ಪುತ್ತೂರು: ಸುಳ್ಯ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕಲಂ 307 ಪ್ರಕರಣ ದಾಖಲಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಡಿವೈಎಸ್ಪಿಗೆ ಮನವಿ ಮಾಡಿದ್ದಾರೆ.
ಸುಳ್ಯ ಕೊಡಿಯಾಲಬೈಲು ಪ್ರ.ದ.ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮುಹಮ್ಮದ್ ಸನೀಫ್ ರವರನ್ನು ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ್ದಾರೆ. ಬಂಧಿಸಿರುವ ಆರೋಪಿಗಳ ಮೇಲೆ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿಯು ಪುತ್ತೂರು ಡಿವೈಎಸ್ಪಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಸನೀಫ್ ಅವರು ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಐಪಿಸಿ ಕಲಂ 143,147,148,323,324,506 ಹಾಗೂ 149 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮುಂದೆ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿದ್ದು ಮಾತ್ರವಲ್ಲದೆ ಕೊಲೆಯತ್ನ ನಡೆಸಿದ ಎಬಿವಿಪಿ ಗೂಂಡಾಗಳ ಮೇಲೆ ಕಲಂ 307 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾ ಸಮಿತಿ ಸದಸ್ಯರಾದ ಅಫ್ರೀದ್ ಹಾಗೂ ಅಫ್ರಾಝ್ ಇದ್ದರು.