ನೆಲ್ಯಾಡಿ ಹಾಲು ಉ.ಸ.ಸಂಘದ ವಾರ್ಷಿಕ ಸಾಮಾನ್ಯ ಸಭೆ

0

10.19 ಲಕ್ಷ ರೂ. ನಿವ್ವಳ ಲಾಭ; ಶೇ.25 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 71 ಪೈಸೆ ಬೋನಸ್ ಘೋಷಣೆ

ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.30ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಡಿ.ಮಹಾಬಲ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ 276 ಸದಸ್ಯರಿದ್ದು 52,700 ಪಾಲು ಬಂಡವಾಳವಿದೆ. ಹೊಸಮಜಲು ಹಾಗೂ ಕರ್‌ಂಬಿತ್ತಿಲ್‌ನಲ್ಲಿ ಶಾಖೆಗಳಿವೆ. ವರದಿ ಸಾಲಿನಲ್ಲಿ 6,88,933 ಲೀ.ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ 6,66,165 ಲೀ.ಹಾಲು ಮಾರಾಟ ಮಾಡಿದ್ದು ಸ್ಥಳೀಯವಾಗಿ 22,768 ಲೀ.ಹಾಲು ಮಾರಾಟ ಆಗಿದೆ. ಒಕ್ಕೂಟದಿಂದ ನಂದಿನಿ ಸಮತೋಲನ ಪಶು ಆಹಾರ ಮತ್ತು ಕರುಗಳ ಪಶು ಆಹಾರ ಖರೀದಿಸಿ ಸದಸ್ಯರುಗಳಿಗೆ ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ ಹಾಲು ಮತ್ತು ಪಶು ಆಹಾರ ಮಾರಾಟದಿಂದ 23,76,621 ರೂ.ಲಾಭ ಬಂದಿದ್ದು ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು 10,19,983 ರೂ.,ನಿವ್ವಳ ಲಾಭ ಬಂದಿದೆ. ಇದನ್ನು ನಿಬಂಧನೆ ಪ್ರಕಾರ ಹಂಚಿಕೆ ಮಾಡಲಾಗಿದ್ದು ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 71 ಪೈಸೆಯಂತೆ ಉತ್ಪಾದಕರ ಬೋನಸ್ ನೀಡಲಾಗುವುದು ಎಂದು ಹೇಳಿದರು. ಕೋವಿಡ್ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಪೂರೈಕೆಯಾಗಿದೆ. ಇದರಿಂದ ಲಾಭದಲ್ಲೂ ಏರಿಕೆಯಾಗಿದೆ. ಸಂಘದಲ್ಲಿ ಸಾಂದ್ರಶೀತಲೀಕರಣ ಘಟಕ ಸೇರಿದಂತೆ ಇತರೇ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾಲಿನ ಗುಣಮಟ್ಟ ಪ್ರತಿಯೊಬ್ಬರೂ ಕಾಯ್ದುಕೊಳ್ಳಬೇಕು. ಶುಚಿತ್ವಕ್ಕೂ ಆದ್ಯತೆ ನೀಡಬೇಕೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ದ.ಕ.ಸಹಕಾರಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್‌ರವರು ಮಾತನಾಡಿ, ಹೈನುಗಾರಿಕೆ ಇರುವಲ್ಲಿ ಕೃಷಿಯೂ ಅಭಿವೃದ್ಧಿಯಾಗುತ್ತದೆ. ಮುಂದಿನ ದಿನಗಳಲ್ಲಿ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಯೋಜನೆ ಇದೆ. ನಂದಿನಿ ಹಾಲಿನ ಉತ್ಪನ್ನಗಳು ಹೆಚ್ಚು ದಿನ ಬಳಕೆಯಾಗಬೇಕಾದಲ್ಲಿ ಶುದ್ಧವಾದ ಹಾಲು ಬೇಕಾಗುತ್ತದೆ. ಸಂಘದಿಂದಲೇ ಪಶು ಆಹಾರ ಪಡೆಯಬೇಕು. ಇದರಿಂದ ಸದಸ್ಯರಿಗೂ ಲಾಭವಿದೆ ಎಂದರು. ವಿಸ್ತರಣಾಧಿಕಾರಿ ಯಮುನಾ ಅವರು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಸದಸ್ಯ, ಪ್ರಗತಿಪರ ಹೈನುಗಾರರೂ ಆಗಿರುವ ಜಿಬಿ ಜಾಯ್‌ರವರು ಹೈನುಗಾರಿಕೆ ಕುರಿತು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ್, ನಿರ್ದೇಶಕರಾದ ಕಾಂತಪ್ಪ ಗೌಡ, ಹೊನ್ನಪ್ಪ ಗೌಡ, ವಿಠಲ ಶೆಟ್ಟಿ, ಚಂದ್ರಶೇಖರ ಎಚ್.,ಜಯರಾಮ ಬಿ., ಎಚ್.ಬಿ.ಜೋಗಿತ್ತಾಯ, ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಂತಪ್ಪ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಅನುರಾಧ ಹೆಚ್.ವರದಿ ಮಂಡಿಸಿ, ಕೊನೆಯಲ್ಲಿ ವಂದಿಸಿದರು. ಹಾಲು ಪರೀಕ್ಷಕಿ ನಳಿನಾಕ್ಷಿ ಪ್ರಾರ್ಥಿಸಿದರು. ಸಹಾಯಕಿ ಗಿರಿಜ, ಬಿ.ಎಂ.ಸಿ.ನಿರ್ವಾಹಕ ಪರಮೇಶ್ವರ, ಕೃತಕ ಗರ್ಭಧಾರಣಾ ಕಾರ್ಯಕರ್ತ ಜಯರಾಮ, ಬ್ರಾಂಚ್ ಸಹಾಯಕಿಯರಾದ ವಿಜಯ, ಜಯಂತಿ ಸಹಕರಿಸಿದರು.

[box type=”info” bg=”#” color=”#” border=”#” radius=”17″] ಗೌರವಾರ್ಪಣೆ/ಬಹುಮಾನ: 2021-22ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಜಿಬಿ ಜಾಯ್ (ಪ್ರಥಮ), ವೆಂಕಪ್ಪ ನಾಯ್ಕ್(ದ್ವಿತೀಯ) ಹಾಗೂ ಪುಷ್ಪರಾಜ್ ಶೆಟ್ಟಿ(ತೃತೀಯ)ಯವರಿಗೆ ಶಾಲು, ಹಾರ ಹಾಕಿ, ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ರೂ. 1.25 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಹಾಲು ಪೂರೈಸಿದ 29 ಮಂದಿ ಸದಸ್ಯರಿಗೆ ಹಾಗೂ ಉಳಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.[/box]

LEAVE A REPLY

Please enter your comment!
Please enter your name here