ಐದು ಸಾವಿರ ವರ್ಷಗಳ ಹಿಂದೆಯೆ ಸನಾತನ ಸಂಸ್ಕೃತಿ ಬಲಿಷ್ಠವಾಗಿತ್ತು – ಡಾ. ರತ್ನಾಕರ ಮಲ್ಲಮೂಲೆ
ಚಿತ್ರ: ಶ್ರೀಹರಿ ರೆಂಜ
ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಆ. 31 ಕ್ಕೆ ಚಾಲನೆ ದೊರೆಯಿತು. ಬೆಳಿಗ್ಗೆ ಶ್ರೀ ಗಣೇಶ ಸ್ವಾಮಿಯ ವಿಗ್ರಹವನ್ನು ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಸುಬ್ಬಣ್ಣ ಗೌಡ ಪಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಭಗವಾಧ್ವಜ ಸ್ಥಾಪಿಸಿ, ಗಣೇಶೋತ್ಸವದ ಸ್ಥಾಪಕ ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ರಾಜೇಶ್ ಭಟ್ ಪುತ್ತೂರುರವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಧಾರ್ಮಿಕ ಸಭೆ ನಡೆಯಿತು. ರಾತ್ರಿ ಶ್ರೀ ಮಹಾಗಣಪತಿಗೆ ರಂಗಪೂಜೆ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಮೂರು ಸಾವಿರಕ್ಕೂ ಮಿಕ್ಕಿ ಭಕ್ತಾಭಿಮಾನಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಧಾರ್ಮಿಕ ಸಭೆ
ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕರವರು ‘ಹಿಂದು ಸಮಾಜದ ಉನ್ನತಿಗಾಗಿ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಭವಿಷ್ಯದಲ್ಲಿ ಉತ್ತಮ ಸಮಾಜಕ್ಕಾಗಿ ನಾವೆಲ್ಲಾ ಶ್ರಮಿಸೋಣ ಎಂದು ಹೇಳಿ ಗಣೇಶೋತ್ಸವ ಯಶಸ್ಸಿನ ಹಿಂದಿನ ಕಾರ್ಯಕರ್ತರ ಶ್ರಮ ಸ್ಮರಿಸಿದರು.
ಸನಾತನ ಸಂಸ್ಕೃತಿ ಹಿಂದೆಯೇ ಬಲಿಷ್ಠವಾಗಿತ್ತು- ಡಾ. ರತ್ನಾಕರ ಮಲ್ಲಮೂಲೆ
ಧಾರ್ಮಿಕ ಉಪನ್ಯಾಸ ನೀಡಿದ ಕಾಸರಗೋಡು ಸರಕಾರಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆಯವರು ‘ಆಚರಣೆಗಳ ಜೊತೆಗೆ ನಮ್ಮಲ್ಲಿ ಮೂಲನಂಬಿಕೆ ಬೇಕು. ಮೂಲನಂಬಿಕೆ ಭದ್ರವಾಗಿ ಉಳಿಸಿಕೊಂಡ ಪರಿಣಾಮ ನಮ್ಮ ಸಂಸ್ಕೃತಿಯನ್ನು ಯಾವತ್ತೂ ಕಳೆದುಕೊಂಡಿಲ್ಲ. 5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಸನಾತನ ಸಂಸ್ಕೃತಿ ಬಲಿಷ್ಠವಾಗಿತ್ತು. ಈ ಸಂಸ್ಕೃತಿಯ ಅನೇಕ ಮುಖಗಳನ್ನು ಮುಂದಿನ ಜನಾಂಗ ತಿಳಿದುಕೊಳ್ಳುವಂತೆ ಮಾಡುವ ಜವಾಬ್ದಾರಿ ಹಿರಿಯರಲ್ಲಿದೆ’ ಎಂದರು. ಹಿಂದಿನ ಕಾಲದಲ್ಲಿ ಆರಾಧನೆ, ಆಚರಣೆ, ಪರ್ವದಿನಗಳ ಮೂಲಕ ವೇದಗಳ ಸಾರಗಳು ಅವಿದ್ಯಾವಂತ ಮಂದಿಗೂ ತಲುಪುತ್ತಿತ್ತು’ ಎಂದರು.
ಮುಖ್ಯ ಅತಿಥಿಗಳಾಗಿದ್ದ ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ ‘ಹಿಂದಿನ ಕಾಲದ ಸಂಪ್ರದಾಯ, ಆಚರಣೆಗಳಲ್ಲಿ ಒಂದು ಸಮಾಜದ ಸಂದೇಶ ಅಡಗಿದೆ. ಆ ಸಂದೇಶವನ್ನು ಅರ್ಥ ಮಾಡಿಕೊಂಡು ಬೆಟ್ಟಂಪಾಡಿಯ ಗಣೇಶೋತ್ಸವವೂ 36 ವರ್ಷಗಳಿಂದ ನಡೆಯುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕೆವಿಜಿ ಮೆಡಿಕಲ್ ಕಾಲೇಜಿನ ಶ್ವಾಸಕೋಶ ತಜ್ಞ ಡಾ. ಪ್ರೀತಿರಾಜ್ ಬಲ್ಲಾಳ್ ಮಾತನಾಡಿ ‘ಕೊರೊನಾ ಕಾಲದಲ್ಲಿ ವೈದ್ಯರ ತಂಡದ ಅವಿರತ ಶ್ರಮದಿಂದ ಇಂದು ನಾವೆಲ್ಲಾ ಕೊರೊನಾ ಅಂತಿಮ ಹಂತದಲ್ಲಿದ್ದೇವೆ. ಇಂತಹ ಸಂಕಷ್ಟಕಾರಿ ಸಮಯ ಮುಂದಕ್ಕೆ ಬಾರದಿರಲು ಮಹಾಗಣಪತಿಯು ನಮ್ಮೆಲ್ಲರಿಗೂ ಅನುಗ್ರಹಿಸಲಿ’ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಆರ್. ಸಿ. ನಾರಾಯಣ ಮಾತನಾಡಿ ‘ಮಕ್ಕಳು ಸಂಸ್ಕಾರಯುತವಾದ ಜೀವನಕ್ಕೆ ಮುನ್ನುಡಿ ಬರೆಯಲು ಗಣೇಶೋತ್ಸವದಂತಹ ಸಂಸ್ಕಾರಯುತ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ರೀತಿಯಾದಾಗ ಮಾತ್ರ ದೇಶದ್ರೋಹ, ಸಮಾಜದ್ರೋಹ ರಹಿತ ನಾಗರಿಕ ಸಮಾಜವನ್ನು ಸೃಷ್ಟಿಸಲು ಸಾಧ್ಯ ಎಂದರು.
ಪುತ್ತೂರು ಪದ್ಮಶ್ರೀ ಸೋಲಾರ್ ಮ್ಹಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ರವರು ಮಾತನಾಡಿ ‘ಬೆಟ್ಟಂಪಾಡಿಯ ಚೌತಿ ಬಹಳ ವಿಶೇಷವಾಗಿ ಹೆಸರು ಪಡೆದಿದೆ. ಹಿಂದುತ್ವಕ್ಕೆ ನಾವು ಸಲಾಂ ಕೊಡಬೇಕು. ಹಿಂದುತ್ವಕ್ಕಾಗಿ ಎದೆಕೊಡುವ ಕಾರ್ಯಕರ್ತರು ಸೃಷ್ಟಿಯಾಗಬೇಕು. ಅದಕ್ಕಾಗಿ ತಮಗೆಲ್ಲರಿಗೂ ದೇವರು ಅನುಗ್ರಹಿಸಲಿ ಎಂದು ಹೇಳಿ ಶುಭ ಹಾರೈಸಿದರು.
ಸಮಾಜ ಸೇವಕ ಸುಬ್ರಹ್ಮಣ್ಯ ಅನುಗ್ರಹ ಕನ್‌ಸ್ಟ್ರಕ್ಷನ್ ನ ಮ್ಹಾಲಕ ಡಾ. ರವಿ ಕಕ್ಕೆಪದವುರವರು ಮಾತನಾಡಿ ‘ಹಿಂದು ಸಮಾಜದಲ್ಲಿ ಬಡವರೇ ಇಲ್ಲದಂತೆ ನಾವು ಸಮಾಜಕ್ಕಾಗಿ ನಮ್ಮಿಂದ ಆದಷ್ಟು ಉಪಕಾರವನ್ನು ಮಾಡಬೇಕಾಗಿದೆ’ ಎಂದರು.
ಉದ್ಯಮಿ ಸತೀಶ್ ರೈ ಕಟ್ಟಾವು ರವರು ಮಾತನಾಡಿ ‘ಗಣೇಶೋತ್ಸವ ಹೇಗೆ ಆಚರಿಸಬೇಕೆಂಬುದಕ್ಕೆ ಬೆಟ್ಟಂಪಾಡಿಯ ಚೌತಿ ಹಬ್ಬ ಮಾದರಿಯಾಗಿದೆ. ಅದಕ್ಕಾಗಿ ಇಲ್ಲಿನ ಕಾರ್ಯಕರ್ತರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ’ ಎಂದರು.
ಬ್ಯಾಂಕ್ ಆಫ್ ಬರೋಡ ಬೆಟ್ಟಂಪಾಡಿ ಶಾಖೆಯ ಸತೀಶ್ ಕುಮಾರ್ ಬಿ, ಉಪ್ಪಿನಂಗಡಿಯ ರಾಜ್ ಗ್ರೂಪ್ ನ ಕೃಷ್ಣರಾಜ್ ಶುಭ ಹಾರೈಸಿದರು.
ಬೆಟ್ಟಂಪಾಡಿ ದೇವಾಲಯದಲ್ಲಿ ಸೆ. 3 ರಂದು ನಡೆಯಲಿರುವ ಮಹಾರುದ್ರಜಪಾಭಿಷೇಕ ಕಾರ್ಯಕ್ರಮದ ಬಗ್ಗೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಹಿರಿಯರಾದ ಸುಬ್ಬಣ್ಣ ಗೌಡ ಪಾರ, ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ಪ್ರವೀಣ್ ಪೂಜಾರಿ ಕರ್ನಪ್ಪಾಡಿ ಉಪಸ್ಥಿತರಿದ್ದರು.
ಕುಮಾರಿ ಆರಾಧ್ಯಕೃಷ್ಣ ಪ್ರಾರ್ಥಿಸಿದರು. ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸಂದೀಪ್ ರೈ ಬಾಜುವಳ್ಳಿ ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಡಾ. ಸುಬ್ರಹ್ಮಣ್ಯ ವಾಗ್ಲೆ, ಶೇಷಪ್ಪ ರೈ ಮೂರ್ಕಾಜೆ, ಜಯರಾಮ ರೈ ಮೂರ್ಕಾಜೆ, ರವಿರಾಜ್ ಅಮೀನ್, ಸತೀಶ್ ಗೌಡ ಪಾರ, ಜತ್ತಪ್ಪ ಗೌಡ ಬಳ್ಳಿತ್ತಡ್ಡ, ನಿಶಾಂತ್, ಶಿವಕುಮಾರ್ ಬಲ್ಲಾಳ್, ನಾಗೇಶ್ ರೈ ಮೂರ್ಕಾಜೆ ಅತಿಥಿಗಳನ್ನು ಗೌರವಿಸಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯಕರ್ತರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಆ. 31 ರಂದು ಅಪರಾಹ್ನ ಆರ್ಯಭಟ ಪ್ರಶಸ್ತಿ ಪುರಸ್ಕೃತ ತೋನ್ಸೆ ಪುಷ್ಕಳ ಕುಮಾರ್ ರವರಿಂದ ‘ಶ್ರೀಕೃಷ್ಣ ತುಲಾಭಾರ’ ಹರಿಕಥೆ ನಡೆಯಿತು. ಸಂಜೆ ಶ್ರೀ ಶಾಂತಾದುರ್ಗಾ ಕುಣಿತ ಭಜನಾ ತಂಡ ಹಾಗೂ ಶ್ರೀ ವಿಷ್ಣು ಚಿಣ್ಣರ ಭಜನಾ ತಂಡ ಬೈಲಾಡಿ ಇರ್ದೆ ಇವರಿಂದ ಕುಣಿತ ಭಜನೆ, ಶ್ರೀ ಮಣಿಕಂಠ ಚೆಂಡೆ ಮೇಳದವರಿಂದ ಸಿಂಗಾರಿ ಮೇಳ ಮನರಂಜಿಸಿತು.
ರಾತ್ರಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ‘ರಣರಂಗದಲ್ಲಿ ರಾಧೇಯ’ ಯಕ್ಷಗಾನ ಬಯಲಾಟ ನಡೆಯಿತು. ಬಳಿಕ ಸ್ಟಾರ್ ವಾಯ್ಸ್ ಮೆಲೋಡಿಸ್ ಮಂಗಳೂರು ಇವರಿಂದ ಭಕ್ತಿರಸಮಂಜರಿ ನಡೆಯಿತು. ನಂತರ ವಿಜಯಕುಮಾರ್ ಕೊಡಿಯಾಲ್‌ಬೈಲು ನಿರ್ದೇಶನದ ಸುಪರ್ ಹಿಟ್ ಪೌರಾಣಿಕಕ ನಾಟಕ ‘ಶಿವದೂತೆ ಗುಳಿಗೆ’ ಮೂಡಿಬಂತು.