ಶಿಕ್ಷಣದಿಂದ ಮಾತ್ರ ಸಮುದಾಯದ ಸಬಲೀಕರಣ ಸಾಧ್ಯ-ಎ.ಬಿ ಇಬ್ರಾಹಿಂ
ಪುತ್ತೂರು: ಮುಸ್ಲಿಂ ಸಮುದಾಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಾಜದ ಮುಖ್ಯವಾಹಿನಿಯಿಂದ ದೂರವುಳಿಯುವ ಹಂತಕ್ಕೆ ತಲುಪಿದೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಶೈಕ್ಷಣಿಕವಾಗಿ ಮುಸ್ಲಿಂ ಸಮುದಾಯ ಜಾಗೃತಿಗೊಳ್ಳಬೇಕಿದೆ ಎಂದು ದ.ಕ ಮಾಜಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಇದರ ಟೀಂ ರಿಸೋರ್ಸ್ ಫಾರ್ ಎಜ್ಯುಕೇಶನ್ ಆಂಡ್ ನ್ಯಾಶನಲ್ ಡೆವೆಲಪ್ಮೆಂಟ್ (ಟ್ರೆಂಡ್) ವತಿಯಿಂದ ಪುತ್ತೂರು ಕಲ್ಲೇಗ ಮದ್ರಸದಲ್ಲಿ ನಡೆದ ‘ಕಲಿಯಲು ಕಲಿಯೋಣ’ ಎಂಬ ಶೈಕ್ಷಣಿಕ ಜಾಗೃತಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದೂರದಲ್ಲೆಲ್ಲೋ ನಡೆಯುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದನ್ನು ವೈಭವೀಕರಿಸುವ ಬದಲು ನಮ್ಮ ವ್ಯಾಪ್ತಿಗಳಲ್ಲಿರುವ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ನಾವು ನಡೆಸಬೇಕಿದೆ. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸವಾಗಬೇಕೇ ಹೊರತು ಅದನ್ನು ವೈಭವೀಕರಿಸಿ ನಮ್ಮೆಳಗೆ ಸಂಕುಚಿತ ಮನೋಭಾವವನ್ನು ಸೃಷ್ಟಿಸುವ ಕೆಲಸ ನಾವು ಮಾಡಬಾರದು ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ತರಬೇತುದಾರರಾದ ರಫೀಕ್ ಮಾಸ್ಟರ್ ಆತೂರು ಮಾತನಾಡಿ ಆಸಕ್ತಿಯ ಕೊರತೆ ಹಾಗೂ ನಿರ್ದಿಷ್ಠ ಗುರಿಯಿಲ್ಲದೆ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಉಳಿಯುತ್ತಿದ್ದು ಅಂಥವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಈಸ್ಟ್ ಸಮಿತಿಯ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಮುಹಮ್ಮದ್ ಬ್ಯಾರಿ, ಕಲ್ಲೇಗ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ, ಕಮ್ಯುನಿಟಿ ಸೆಂಟರ್‌ನ ಹನೀಫ್ ಪುತ್ತೂರು, ಕರ್ನಾಟಕ ಎಸ್ಕೆಎಸ್ಸೆಸ್ಸೆಫ್ ದುಬೈ ಸಮಿತಿಯ ಪ್ರ.ಕಾರ್ಯದರ್ಶಿ ಸುಲೈಮಾನ್ ವೌಲವಿ, ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ರಹ್ಮಾನಿ ಕಿನ್ಯಾ, ಕಲ್ಲೇಗ ಶಾಖೆಯ ಅಧ್ಯಕ್ಷ ಮೂಸಾ ಹಾಜಿ, ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಕಲ್ಲೇಗ ಮದ್ರಸದ ಮುಖ್ಯೋಪಾಧ್ಯಾಯ ಶಾಫಿ ಇರ್ಫಾನಿ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಟ್ರೆಂಡ್ ಚೇರ್‌ಮೆನ್ ಇಕ್ಬಾಲ್ ಬಾಳಿಲ ಸ್ವಾಗತಿಸಿದರು. ಕನ್ವಿನರ್ ಯೂಸುಫ್ ಮುಂಡೋಳೆ ವಂದಿಸಿದರು.
ತರಬೇತುದಾರರ ಕಾರ್ಯಾಗಾರ:
ಅಭಿಯಾನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವ ತರಬೇತುದಾರರಿಗೆ ವಿಶೇಷ ಕಾರ್ಯಾಗಾರ ನಡೆಯಿತು. ಟ್ರೆಂಡ್ ನ್ಯಾಷನಲ್ ಫೆಲೋ ಶಾಹುಲ್ ಕೆ. ಫಝುಣ್ಣನ ತೃಶೂರ್ ಹಾಗೂ ಟ್ರೆಂಡ್ ಮಾಸ್ಟರ್ ಟ್ರೈನರ್ ಶಫೀಕ್ ರಹ್ಮಾನಿ ಕಾರ್ಯಗಾರವನ್ನು ಮುನ್ನಡೆಸಿದರು. ಟ್ರೆಂಡ್ ಬೇಸಿಕ್ ಕೋರ್ಸ್ ಪಡೆದುಕೊಂಡ ಸುಮಾರು 65 ತರಬೇತುದಾರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
500 ಕೇಂದ್ರಗಳಲ್ಲಿ ತರಬೇತಿ:
ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಸೀದಿ, ಮದ್ರಸ, ಸಂಘಸಂಸ್ಥೆಗಳ ಸಹಕಾರದೊಂದಿಗೆ ದ.ಕ. ಜಿಲ್ಲೆಯಾದ್ಯಂತ ಸುಮಾರು 500 ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ‘ಕಲಿಯಲು ಕಲಿಯೋಣ’ ಎಂಬ ವಿಶೇಷ ತರಬೇತಿಯನ್ನು ಹಮ್ಮಿಕೊಳ್ಳುವ ಗುರಿಯನ್ನು ಟ್ರೆಂಡ್ ಸಮಿತಿ ಹೊಂದಿದೆ ಆಯೋಜಕರು ತಿಳಿಸಿದ್ದಾರೆ.