34 ನೆಕ್ಕಿಲಾಡಿ ಸಾಮಾನ್ಯ ಸಭೆ

0

ಸಿಸಿ ಕ್ಯಾಮರಾ ಕಳವು ಮಾಡಿದವರನ್ನು ಪತ್ತೆ ಹಚ್ಚಲು ಆಗ್ರಹ

ಉಪ್ಪಿನಂಗಡಿ: ಗ್ರಾ.ಪಂ. ವ್ಯಾಪ್ತಿಯ ಸಿ.ಸಿ. ಕ್ಯಾಮರಾವನ್ನು ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಿ ಅದರ ಖರ್ಚು ವೆಚ್ಚಗಳನ್ನು ಅವರಿಂದಲೇ ಭರಿಸಬೇಕೆಂಬ ಆಗ್ರಹ 34 ನೆಕ್ಕಿಲಾಡಿಯ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.


ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈಯವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಶಾಂತ್ ಎನ್., ಉಪ್ಪಿನಂಗಡಿಯಲ್ಲಿ ಅಂಗಡಿಯಿಂದ ಹಣ ಕಳವು ಮಾಡಿದವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳ ಕಳ್ಳತನವಾಗಿದ್ದು, ಅವರನ್ನು ಪತ್ತೆ ಹಚ್ಚಲಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ. ಪಿಡಿಒ ರವಿಚಂದ್ರ ಯು. ಅವರು, ಪೊಲೀಸರು ಅವರನ್ನು ಪತ್ತೆ ಹಚ್ಚಿದ್ದಾರೆ. ಅವರು ಮುಂದಿನ ಪ್ರಕ್ರಿಯೆ ನಡೆಸಲಿದ್ದಾರೆ ಎಂದರು. ಅದಕ್ಕೆ ಪ್ರಶಾಂತ್ ಎನ್., ಅವರು ಯಾರೆಂದು ಅವರ ಹೆಸರನ್ನು ಇಲ್ಲಿ ಬಹಿರಂಗಪಡಿಸಿ ಗ್ರಾಮದ ಜನರಿಗೆ ಅವರು ಯಾರೆಂದು ಗೊತ್ತಾಗಲಿ ಎಂದರು. ಅದಕ್ಕೆ ಪಿಡಿಒ ರವಿಚಂದ್ರ ಅವರು, ಪೊಲೀಸರು ಅವರ ಹೆಸರನ್ನು ಬಹಿರಂಗಪಡಿಸಿದ ಬಳಿಕವಷ್ಟೇ ನಾನು ಹೇಳಲು ಸಾಧ್ಯ ಎಂದರು. ಬಳಿಕ ಪ್ರಶಾಂತ್ ಎನ್. ಮಾತನಾಡಿ, ಸಿ.ಸಿ. ಕ್ಯಾಮರಾದ ಖರ್ಚು ವೆಚ್ಚಗಳನ್ನು ಅವರಿಂದಲೇ ಭರಿಸಬೇಕೆಂಬ ನಿರ್ಣಯ ಅಂಗೀಕರಿಸಲು ತಿಳಿಸಿದರು. ಬಳಿಕ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.


ಕರ್ವೇಲು ಅಂಗನವಾಡಿ ಬಳಿ ಬೀದಿ ನಾಯಿಗಳಿಗೆ ಒಬ್ಬರು ಊಟ ಹಾಕುತ್ತಿದ್ದು, ಇಲ್ಲಿ ಸುಮಾರು 30ರಷ್ಟು ಬೀದಿ ನಾಯಿಗಳಿವೆ. ಇದರಿಂದ ಪರಿಸರದ ಜನರಿಗೆ ತೊಂದರೆಯಾಗಿದೆ. ಆದ್ದರಿಂದ ಅವರ ಮೇಲೆ ಹಾಗೂ ಬೀದಿ ನಾಯಿಗಳನ್ನು ಸಾಕುತ್ತಿರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು. ಈ ಬಗ್ಗೆ ಚರ್ಚೆಯಾಗಿ ಅವರಿಗೆ ನೊಟೀಸು ನೀಡುವ ಕುರಿತು ನಿರ್ಣಯಿಸಲಾಯಿತು. ನೆಕ್ಕಿಲಾಡಿ ಗ್ರಾಮದಲ್ಲಿರುವ ಕ್ಷಯ ರೋಗಿಗಳಿಗೆ ಕಿಟ್ ವಿತರಿಸಲು ತೀರ್ಮಾನಿಸಲಾಯಿತು.

ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಟವರ್‌ಗಳ ವಾರ್ಷಿಕ ಶುಲ್ಕವನ್ನು ಸರಿಯಾಗಿ ಪಾವತಿಸುವಂತೆ ನೊಟೀಸ್ ನೀಡಲು ನಿರ್ಧರಿಸಲಾಯಿತು. ಶಿಥಿಲಗೊಂಡಿರುವ ಮಳೆ ಮಾಪನವನ್ನು ದುರಸ್ತಿ ಮಾಡಲು ಮನವಿ ಸಲ್ಲಿಸಲು, ತಾಳೆಹಿತ್ಲುವಿನ ಸರಸ್ವತಿಯವರ ಮನೆಯ ಪಕ್ಕದ ಧರೆ ಕುಸಿದು ಮನೆಗೆ ಹಾನಿಯಾಗಿರುವ ಬಗ್ಗೆ ದೂರು ಅರ್ಜಿ ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಕುರಿತು, ಸರಕಾರಿ ಜಾಗದಲ್ಲಿ ರಾಧಾಕೃಷ್ಣ ರೈ ಅಲಿಮಾರ್ ಇವರ ಜಾಗಕ್ಕೆ ಸಂಪರ್ಕಿಸುವ ರಸ್ತೆಗೆ ಧರೆಯ ಮಣ್ಣು ಕುಸಿದು ರಸ್ತೆಗೆ ತೊಂದರೆಯಾಗಿರುವ ಬಗ್ಗೆ ಸಲ್ಲಿಸಿರುವ ಮನವಿಯ ಕುರಿತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರ ಪತ್ರಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.


ಮೀಟರ್ ಅಳವಡಿಸದ ಹಾಗೂ ಕೆಟ್ಟು ಹೋದ ಮೀಟರ್‌ಗಳು ಇರುವ ಕುಡಿಯುವ ನೀರಿನ ಸಂಪರ್ಕವನ್ನು ಹಾಗೂ ಬಿಲ್ ಬಾಕಿಯಿಟ್ಟವರ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ನಿರ್ಣಯಿಸಲಾಯಿತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾಹೀರಾತು ಫಲಕಗಳನ್ನು ಪರಿಶೀಲನೆ ಮಾಡಲು ತೀರ್ಮಾನಿಸಲಾಯಿತು.


ನೆಕ್ಕಿಲಾಡಿ ನೆರೆ ಸಂತ್ರಸ್ತರ ಕಾಲನಿಗೆ ಹೊಸ ಅಂಗನವಾಡಿ ರಚನೆ ಮಾಡಲು ಶಾಸಕರಿಗೆ ಮನವಿ ಮಾಡಲು ತೀರ್ಮಾನಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಮಾತನಾಡಿ, ಮೈಂದಡ್ಕದಲ್ಲಿ ಹೊಸ ಅಂಗನವಾಡಿ ಕಟ್ಟಡಕ್ಕೆ ಅನುದಾನ ನೀಡಿದ ಶಾಸಕರಿಗೆ ಹಾಗೂ ಬೆಳೆ ವಿಮೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿಯೆತ್ತಿದ ಶಾಸಕರಿಗೆ, ಸಹಾಯಕ ಆಯುಕ್ತರಿಗೆ ಮನವಿ ನೀಡಿದ ಉಪ್ಪಿನಂಗಡಿ ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಹಾಗೂ ಸಂಸದರಿಗೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಸದಸ್ಯರಾದ ವಿಜಯಕುಮಾರ್, ಎ. ರತ್ನಾವತಿ, ಕೆ. ರಮೇಶ ನಾಯ್ಕ್, ವೇದಾವತಿ, ಸ್ವಪ್ನ, ಗೀತಾ, ತುಳಸಿ, ಹರೀಶ ಕೆ. ಉಪಸ್ಥಿತರಿದ್ದರು. ಗ್ರಾ.ಪಂ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ದೇವಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here