




ಪುತ್ತೂರು: ಕರಾವಳಿಯಲ್ಲಿ ಸಾರ್ವಜನಿಕರು ಭೂ ಅಭಿವೃದ್ಧಿ ಮತ್ತು ಕಟ್ಟಡ ಲೈಸೆನ್ಸ್ ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಪುತ್ತೂರುರವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ರಾಜ್ಯದ ಕರಾವಳಿಯ ಗ್ರಾಮೀಣ ಭಾಗದಲ್ಲಿರುವ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸ್ವಂತ ಜಮೀನಿನಲ್ಲಿ ಹೊಸದಾಗಿ ಮನೆ ನಿರ್ಮಿಸಲು ಸರ್ಕಾರದ ವಿವಿಧ ಇಲಾಖೆಗಳಿಂದ ಅನುಮೋದನೆ ಪಡೆಯಬೇಕಾದ ಪ್ರಕ್ರಿಯೆಗಳು ಬಹಳ ಜಟಿಲವಾಗಿದ್ದು ಯಾವುದೇ ನಾಗರಿಕ ತಾನೇ ಸ್ವತಹ ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲು ಸಾಧ್ಯವಿಲ್ಲದೆ ಮಧ್ಯವರ್ತಿಗಳನ್ನು ಅವಲಂಬಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಭೂ ಪರಿವರ್ತನೆಯಿಂದ ಪ್ರಾರಂಭಿಸಿ ವಿದ್ಯುತ್ ಸಂಪರ್ಕ ಪಡೆಯುವವರೆಗೆ ಪ್ರತಿಯೊಬ್ಬ ನಾಗರಿಕನೂ ಕನಿಷ್ಟ 06 ಇಲಾಖೆಗಳಿಗೆ ಅಲೆದಾಡಬೇಕಾಗಿದೆ. ಭೂ ಪರಿವರ್ತನೆಯ ಪೂರ್ವದಲ್ಲಿ 11-ಇ ನಕ್ಷೆಗಾಗಿ- ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಜಮೀನಿನ ಭೂ ಪರಿವರ್ತನೆಗಾಗಿ-ಕಂದಾಯ ಇಲಾಖೆ, ನಿವೇಶನದ ವಿನ್ಯಾಸ ಅನುಮೋದನೆ , ಕಟ್ಟಡ ನಕ್ಷೆಯ ತಾಂತ್ರಿಕ ಅನುಮೋದನೆ ಮತ್ತು ಸ್ವಾಧೀನ ಪ್ರಮಾಣ ಪತ್ರಕ್ಕಾಗಿ ಧೃಢಪತ್ರ ಪಡೆಯಲು- ನಗರಾಭಿವೃದ್ಧಿ ಇಲಾಖೆಯ ಸ್ಥಳೀಯ ನಗರ ಯೋಜನಾ ಪ್ರಾಧಿಕಾರ, ನಮೂನೆ 11-ಎ, ಕಟ್ಟಡ ಪರವಾನಿಗೆ , ಸ್ವಾಧೀನ ಪ್ರಮಾಣ ಪತ್ರ ಮತ್ತು ಕದನಂಬ್ರ ಪಡೆಯಲು-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ( ಗ್ರಾಮ ಪಂಚಾಯತ್), ಕಟ್ಟಡದ ಸ್ವಾಧೀನ ಪ್ರಮಾಣ ಪತ್ರಕ್ಕಾಗಿ ಧೃಢಪತ್ರ ಪಡೆಯಲು -ಕಾರ್ಮಿಕ ಇಲಾಖೆ, ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಲು- ಇಂಧನ ಇಲಾಖೆ (ಮೆಸ್ಕಾಂ)ಇತರ ನಿರಾಕ್ಷೇಪಣಾ ಪತ್ರಗಳು ಅಗತ್ಯವಿದ್ದಲ್ಲಿ ಸರ್ಕಾರದ ಇತರ ಇಲಾಖೆಗಳನ್ನು ಸಂಪರ್ಕಿಸಬೇಕಾಗಿದೆ.




ಇ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ಸಾಧ್ಯವಿದೆ ಮಾನ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ ಸಂಖ್ಯೆ 64(5) ತಿದ್ದುಪಡಿ ಮಾಡಿ ಗ್ರಾಮಾಂತರ ಯೋಜನಾ ನಿಯಮವನ್ನು ಜಾರಿಗೆ ತಂದು ನಿವೇಶನದ ವಿನ್ಯಾಸ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತಿಗೆ ನೀಡಿದಲ್ಲಿ ಗ್ರಾಮೀಣ ಜನರು ನಗರ,ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ತಪ್ಪುತ್ತದೆ. ಇಂತಹ ಜನಪರವಾದ ನಿಲುವನ್ನು ಸರ್ಕಾರ ಕೈಗೊಂಡಲ್ಲಿ ಪ್ರಜಾಪ್ರಭುತ್ವ ಮತ್ತು ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಗೆ ಮೆರುಗು ಬರುತ್ತದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ ಎಂದು ಕಿಶೋರ್ ಕುಮಾರ್ ಪುತ್ತೂರುರವರು ಸಭೆಯ ಗಮನಕ್ಕೆ ತಂದರು.





‘ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಕಾನೂನುಗಳು ದೇಶದ ಅಭಿವೃದ್ಧಿ ಮತ್ತು ಸಾರ್ವಜನಿಕರ ಪರವಾಗಿ ಇರಬೇಕು. ಆದರೆ ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಭೂ ಅಭಿವೃದ್ಧಿ ಮತ್ತು ಕಟ್ಟಡ ಪರವಾನಿಗೆ ಪಡೆಯಲು ಇರುವ ಕಾನೂನು ತುಂಬಾ ಜಟಿಲವಾಗಿದ್ದು ಸಾಮಾನ್ಯ ನಾಗರಿಕರಿಗೆ ಅರ್ಥೈಸಲು ಸುಲಭ ಸಾಧ್ಯವಿಲ್ಲ ಇದಕ್ಕೆ ಏಕೈಕ ಪರಿಹಾರವೆಂದರೆ ಸರಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ 64(5)ಕ್ಕೆ ತಿದ್ದುಪಡಿ ತಂದು ನಿಯಮವನ್ನು ಸರಳೀಕರಣ ಗೊಳಿಸುವ ಇಚ್ಚಾಶಕ್ತಿ ತೋರಬೇಕಿದೆ.’
ಕಿಶೋರ್ ಕುಮಾರ್ ಪುತ್ತೂರು,
ವಿಧಾನ ಪರಿಷತ್ತು ಸದಸ್ಯರು








