2017ರಿಂದಲೇ ಲೆಕ್ಕ ಪರಿಶೋಧನೆಗೆ ಆಗ್ರಹ
ಉಪ್ಪಿನಂಗಡಿ: ಶಾಲಾಡಳಿತದಲ್ಲಿ ಅನಗತ್ಯ ರಾಜಕೀಯ ಮಾಡುತ್ತಾ ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತಿರುವ ಮತ್ತು ಶಿಕ್ಷಕಿಯರಿಗೆ ಹಿಂಸೆ ನೀಡುತ್ತಿರುವ ಎಸ್‌ಡಿಎಂಸಿ ಸದಸ್ಯ ಮೊಯ್ದಿನ್ ಕುಟ್ಟಿ ರವರ ಕೃತ್ಯವನ್ನು ನಿಯಂತ್ರಿಸಬೇಕೆಂದೂ ಹಾಗೂ ಈ ಹಿಂದೆ 6 ವರ್ಷಗಳ ಕಾಲ ಅವರು ಎಸ್‌ಡಿಎಂಸಿ ಅಧ್ಯಕ್ಷನಾಗಿ ಅಧಿಕಾರದಲ್ಲಿದ್ದ ವೇಳೆ ಆರ್ಥಿಕ ಅವ್ಯವಹಾರ ನಡೆಸಿರುವ ಆರೋಪಗಳಿದ್ದು, ಆ ಕಾಲದಿಂದ ಇಲ್ಲಿಯವರೆಗೆ ಆರ್ಥಿಕ ವ್ಯವಹಾರದ ಪೂರ್ಣ ತನಿಖೆ ನಡೆಸಿ ಸತ್ಯಾಂಶವನ್ನು ಬಯಲುಗೊಳಿಸಬೇಕೆಂದು 185 ವರ್ಷ ಇತಿಹಾಸವನ್ನು ಹೊಂದಿರುವ ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಶಾಂತಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ಈ ಹಿಂದೆ ಆರು ವರ್ಷಗಳ ಕಾಲ ಇದೇ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ ಲಕ್ಷಾಂತರ ರೂಪಾಯಿ ಆರ್ಥಿಕ ಅವ್ಯವಹಾರ ನಡೆಸಿದ ಆರೋಪದ ಪ್ರಕರಣ ತನಿಖೆಯಲ್ಲಿದ್ದಾಗಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮೊಯ್ದಿನ್ ಕುಟ್ಟಿ ಎಂಬವರು 2021 ರ ಡಿಸೆಂಬರ್ ತಿಂಗಳಲ್ಲಿ ಮತ್ತೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯನಾಗಿ ಬಳಿಕ ಅಧ್ಯಕ್ಷನಾಗಿ ಆಯ್ಕೆಯಾಗಿದ್ದರೂ ಆರ್ಥಿಕ ಲೆಕ್ಕಾಚಾರದ ಪಾರದರ್ಶಕತೆಯನ್ನು ಸದಸ್ಯರು ಬಯಸಿದಾಗ ಹಾಗೂ ಸದಸ್ಯರೆಲ್ಲರೂ ಅವರ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದಾಗ ಅವರು ರಾಜೀನಾಮೆ ಸಲ್ಲಿಸಿದ್ದರು. ಬಳಿಕ ನಡೆದ ಆ ಸಭೆಯಲ್ಲಿ ನಾನು ಅಧ್ಯಕ್ಷನಾಗಿ ಒಮ್ಮತದಿಂದ ಆಯ್ಕೆಯಾಗಿದ್ದೇನೆ. ಪ್ರಸಕ್ತ ರಾಷ್ಟ್ರೀಯ ಹೆದ್ದಾರಿ 75 ರ ಅಗಲೀಕರಣದ ಕಾರಣಕ್ಕೆ ದಾನಿಗಳಿಂದ ನಿರ್ಮಿಸಲ್ಪಟ್ಟ ಶಾಲಾ ಕಟ್ಟಡ ತೆರವುಗೊಳ್ಳಲಿದ್ದು, ಈ ಕಾರಣಕ್ಕೆ ಹೆದ್ದಾರಿ ಪ್ರಾಧಿಕಾರದಿಂದ 1.70 ಕೋಟಿ ರೂ. ಪರಿಹಾರ ಲಭಿಸಿದೆ. ಈ ಹಣದಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮುಂದಾಗಿರುವಂತೆಯೇ ಇದು ತನ್ನ ಅಧ್ಯಕ್ಷತೆಯಲ್ಲಿಯೇ ನಡೆಯಬೇಕೆಂದು ಮೊಯ್ದೀನ್ ಕುಟ್ಟಿಯವರು ಶಾಲಾಡಳಿತದಲ್ಲಿ ಅನಪೇಕ್ಷಿತ ವಿದ್ಯಾಮಾನಗಳನ್ನು ಸೃಷ್ಟಿಸುತ್ತಾ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ನನ್ನಿಂದ ಆರ್ಥಿಕ ಅವ್ಯವಹಾರಗಳು ನಡೆದಿದೆ ಎಂದೂ ಸುಳ್ಳು ಆಪಾದನೆಯನ್ನು ಮಾಡಿ, ಕೆಲವೊಂದು ಸದಸ್ಯರಿಂದ ಒತ್ತ್ತಾಯಪೂರ್ವಕ ಸಹಿ ಪಡೆದು ಇಲಾಖೆಗಳಿಗೆ ದೂರು ಸಲ್ಲಿಸಿದ್ದಲ್ಲದೆ, ನನ್ನ ಅವಧಿಯಲ್ಲಿನ ಅಮೂಲಾಗ್ರ ಲೆಕ್ಕಪರಿಶೀಲನೆ ನಡೆಸಬೇಕೆಂದು ಅಗ್ರಹಿಸಿರುತ್ತಾರೆ. ಶಾಲಾ ಆರ್ಥಿಕ ವ್ಯವಹಾರದ ಲೆಕ್ಕ ಪರಿಶೋಧನೆಗೆ ನನ್ನ ಸ್ವಾಗತವಿದ್ದು, ಆದರೆ ತನಿಖೆ ಕೇವಲ ೮ ತಿಂಗಳ ಅವಧಿಯದ್ದಾಗಿರದೇ ಕಳೆದ 2017 ರಿಂದಲೇ ಅಗತ್ಯ ತನಿಖೆ ನಡೆಸಬೇಕೆಂದು ರವಿಚಂದ್ರ ಶಾಂತಿ ಇಲಾಖಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಅಗ್ರಹಿಸಿದ್ದಾರೆ.
ತಾನೋರ್ವ ಪ್ರಶ್ನಾತೀತ ಎಸ್‌ಡಿಎಂಸಿ ಸದಸ್ಯನೆಂಬಂತೆ ವರ್ತಿಸುವ ಈ ವ್ಯಕ್ತಿಯಿಂದ ಶಾಲೆಗೆ ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕಿಯರ ಬಗ್ಗೆ ಶಾಲಾ ಗೇಟಿನ ಬಳಿ ಅವರುಗಳ ವಿಡಿಯೋ ತೆಗೆಯುವುದು, ಅಡುಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ವೇಳೆ ಅಡುಗೆ ಕೋಣೆಗೆ ಒಂಟಿಯಾಗಿ ಹೋಗಿ ಅಲ್ಲಿನ ಸಿಬ್ಬಂದಿಗೆ ಇರಿಸುಮುರಿಸು ಉಂಟುಮಾಡುವುದು ಮೊದಲಾದ ಕೃತ್ಯಗಳು ಪದೇ ಪದೇ ನಡೆಯುತ್ತಿದೆ. ಅಲ್ಲದೇ, ಅತೀ ಉದ್ದಟತನದ ನಡೆ ಎಂಬಂತೆ ದಿನಾಂಕ ಆ.29ರಂದು ಶಾಲಾ ಮುಖ್ಯೋಪಧ್ಯಾಯರು ಕರೆದ ಪೋಷಕರ ಸಭೆಗೆ ಹಾಜರಾಗಲು ಆಗಮಿಸಿದ್ದ ಪೋಷಕರನ್ನು ಗೇಟಿನ ಬಳಿಯೇ ತಡೆದು ಸಭೆಗೆ ಹಾಜರಾಗದಂತೆ ಬೆದರಿಸಿರುವ ಕೃತ್ಯವನ್ನೂ ನಡೆಸಿದ್ದಾರೆ. ಈ ಎಲ್ಲಾ ಕೃತ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಇದೀಗ ನನ್ನಿಂದ ಆರ್ಥಿಕ ಅವ್ಯವಹಾರಗಳು ನಡೆದಿದೆ ಎಂದೂ ಸುಳ್ಳು ಆಪಾದನೆಯನ್ನು ತನ್ನ ಮೇಲೆ ಮಾಡಿದ್ದಾರೆ ಎಂದು ಆರೋಪಿಸಿದ ರವಿಚಂದ್ರ ಶಾಂತಿಯವರು ಶಾಲೆಯಲ್ಲಿ ಅನಾರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತಿರುವ ಮೊಯ್ದೀನ್ ಕುಟ್ಟಿಯವರ ಇಂತಹ ಕೃತ್ಯಗಳನ್ನು ನಿಯಂತ್ರಿಸಬೇಕೆಂದು ಹಾಗೂ 2017 ರಿಂದ ಈವರೆಗಿನವರೆಗೆ ಶಾಲಾ ಆರ್ಥಿಕ ವ್ಯವಹಾರದ ಬಗ್ಗೆ ಅಮೂಲಾಗ್ರ ತನಿಖೆ ನಡೆಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.