ಹೊಂಡಾಗುಂಡಿ ರಸ್ತೆಗೆ ಪಿಡಬ್ಯುಡಿಯಿಂದ ಮಣ್ಣಿನ ತೇಪೆ – ‘ಕಾಟಾಚಾರಕ್ಕೆ ಕಾಮಗಾರಿ ಬೇಡ’ – ಮಣ್ಣು ತೆಗಿಸಿ ಸಾರ್ವಜನಿಕರ ಆಕ್ರೋಶ

0

ಉಪ್ಪಿನಂಗಡಿ: ಹೊಂಡ ಗುಂಡಿಗಳಿಂದಾಗಿ ಸಂಚಾರಕ್ಕೆ ಯೋಗ್ಯವಲ್ಲದ ಹಳೆಗೇಟು- ಮರ್ದಾಳದ ರಾಜ್ಯ ಹೆದ್ದಾರಿಯಲ್ಲಿ ಹೊಂಡ – ಗುಂಡಿಗೆ ಮಣ್ಣು ತುಂಬಿಸುವ ಕಾರ್ಯ ಮಾಡಿದ ಲೋಕೋಪಯೋಗಿ ಗುತ್ತಿಗೆದಾರ ಕೆಲಸಗಾರರನ್ನು ತಡೆದು ಮಣ್ಣು ತೆಗಿಸಿದ ಘಟನೆ ಇಲ್ಲಿನ ಪೆರಿಯಡ್ಕದಲ್ಲಿ ನಡೆದಿದೆ.


ಹಳೆಗೇಟು – ಮರ್ದಾಳ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಭಯಾನಕ ಹೊಂಡಗುಂಡಿಗಳಿದ್ದು, ಹಲವು ವಾಹನ ಅಪಘಾತಗಳಿಗೆ ಇದು ಕಾರಣವಾಗುತ್ತಿತ್ತು. ಪೆರಿಯಡ್ಕದ ಶಿಶುಮಂದಿರ ಬಳಿ ರಸ್ತೆ ಅಗಲಕ್ಕೂ ಹೊಂಡಗಳು ನಿರ್ಮಾಣವಾಗಿದ್ದರಿಂದ ಆಕ್ರೋಶಿತ ಸಾರ್ವಜನಿಕರು ಇಂದು ರಸ್ತೆ ಗುಂಡಿಯಲ್ಲಿ ಬಾಳೆಗಿಡ ನೆಟ್ಟಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅದ ಕೂಡಲೇ ಎಚ್ಚೆತ್ತುಕೊಂಡ ಪಿಡಬ್ಲೂ ಇಲಾಖೆ ಗುತ್ತಿಗೆದಾರರಿಗೆ ತೇಪೆ ಹಚ್ಚಲು ಹೇಳಿತ್ತು. ಆದರೆ ಗುತ್ತಿಗೆದಾರರ ಸಿಬ್ಬಂದಿ ರಸ್ತೆ ಬದಿಯ ಮಣ್ಣನ್ನು ತೆಗೆದು ಹೊಂಡ- ಗುಂಡಿಗಳಿಗೆ ತುಂಬಿಸುತ್ತಿರುವುದು ಕಂಡು ಬಂತು. ಇದಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ರಸ್ತೆ ಗುಂಡಿಗಳಿಗೆ ಒಂದೋ ಡಾಮರು ಅಥವಾ ಕಾಂಕ್ರಿಟ್ ಕಾಮಗಾರಿ ಮಾಡಿ. ಈ ರೀತಿ ಮಣ್ಣು ತುಂಬಿಸಿದರೆ ಮಳೆ ಬಂದಾಗ ರಸ್ತೆ ಕೆಸರಾಗಿ ಇನ್ನಷ್ಟು ಸಮಸ್ಯೆಗಳಾಗುತ್ತೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಹಾಕಿದ ಮಣ್ಣನ್ನು ತೆಗೆಯಬೇಕು ಎಂದರು. ಬಳಿಕ ಗುತ್ತಿಗೆದಾರ ಸಿಬ್ಬಂದಿ ಹಾಕಿದ ಮಣ್ಣನ್ನು ತೆರವುಗೊಳಿಸಿದರು.


ಈ ಸಂದರ್ಭ ಉಪ್ಪಿನಂಗಡಿ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಬಿಎಂಎಸ್ ಅಟೋ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಹರೀಶ್ ಪಟ್ಲ, ಪ್ರಮುಖರಾದ ಚಿದಾನಂದ ಪಂಚೇರು, ರಾಜೇಶ್ ಕೊಡಂಗೆ, ಶ್ರೀಕಾಂತ್ ಶೆಟ್ಟಿ, ರೋಹಿತ್ ನೆಡ್ಚಿಲ್, ಪ್ರವೀಣ್ ನೆಡ್ಚಿಲ್, ನಿಶಾಂತ್ ನಲಿಕೆಮಜಲು, ಕೇಶವ ನೆಡ್ಚಿಲು ಮತ್ತಿತರರು ಉಪಸ್ಥಿತರಿದ್ದರು.

ಗುತ್ತಿಗೆದಾರರಿಗೆ ತೇಪೆ ಕಾರ್ಯ ಮಾಡಲು ಹೇಳಲಾಗಿದೆ. ಹೊಂಡಗಳಿಗೆ ಮಣ್ಣು ಹಾಕಲು ಅಲ್ಲ. ಈ ವಿಷಯ ಗಮನಕ್ಕೆ ಬಂದ ಕೂಡಲೇ ತೆರವಿಗೆ ಸೂಚಿಸಿದ್ದೇವೆ
ಪ್ರಮೋದ್
ಅಭಿಯಂತರರು ಲೋಕೋಪಯೋಗಿ ಇಲಾಖೆ

  • ನಮಗೆ ಇದಕ್ಕೆ ಡಾಮರು ಮೂಲಕ ತೇಪೆ ಹಚ್ಚಲು ಇಲಾಖೆ ಹೇಳಿದೆ. ಆದರೆ ಮಳೆಯ ಕಾರಣ ನಾವೀಗ ಇಲ್ಲಿ ಮಣ್ಣು ತುಂಬಿಸಿದ್ದೇವೆ. ಅದನ್ನೀಗ ತೆಗೆದಿದ್ದೇವೆ. ನಾಳೆ 9 ಗಂಟೆಗೆ ಬಂದು ಇಲ್ಲಿನ ಹೊಂಡಕ್ಕೆ ಜಲ್ಲಿ ಹಾಗೂ ಸೆಮ್ ಮಿಶ್ರಣ ಹಾಕುತ್ತೇವೆ. ಮುಂದಿನ ಸೋಮವಾರ ಡಾಮರೀಕರಣ ಮಾಡಿ ಹೊಂಡಗುಂಡಿಗಳನ್ನು ಮುಚ್ಚುವ ಕಾಮಗಾರಿ ಪ್ರಾರಂಭ ಮಾಡ್ತೇವೆ.
    -ರಝಾಕ್
    ಗುತ್ತಿಗೆದಾರ ಸಂಸ್ಥೆಯ ಮೇಲ್ವೀಚಾರಕರು.

  • ಹೊಂಡ ಗುಂಡಿಗಳಿಗೆ ರಸ್ತೆಬದಿಯ ಮಣ್ಣನ್ನು ಸರಕಾರ ಹಾಕುವುದಾದರೆ ಅದನ್ನು ಸಾರ್ವಜನಿಕರಾದ ನಾವೇ ಮಾಡ್ತೇವೆ. ಕಾಟಾಚಾರಕ್ಕೆ ಕಾಮಗಾರಿ ಬೇಡ. ಮಣ್ಣು ಹಾಕಿದರೆ ಇನ್ನಷ್ಟು ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಆದ್ದರಿಂದ ಒಂದೋ ಹೊಂಡ ಗುಂಡಿಗಳಿಗೆ ಕ್ರಮಬದ್ಧವಾಗಿ ಡಾಮರು ಅಥವಾ ಕಾಂಕ್ರೀಟ್ ಮೂಲಕ ತೇಪೆ ಹಾಕಬೇಕು.
    ರಾಮಚಂದ್ರ ಮಣಿಯಾಣಿ
  • ಮಾಜಿ ಅಧ್ಯಕ್ಷರು , ಉಪ್ಪಿನಂಗಡಿ ಗ್ರಾ.ಪಂ.

LEAVE A REPLY

Please enter your comment!
Please enter your name here