ಪುತ್ತೂರು: ಪೊಲೀಸ್ ಇಲಾಖೆಯ ಪುತ್ತೂರು ಉಪವಿಭಾಗದ ಡಿವೈಎಸ್ಪಿಯಾಗಿದ್ದ ಡಾ. ಗಾನಾ ಪಿ. ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಡಿ.ಸಿ.ಆರ್.ಬಿ. ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮಂಗಳೂರಿನಲ್ಲಿರುವ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಯವರ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಸ್ಟ್ರಿಕ್ಟ್ ಕ್ರೈಮ್ ರೆಕಾರ್ಡ್ ಬ್ಯೂರೋದ ಡಿವೈಎಸ್ಪಿಯಾಗಿ ಕರ್ತವ್ಯಕ್ಕೆ ಹಾಜರಾಗಿರುವ ಡಾ.ಗಾನಾ ಪಿ.ಕುಮಾರ್ ಅವರು ಸಿಐಡಿ ವಿಭಾಗದ ಡಿವೈಎಸ್ಪಿಯಾಗಿ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ ಬಳಿಕ ಕಳೆದ ಎರಡು ವರ್ಷಗಳಿಂದ ಪುತ್ತೂರಿನಲ್ಲಿ ಡಿವೈಎಸ್ಪಿಯಾಗಿದ್ದರು.ಇತ್ತೀಚೆಗೆ ಡಾ.ಗಾನಾ ಪಿ.ಕುಮಾರ್ ಅವರನ್ನು ಪುತ್ತೂರಿನಿಂದ ವರ್ಗಾವಣೆಗೊಳಿಸಿ ಬೆಂಗಳೂರಿನಲ್ಲಿ ಸಿಐಡಿ ವಿಭಾಗದ ಡಿವೈಎಸ್ಪಿಯಾಗಿದ್ದ ವೀರಯ್ಯ ಹಿರೇಮಠ್ ಅವರನ್ನು ಪುತ್ತೂರು ಡಿವೈಎಸ್ಪಿಯಾಗಿ ನೇಮಕ ಮಾಡಲಾಗಿತ್ತು. ಡಾ.ಗಾನಾ ಪಿ. ಕುಮಾರ್ ಅವರನ್ನು ಬೆಂಗಳೂರು ಸಿಐಡಿ ಡಿವೈಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಅವರನ್ನು ಮಂಗಳೂರು ಡಿ.ಸಿ.ಆರ್.ಬಿ.ಯ ಡಿವೈಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದ್ದು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪುತ್ತೂರಿನಲ್ಲಿ ಈ ಹಿಂದೆ ಡಿವೈಎಸ್ಪಿಗಳಾಗಿದ್ದ ಭಾಸ್ಕರ ರೈ ಮತ್ತು ದಿನಕರ ಶೆಟ್ಟಿಯವರೂ ಬಳಿಕ ಡಿ.ಸಿ.ಆರ್.ಬಿ.ಯ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.ನಂತರ ಭಾಸ್ಕರ ರೈ ನಿವೃತ್ತರಾಗಿದ್ದು ದಿನಕರ ಶೆಟ್ಟಿ ಪ್ರಸ್ತುತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸಿಪಿಯಾಗಿದ್ದಾರೆ.