




ಸಮಸ್ತದಲ್ಲಿ ನಾವಿರಬೇಕೆಂದರೆ ಅದಕ್ಕೆ ಭಾಗ್ಯ ಬೇಕು-ಸಿರಾಜುದ್ದೀನ್ ಖಾಸಿಮಿ



ಪುತ್ತೂರು: ‘ಸಮಸ್ತ’ ಎನ್ನುವುದು ಒಂದು ಸಂಘಟನೆಯಲ್ಲ, ರಾಷ್ಟ್ರೀಯ ಪಕ್ಷವಲ್ಲ, ಸ್ಥಾನಮಾನಕ್ಕೆ ಬೇಕಾಗಿ ಇರುವ ಸಂಸ್ಥೆಯೂ ಅಲ್ಲ, ಸಮಸ್ತ ಎಂದರೆ ಅಲ್ಲಾಹನ ಸ್ವರ್ಗ ಬಯಸಿ ಕಾರ್ಯಾಚರಿಸುವ ದಾರಿ ತಪ್ಪಿ ಹೋಗುವವರಿಗೆ ಸರಿ ದಾರಿ ತೋರಿಸುವ ಪರಿಶುದ್ಧ ಪ್ರಸ್ಥಾನವಾಗಿದೆ, ಒಂದು ರೀತಿಯಲ್ಲಿ ದಾರಿ ತಪ್ಪಿದವರನ್ನು ಸರಿದಾರಿಗೆ ತರುವ ಗೂಗಲ್ ಮ್ಯಾಪ್ ಆಗಿದೆ ಎಂದು ಅಂತರ್ರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ ಸಿರಾಜುದ್ದೀನ್ ಖಾಸಿಮಿ ಹೇಳಿದರು.





ಸಮಸ್ತ 100ನೇ ವರ್ಷದ ಹಿನ್ನೆಲೆಯಲ್ಲಿ ಮುಂದಿನ ಫೆಬ್ರವರಿ ತಿಂಗಳಲ್ಲಿ ಕೇರಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಹಾ ಸಮ್ಮೇಳನ ಹಿನ್ನೆಲೆಯಲ್ಲಿ ಡಿ.10ರಂದು ಕುಂಬ್ರ ಕೆ.ಐ.ಸಿ ಕ್ಯಾಂಪಸ್ ವಠಾರದಲ್ಲಿ ನಡೆದ ಪ್ರಚಾರ ಮಹಾ ಸಮ್ಮೇಳನದಲ್ಲಿ ಅವರು ಮುಖ್ಯ ಪ್ರಭಾಷಣ ನಡೆಸಿದರು.

‘ಸಮಸ್ತ’ ಎನ್ನುವುದು ಸಾಧಾರಣ ವಿಷಯವಲ್ಲ, ಪಂಡಿತ ಮಹಾನುಭಾವರು ನೇತೃತ್ವ ನೀಡಿದ ಆದರ್ಶ ಪರಿಶುದ್ಧತೆಯ ಪ್ರಸ್ಥಾನವಾಗಿದ್ದು ಸಮಸ್ತದಲ್ಲಿ ನಾವಿರಬೇಕೆಂದರೆ ಅದಕ್ಕೆ ಭಾಗ್ಯ ಬೇಕು, ಯಾರೋ ಏನೋ ಹೇಳಿದ್ದನ್ನು ಕೇಳಿ ಪಂಡಿತ ಮಹಾನುಭಾವರನ್ನು, ಸಮಸ್ತವನ್ನು ಅವಹೇಳಿಸುವ ಕೆಲಸಕ್ಕೆ ಯಾರೂ ಮುಂದಾಗಬಾರದು, ಪೋಷಕರು ತಮ್ಮ ಮಕ್ಕಳನ್ನು ಸಮಸ್ತದೊಂದಿಗೆ ಸೇರಿಸಲು ಮನಸ್ಸು ತೋರಿಸಬೇಕು ಎಂದು ಅವರು ಹೇಳಿದರು.
ಪೋಷಕರು ತಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕಲಿಸಲು ಹಿಂದೇಟು ಹಾಕಬಾರದು, ಧಾರ್ಮಿಕ ಶಿಕ್ಷಣ ಕಲಿಕೆ ಕ್ಷೀಣಿಸಿದರೆ ಅದರ ಪರಿಣಾಮ ಭವಿಷ್ಯದಲ್ಲಿ ತಿಳಿಯಲಿದೆ ಎಂದ ಅವರು ಧಾರ್ಮಿಕ ಶಿಕ್ಷಣ ನೀಡುವ ಕೆ.ಐ.ಸಿಯಂತಹ ಸಂಸ್ಥೆಗಳನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಈ ಸಂಸ್ಥೆಗೆ ಬೆಂಬಲ, ಪ್ರೋತ್ಸಾಹ ನೀಡುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಆದರ್ಶ ಪರಿಶುದ್ದತೆಯೊಂದಿಗೆ ಸಾಗುತ್ತಿರುವ ಸಮಸ್ತ 100ನೇ ವರ್ಷಾಚರಣೆ ಸಂಭ್ರಮದಲ್ಲಿದ್ದು ಮುಂದಿನ ವರ್ಷ ಫೆಬ್ರವರಿಯಲ್ಲಿ ‘ಸಮಸ್ತ 100’ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜನರು ಕಾತರದಿಂದ ಕಾಯುತ್ತಿದ್ದು ಅಂದಿನ ದಿನಕ್ಕಾಗಿ ಕಾಯುತ್ತಿದ್ದಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆನ್ನುವುದು ನಮ್ಮೆಲ್ಲರ ಬಹುದೊಡ್ಡ ಆಗ್ರಹವಾಗಿದ್ದು ಕಾರ್ಯಕ್ರಮ ಯಶಸ್ವಿಯಾಗಲು ನಿಮ್ಮೆಲ್ಲರ ಪ್ರಾರ್ಥನೆ ಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಮಾತನಾಡಿ ಪಂಡಿತ ಶಿರೋಮಣಿಗಳಿಂದ ಸ್ಥಾಪಿತಗೊಂಡ ಸಮಸ್ತ ಪ್ರಸ್ಥಾನ ಅಂದಿನಿಂದ ಇಂದಿನ ವರೆಗೆ ಅಲ್ಲಾಹನ ಇಷ್ಟದ ಮಾರ್ಗದಲ್ಲಿ ಕಾರ್ಯಾಚರಿಸುತ್ತಿದ್ದು ಇದೀಗ 100 ವರ್ಷಗಳನ್ನು ಪೂರೈಸುತ್ತಿದೆ, ಪುಣ್ಯ ಸಮಸ್ತದ 100ನೇ ವರ್ಷದ ಐತಿಹಾಸಿಕ ಕಾರ್ಯಕ್ರದಮಲ್ಲಿ ನೀವೆಲ್ಲರೂ ಭಾಗವಹಿಸುವ ಮೂಲಕ ಯಶಸ್ಸಿನ ಸಹಭಾಗಿಗಳಾಗಬೇಕು ಎಂದು ಹೇಳಿದರು.

ದುವಾ ನಿರ್ವಹಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಮಾತನಾಡಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಎನ್ನುವುದು ಸಾಧಾರಣ ಸಂಘಟನೆಯಲ್ಲ, ಅದು ನಮ್ಮ ಪೂರ್ವಿಕ ಪಂಡಿತರು ಸ್ಥಾಪಿಸಿದ ಪರಿಶುದ್ಧ ಆದರ್ಶ ಪ್ರಸ್ಥಾನವಾಗಿದೆ, ಜನರ ಹೃದಯದಲ್ಲಿ ಸತ್ಯವನ್ನು, ಧರ್ಮವನ್ನು, ಸತ್ಕರ್ಮವನ್ನು ಮೈಗೂಡಿಸಿಕೊಳ್ಳಲು ಪ್ರೇರೇಪಿಸುವ, ದಾರಿ ತೋರಿಸುವ ಪುಣ್ಯ ಪ್ರಸ್ಥಾನವಾಗಿರುವ ಸಮಸ್ತ 100 ವರ್ಷ ಪೂರೈಸುತ್ತಿದೆ, ಸಮಸ್ತ ತೋರಿಸಿದ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ಮಾತನಾಡಿ ಶಿಕ್ಷಣ ಸಂಸ್ಥೆಗಳು ಬೆಳೆದಂತೆ ನಾಡು ಸುಶಿಕ್ಷಿತವಾಗುತ್ತದೆ, ಈ ನಿಟ್ಟಿನಲ್ಲಿ ಕೆ.ಐ.ಸಿ ಸಂಸ್ಥೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಇಸ್ಲಾಂ ಧರ್ಮ ಕೋಮು ಸೌಹಾರ್ದತೆಯನ್ನು ಸಾರುವ ಧರ್ಮವಾಗಿದ್ದು ಇಸ್ಲಾಮಿನಲ್ಲಿ ಕೋಮುವಾದ, ತೀವ್ರವಾದಕ್ಕೆ ಅವಕಾಶವಿಲ್ಲ ಎಂದು ಹೇಳಿದರು. ಸಮಸ್ತ 100ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುವುದು ನಮ್ಮೆಲ್ಲರ ಪಾಲಿನ ಸೌಭಾಗ್ಯವಾಗಿದೆ ಎಂದು ಅವರು ಹೇಳಿದರು. ಟಿ.ಎಂ ಶಹೀದ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕೆಐಸಿ ಮುದರ್ರಿಸ್ ಇಸ್ಮಾಯಿಲ್ ಮದನಿ ಮಾತನಾಡಿ ಕೆ.ಐ.ಸಿ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಈ ಯಶಸ್ಸಿನ ಹಿಂದೆ ಹಲವರ ಪರಿಶ್ರಮ ಇದೆ, ಮುಂದಕ್ಕೂ ತಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದು ಹೇಳಿದರು.

ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ನಡೆಸಿದ ಕುಂಬ್ರ ಕೆಐಸಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿಯವರು ಸಮನ್ವಯ ಶಿಕ್ಷಣದ ದೂರದೃಷ್ಟಿ ಉದ್ದೇಶದೊಂದಿಗೆ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಆರಂಭಗೊಂಡ ಕೆ.ಐ.ಸಿ ಸಂಸ್ಥೆಯಲ್ಲಿ ಇಂದು ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು ಈಗಾಗಲೇ ನೂರಾರು ಕೌಸರಿಗಳನ್ನು ಸಮಾಜಕ್ಕೆ ಅರ್ಪಿಸಿದೆ, ಇಲ್ಲಿ ಕಲಿತ ಅದೆಷ್ಟೋ ಮಂದಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಕೆಐಸಿ ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ, ಈ ಯಶಸ್ಸಿನ ಹಿಂದೆ ಉಲಮಾಗಳು, ಉಮರಾಗಳು ಸೇರಿದಂತೆ ಹಲವರ ಪರಿಶ್ರಮ ಇದೆ ಎಂದರು.
ಸಮಸ್ತ ನಾಯಕರ ಜೀವನ ಶೈಲಿಯ ಬಗ್ಗೆ ವಿವರಿಸಿದ ಅನೀಸ್ ಕೌಸರಿಯವರು ಸಮಸ್ತದ ಧ್ವಜ ಹಿಡಿಯುತ್ತೀರಿ, ಕಲೆಕ್ಷನ್ ಮಾಡುತ್ತೀರಿ, ಅನುಸ್ಮರಣೆ ಮಾಡುತ್ತೀರಿ, ಬೇರೇನು ಮಾಡಿದ್ದೀರಿ ಎಂದು ಕೇಳುವವರಿದ್ದಾರೆ, ಅವರಿಗೆ ನಾವು ಹೇಳುವುದು ‘ಸಮಸ್ತ ಸಮೂಹಕ್ಕೆ ಧಾರ್ಮಿಕ ಪ್ರಜ್ಞೆ ನೀಡಿದೆ, ಈ ಸಮೂಹಕ್ಕಾಗಿ ಸಾವಿರಾರು ಉಲಮಾಗಳನ್ನು ಇಲ್ಲಿ ಸೃಷ್ಟಿಸಿದೆ, ಸಾವಿರಾರು ಮದ್ರಸ, ಮಸೀದಿಗಳ ನಿರ್ಮಾಣ ಮಾಡಿದೆ, ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಧಾರ್ಮಿಕ ಶಿಕ್ಷಣ ಇಲ್ಲದ ಕಡೆಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುತ್ತಿದೆ, ಮಸೀದಿ, ಮದ್ರಸ ಇಲ್ಲದ ಕಡೆಗಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದೆ, ಸಮಸ್ತ ಏನು ಮಾಡುತ್ತಿದೆ ಎನ್ನುವುದನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಂಬ್ರ ಕೆಐಸಿ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಮಾತನಾಡಿ ಸಮಸ್ತ ಎನ್ನುವ ಮಹೋನ್ನತ ಪ್ರಸ್ಥಾನ 100 ವರ್ಷಗಳನ್ನು ಪೂರೈಸುವ ಈ ಸಂದರ್ಭದಲ್ಲಿ ಅದರ ಕಾರ್ಯಕ್ರಮ ಯಶಸ್ಸಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು. ಕೆಐಸಿ ಸಂಸ್ಥೆ ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹದಿಂದ ಉತ್ತಮವಾಗಿ ಮುನ್ನಡೆಯುತ್ತಿದ್ದು ನಿಮ್ಮೆಲ್ಲರ ಸಹಕಾರವೇ ಸಂಸ್ಥೆಯ ಬೆಳವಣಿಗೆಗೆ ಕಾರಣ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ಹುಫ್ಲುಲ್ ಖುರ್‌ಆನ್ ಕಂಠಪಾಠ ಮಾಡುತ್ತಿರುವ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶಾಹಿಲ್, ಸುಹೈಲ್, ಜುನೈರ್, ಅಲ್ಫಾಝ್, ರಿಫಾದ್, ಫಾಯಿಝ್, ಶಯಾನ್, ಹರ್ಷದ್, ಮುಸ್ತಫಾ, ಅಮಾನ್, ಶಾಮ್, ಶಮ್ಮಾಸ್ ಹಾಗೂ ಸನದ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಜೆಯಿಂದ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರೂ ಕೂಡಾ ಯಾವುದೇ ಅಡೆ-ತಡೆಗಳಿಲ್ಲದೇ ಸುಸೂತ್ರವಾಗಿ, ಶಿಸ್ತು ಬದ್ದವಾಗಿ ನಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಜನರನ್ನು ಹಾಗೂ ವಾಹನಗಳನ್ನು ನಿಯಂತ್ರಿಸುವುದರ ಜೊತೆಗೆ ಇತರ ಎಲ್ಲ ಕಾರ್ಯಕ್ರಗಳನ್ನು ಸ್ವಯಂ ಸೇವಕರು ಅತ್ಯುತ್ತಮವಾಗಿ ನಿಭಾಯಿಸಿದರು. ಅನೀಸ್ ಕೌಸರಿ ಹಾಗೂ ಅಬ್ದುಲ್ ಸತ್ತಾರ್ ಕೌಸರಿ ಮಾರ್ಗದರ್ಶನದಲ್ಲಿ ಸ್ವಾಗತ ಸಮಿತಿ ಚೇರ್‌ಮೆನ್ ರಫೀಕ್ ಡಿಂಬ್ರಿ, ವರ್ಕಿಂಗ್ ಚೇರ್‌ಮೆನ್ ಅಶ್ರಫ್ ಸಾರೆಪುಣಿ, ಕನ್ವೀನರ್ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಫೈನಾನ್ಸ್ ಚೇರ್‌ಮೆನ್ ಶರೀಫ್ ಹಾಜಿ ಪರ್ಪುಂಜ, ವರ್ಕಿಂಗ್ ಚೇರ್‌ಮೆನ್ ಸಲಾಂ ಹಾಜಿ ಮೇನಾಲ, ಕನ್ವೀನರ್ ಫಾರೂಕ್ ಮಗಿರೆ, ಪ್ರಚಾರ ಸಮಿತಿ ಚೇರ್‌ಮೆನ್ ಎಂ.ಎಂ ಶರಫುದ್ದೀನ್, ಕನ್ವೀನರ್ ಬಶೀರ್ ಗಟ್ಟಮನೆ, ಯೂಸುಫ್ ಅರ್ಷದಿ ಡಿಂಬ್ರಿ, ಬಶೀರ್ ಕೌಡಿಚ್ಚಾರ್, ಜಲಾಲಿಯ್ಯ ಯಂಗ್‌ಮೆನ್ಸ್‌ನ ಪದಾಧಿಕಾರಿಗಳು, ಅಲ್ ಕೌಸರ್ ಯೂತ್ ಸ್ಟೂಡೆಂಟ್ಸ್ ಅಸೋಸಿಯೇಶನ್, ಕೆಐಸಿ ಶಿಕ್ಷಕ ವೃಂದದವರು ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿಭಾಯಿಸಿದರು.

ಸಮಸ್ತ 100ನೇ ವರ್ಷದ ಹಿನ್ನೆಲೆಯಲ್ಲಿ ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಮಹಾ ಸಮ್ಮೇಳನ ಹಿನ್ನೆಲೆಯಲ್ಲಿ ಕುಂಬ್ರ ಕೆ.ಐ.ಸಿ.ಯಲ್ಲಿ ನಡೆದ ಪ್ರಚಾರ ಮಹಾ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ ಎಂದು ಸ್ವಾಗತ ಸಮಿತಿ ಚೇರ್‌ಮೆನ್ ರಫೀಕ್ ಡಿಂಬ್ರಿ ತಿಳಿಸಿದ್ದಾರೆ. ಸ್ವಾಗತ ಸಮಿತಿಯವರು, ಜಲಾಲಿಯ್ಯ ಯಂಗ್‌ಮೆನ್ಸ್‌ನ ಪದಾಧಿಕಾರಿಗಳು, ಅಲ್ ಕೌಸರ್ ಯೂತ್ ಸ್ಟೂಡೆಂಟ್ಸ್ ಅಸೋಸಿಯೇಶನ್, ಕೆಐಸಿ ಶಿಕ್ಷಕ ವೃಂದದವರು ಸೇರಿದಂತೆ ಹಲವರ ಸಹಕಾರಪ ಫಲವಾಗಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ನಮ್ಮ ನಿರೀಕ್ಷೆಗೂ ಮೀರಿದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅತೀವ ಸಂತಸ ತಂದಿದೆ. ಕಾರ್ಯಕ್ರಮದ ಯಶಸ್ಸಿಗೆ ಬೇಕಾಗಿ ರಾತ್ರಿ ಹಗಲೆನ್ನದೇ ಕೆಲಸ ನಿರ್ವಹಿಸಿದವರಿಗೆ, ಉಲಮಾ ನಾಯಕರಿಗೆ, ಅತಿಥಿಗಳಾಗಿ ಬಂದು ಸಹಕಾರ ನೀಡಿದ ಉಮರಾ ಪ್ರಮುಖರಿಗೆ, ಸ್ವಯಂ ಸೇವಕರಿಗೆ ಹಾಗೂ ತನು ಮನ ಧನಗಳಿಂದ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ವೇದಿಕೆಯಲ್ಲಿ ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ರೆಂಜಲಾಡಿ ಆರ್.ಐ.ಸಿ ಚೇರ್‌ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಪ್ರಮುಖರಾದ ಉಮ್ಮರ್ ದಾರಿಮಿ ಸಾಲ್ಮರ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಅಬ್ಬಾಸ್ ಮದನಿ, ಇರ್ಷಾದ್ ಫೈಝಿ ಮುಕ್ವೆ, ಉದ್ಯಮಿಗಳಾದ ಯೂಸುಫ್ ಗೌಸಿಯಾ ಸಾಜ, ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಯೂಸುಫ್ ಹಾಜಿ ಕೈಕಾರ, ಮಮ್ಮಾಲಿ ಹಾಜಿ ಬೆಳ್ಳಾರೆ, ರಶೀದ್ ಹಾಜಿ ಪರ್ಲಡ್ಕ, ಅಬ್ಬಾಸ್ ಮದನಿ, ಅಬೂಬಕ್ಕರ್ ಮಂಗಳ, ಅಬೂಬಕ್ಕರ್ ಮುಲಾರ್, ಅಬ್ದುಲ್ ಖಾದರ್ ಹಾಜಿ ಬೆಳ್ಳಾರೆ, ಅಬ್ದುಲ್ ಹಮೀದ್ ಫ್ಯಾಮಿಲಿ, ಪಿ.ಕೆ ಮುಹಮ್ಮದ್ ಕೂಡುರಸ್ತೆ, ಝೈನುದ್ದೀನ್ ಹಾಜಿ ಜೆ.ಎಸ್, ಇಬ್ರಾಹಿಂ ಅಜ್ಜಿಕಲ್ಲು, ರಫೀಕ್ ಡಿಂಬ್ರಿ, ಎಂ.ಎಂ ಶರಫುದ್ದೀನ್, ಸಂಶುದ್ದೀನ್ ಕುತ್ತಮೊಟ್ಟೆ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ನವಾಝ್ ಪರ್ಪುಂಜ, ಪತ್ರಕರ್ತ ಅಬೂಬಕ್ಕರ್ ಕೌಡಿಚ್ಚಾರ್, ಎಸ್.ಎಂ ಅಬ್ಬಾಸ್, ಝೈನುದ್ದೀನ್ ಹಾಜಿ ಮುಕ್ವೆ, ಲತೀಫ್ ಮರಕ್ಕಿನಿ ಉಪಸ್ಥಿತರಿದ್ದರು.
ಹಾಫಿಲ್ ತ್ವಾಹಾ ಸಾಲಿಮ್ ಕಿರಾಅತ್ ಪಠಿಸಿದರು. ಅದ್ನಾನ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.







