಶನೂ ಒಬ್ಬ ಸೈನಿಕ:
ಮಾಜಿ ಸೈನಿಕರ ಸಂಘದ ನಿಕಟಪೂರ್ವ ಅಧ್ಯಕ್ಷರೂ ಹಿರಿಯ ಅಂಚೆ ಅಧೀಕ್ಷಕ ಜಗನ್ನಾಥ್ ಎಮ್ ಅವರು ಮಾತನಾಡಿ ಸ್ವಾತಂತ್ರ್ಯದ ಹೋರಾಟದ ಅಸ್ತ್ರವಾಗಿ ಗಣೇಶೋತ್ಸವ ಆರಂಭಗೊಂಡಿತ್ತು. ಅದೇ ರೀತಿ ಗಣೇಶನು ಕೂಡಾ ತನ್ನ ತಾಯಿಯ ಮಾತಿಗೆ ತಕ್ಕಂತೆ ನಡೆಯುವ ಮೂಲಕ ಓರ್ವ ಸೈನಿಕನಾಗಿ ಕಾಣಿಸುತ್ತಾನೆ. ಈ ನಿಟ್ಟಿನಲ್ಲಿ ಗಣೇಶನಿಗೂ ಸೈನಿಕನಿಗೂ ತುಂಬಾ ಹತ್ತಿರದ ಸಂಬಂಧವಿದೆ ಎಂದ ಅವರು ಇವತು ದೇಶ ಪ್ರೇಮವನ್ನು ತಿಳಿಸುವ ಸಂದರ್ಭದಲ್ಲಿ ಕೆಲವರು ಭಾರತ್ ಮಾತಾ ಕೀ ಜೈ ಘೋಷಣೆ ಹಾಕುವುದಕ್ಕೂ ಹಿಂಜರಿಯುತ್ತಾರೆ. ಅಂತರವರಿಗೂ ಭಾರತ್ ಮಾತಾ ಕಿ ಜೈ ಎಂದು ಹೇಳುವಂತೆ ಮಾಡಬೇಕೆಂದರು.
ರಾಷ್ಟ್ರೀಯತೆ, ಹಿಂದುಗಳ ಜಾಗೃತಿಗಾಗಿ ಸಂಘಟನೆ ಅಗತ್ಯ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಎಸ್ ಅವರು ಮಾತನಾಡಿ ದೇಶ ಪ್ರೇಮ ಮತ್ತು ಹಿಂದುಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಳೆದ 56 ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಒಟ್ಟಿನಲ್ಲಿ ರಾಷ್ಟ್ರೀಯತೆ ಮತ್ತು ಹಿಂದುಗಳ ಜಾಗೃತಿಗಾಗಿ ನಾವು ಸೇರಬೇಕು. ಸಂಘಟಿತರಾಗದಿದ್ದರೆ ಹಬ್ಬ ಆಚರಣೆಗೂ ಅವಕಾಶ ಸಿಗುವುದಿಲ್ಲ ಎಂದ ಅವರು ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅನೇಕರಿಗೆ ಆಹಾರದ ಕಿಟ್ಗಳನ್ನು ಸಮಿತಿ ವತಿಯಿಂದ ವಿತರಣೆ ಮಾಡಿದ್ದೇವೆ. ಅದೇ ರೀತಿ ಸಮಿತಿಯ ಸದಸ್ಯರಿಗೆ ತೊಂದರೆ ಆದಾಗ ಆರ್ಥಿಕ ನೆರವನ್ನು ನೀಡಿದ್ದೇವೆ. ಲೋಕಕಲ್ಯಾಣಾರ್ಥವಾಗಿ ಪ್ರತಿ ವರ್ಷ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ಮಾಡಲಾಗುತ್ತಿದೆ ಎಂದ ಅವರು ಸಮಿತಿಯ ವಾರ್ಷಿಕ ವರದಿ ಮಂಡಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್, ಅಧ್ಯಕ್ಷ ಶಶಾಂಕ ಜೆ ಕೊಟೆಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೀರ್ತಿಕುಡ್ವ ಪ್ರಾರ್ಥಿಸಿದರು. ಸಮಿತಿ ಸದಸ್ಯ ದಿನೇಶ್ ಪಂಜಿಗ ಸ್ವಾಗತಿಸಿದರು. ಸಮಿತಿ ಸದಸ್ಯ ಪೂವಪ್ಪ ನಾಯ್ಕ್ ವಂದಿಸಿದರು. ರಾಧಾಕೃಷ್ಣ ನಂದಿಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಿತು. ರಾತ್ರಿ ರಂಗ ಪೂಜೆ, ಮಹಾಮಂಗಳಾರತಿ ಬಳಿಕ ಪುತ್ತೂರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ನ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಅವರ ಮಾರ್ಗದರ್ಶನದಲ್ಲಿ ನೃತ್ಯ ರಸಸಂಜೆ ಕಾರ್ಯಕ್ರಮ ನಡೆಯಿತು.