ಐತ್ತೂರು ಗ್ರಾ.ಪಂ. ಅಧ್ಯಕ್ಷರ ವಿರುದ್ದ ಆರು ಸದಸ್ಯರಿಂದ ಅವಿಶ್ವಾಸ ಮಂಡನೆ

0

ಹೈಕೋರ್ಟ್ ತಡೆ-ಎ.ಸಿ. ಅಧ್ಯಕ್ಷತೆಯ ಗೊತ್ತುವಳಿ ಸಭೆ ರದ್ದು

ಕಡಬ: ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲ ಅವರ ವಿರುದ್ಧ ಉಪಾಧ್ಯಕ್ಷರ ಸಹಿತ ಆರು ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದ ಹಿನ್ನೆಲೆಯಲ್ಲಿ ಪುತ್ತೂರು ಎ.ಸಿ. ಅಧ್ಯಕ್ಷತೆಯಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆಯನ್ನು ಸೆ.8ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಸಲು ಸಿದ್ಧತೆ ನಡೆಸಲಾದ ಮತ್ತು ಸಭೆ ನಡೆಯುವ ಮುನ್ನವೇ ಅಧ್ಯಕ್ಷರು ತನ್ನ ವಿರುದ್ಧದ ಅವಿಶ್ವಾಸ ಗೊತ್ತುವಳಿಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಎ.ಸಿ.ಯವರು ಸಭೆಯನ್ನು ರದ್ದುಗೊಳಿಸಿದ ಘಟನೆ ನಡೆದಿದೆ.

ಐತ್ತೂರು ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 11 ಮಂದಿ ಸದಸ್ಯರಿದ್ದು ಅದರಲ್ಲಿ ಆರು ಮಂದಿ ಬಿಜೆಪಿ ಬೆಂಬಲಿತ ಸದಸ್ಯರು, ಐದು ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ. ಬಿಜೆಪಿ ಬೆಂಬಲಿತರ ಸಂಖ್ಯಾ ಬಲ ಜಾಸ್ತಿ ಇದ್ದರೂ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದ ಹಿಂದುಳಿದ ವರ್ಗ ಬಿ ಮಹಿಳೆ ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಇಲ್ಲದೇ ಇದ್ದುದರಿಂದ ಕಾಂಗ್ರೆಸ್ ಬೆಂಬಲಿತ ಶ್ಯಾಮಲ ಅವರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿದಿತ್ತು. ಬಳಿಕದ ದಿನಗಳಲ್ಲಿ ಹಲವಾರು ವಿಚಾರಗಳಿಗೆ ಸಂಬಂಽಸಿ ಅಧ್ಯಕ್ಷರ ವಿರುದ್ಧ ಪಂಚಾಯತ್‌ನ ಸುಮಾರು 8 ಸದಸ್ಯರಿಗೆ ಅವಿಶ್ವಾಸ ಹೊಂದಿ, ಸಾಮಾನ್ಯ ಸಭೆಗೆ ಗೈರು ಹಾಜರಾಗಿರುವುದು, ಗ್ರಾಮಸಭೆ ನಡೆಯದಿರುವುದು ಮೊದಲಾದ ಹಲವಾರು ಬೆಳವಣಿಗಳು ಪಂಚಾಯತ್‌ನಲ್ಲಿ ನಡೆದಿತ್ತು.

ಎ.ಸಿ.ಯವರಿಗೆ ಆರು ಸದಸ್ಯರಿಂದ ಅವಿಶ್ವಾಸ ಮಂಡನೆ: ಬಿಜೆಪಿ ಬೆಂಬಲಿತ ಸದಸ್ಯರಾದ ಗ್ರಾ.ಪಂ. ಉಪಾಧ್ಯಕ್ಷ ರೋಹಿತ್, ಸದಸ್ಯರಾದ ನಾಗೇಶ್, ವತ್ಸಲ, ಉಷಾ, ಧನಲಕ್ಷ್ಮೀ ಮತ್ತು ಜಯಲಕ್ಷ್ಮೀಯವರು ಆ.17ರಂದು ಪುತ್ತೂರು ಸಹಾಯಕ ಆಯುಕ್ತರ ಕಛೇರಿಗೆ ತೆರಳಿ ಅಧ್ಯಕ್ಷೆ ಶ್ಯಾಮಲ ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎ.ಸಿ.ಯವರು ಅವಿಶ್ವಾಸ ಗೊತ್ತವಳಿ ಸಭೆಯನ್ನು ಸೆ.೮ರಂದು ನಿಗದಿಪಡಿಸಿ ನೋಟೀಸು ನೀಡಿದ್ದರು.

ಹೈಕೊರ್ಟ್‌ನಿಂದ ತಡೆಯಾಜ್ಞೆ-ಸಭೆ ರದ್ದು: ಸೆ.8ರಂದು 11.30ರ ಸುಮಾರಿಗೆ ಐತ್ತೂರು ಗ್ರಾ.ಪಂ. ಸಭಾಂಗಣಕ್ಕೆ ಎ.ಸಿ. ಗಿರೀಶ್ ನಂದನ್‌ರವರು ಆಗಮಿಸಿದ್ದು ಈ ವೇಳೆ ಎಲ್ಲಾ ಸದಸ್ಯರು ಸಭೆಗೆ ಹಾಜರಾದರು. ಸಭೆ ಪ್ರಾರಂಭವಾಗುವ ಮೊದಲೇ ಅಧ್ಯಕ್ಷರು ಹೈಕೋರ್ಟ್ ನೀಡಿದ ತಡೆಯಾಜ್ಞೆಯ ಆದೇಶ ಪ್ರತಿಯನ್ನು ಎ.ಸಿ.ಯವರಿಗೆ ನೀಡಿದರು. ಆದೇಶ ಪತ್ರ ಪರಿಶೀಲಿಸಿದ ಎ.ಸಿ.ಯವರು ಸಭೆಯನ್ನು ರದ್ದುಗೊಳಿಸಿ ಇಂದಿನ ಗೊತ್ತುವಳಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಪ್ರಕಟಿಸಿದರು. ಬಳಿಕ ಅವರ ಕಾನೂನು ಪ್ರಕ್ರಿಯೆ ಮುಗಿಸಿ ತೆರಳಿದರು. ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಅವರ ಪರವಾಗಿ ಹೈಕೋರ್ಟ್ ಹಿರಿಯ ವಕೀಲ ಪಿ.ಪಿ.ಹೆಗ್ಡೆ ವಾದಿಸಿದ್ದರು.

ಅವಿಶ್ವಾಸ ಗೊತ್ತುವಳಿ ಕಾಂಗ್ರೆಸ್-ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ: ಅವಿಶ್ವಾಸ ನಿರ್ಣಯ ಗೊತ್ತುವಳಿ ಸಭೆ ಸೆ.8ರಂದು ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕಾಂಗ್ರೆಸ್, ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆದಿತ್ತು. ಸೆ.7ರಂದು ಬಿಜೆಪಿ ಬೆಂಬಲಿತ ಆರು ಮಂದಿ ಸದಸ್ಯರು, ಕಾಂಗ್ರೆಸ್ ಬೆಂಬಲಿತ ಮೂರು ಮಂದಿ ಸದಸ್ಯರು ಅಜ್ಞಾತ ಸ್ಥಳದಲ್ಲಿದ್ದರು. ಸಭೆ ನಡೆಸಲು ಎ.ಸಿ.ಯವರು ಬಂದ ಕೂಡಲೇ ಆರಂಭದಲ್ಲಿ ಅಧ್ಯಕ್ಷೆ ಶ್ಯಾಮಲ ಹಾಗೂ ಸದಸ್ಯ ವಿ.ಯಂ. ಕುರಿಯನ್ ಅವರು ಹಾಜರಾದರು. ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಮನಮೋಹನ ಗೊಳ್ಯಾಡಿ, ಈರೇಶ್, ಪ್ರೇಮಾ ಅವರುಗಳು ಬಳಿಕ ಪ್ರತ್ಯೇಕವಾಗಿ ಆಗಮಿಸಿದ್ದರು. ಇತ್ತ ಬಿಜೆಪಿ ಬೆಂಬಲಿತ ಆರು ಮಂದಿ ಸದಸ್ಯರು ಸಭಾಂಗಣ ಪ್ರವೇಶಿಸಿದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ಮತ್ತು ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳು ನಡೆದಿದ್ದವು ಎನ್ನುವುದು ಸ್ವಷ್ಟವಾಗಿ ಗೋಚರವಾಗುತ್ತದೆ.


ಕಾಂಗ್ರೆಸ್, ಬಿಜೆಪಿ ಮುಖಂಡರ ಜಮಾವಣೆ: ಗ್ರಾ.ಪಂ. ಸಭಾಂಗಣದೊಳಗೆ ಸದಸ್ಯರು, ಅಧಿಕಾರಿಗಳಿಗೆ ಮಾತ್ರ ಪ್ರವೇಶವಿತ್ತು. ಸಭಾಂಗಣದ ಹೊರಗಡೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಜಮಾಯಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ, ಪ್ರಮುಖರಾದ ಬಾಲಕೃಷ್ಣ ಬಳ್ಳೇರಿ, ವಿಜಯ ಕುಮಾರ್ ಕರ್ಮಾಯಿ, ಸಿ.ಜೆ.ಸೈಮನ್, ಸತೀಶ್ ನಾಕ್,ಶಿವಶಂಕರ್ ಬಿಳಿನೆಲೆ, ಶಾರದಾ ದಿನೇಶ್,ಸತೀಶ್ ಕಳಿಗೆ,ಇಸ್ಮಾಯಿಲ್,ವೆಂಕಟರಮಣ ಗೌಡ, ಯೂಸೂಫ್, ಬಿಜೆಪಿ ಮುಖಂಡರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಶಿವಪ್ರಸಾದ್ ನಡ್ತೋಟ, ತಮ್ಮಯ್ಯ ಗೌಡ ಸುಳ್ಯ, ಮೇದಪ್ಪ ಗೌಡ ಡೆಪ್ಪುಣಿ, ಹರೀಶ್ ಕೊಡಂದೂರು ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತರು ಗ್ರಾ.ಪಂ. ಕಛೇರಿಯಲ್ಲಿ ಸಭೆ ಆರಂಭಿಸಿದ ವೇಳೆ ಪಿಡಿಓ ಸುಜಾತಾ ಉಪಸ್ಥಿತರಿದ್ದರು.

ಅವಿಶ್ವಾಸ ಮಂಡನೆಗೆ ಅವಕಾಶ ನೀಡಿದರೆ‌ ಆಡಳಿತ ವ್ಯವಸ್ಥೆ, ಅಭಿವೃದ್ಧಿ ಕಾರ‍್ಯಕ್ಕೆ ತೊಂದರೆ ಹೈಕೋರ್ಟ್ ನ್ಯಾಯಪೀಠದ ಗಮನ ಸೆಳೆದ ಪಿ ಪಿ ಹೆಗ್ಡೆ

ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿರುವುದು ರಾಜಕೀಯ ಕಾರಣಕ್ಕಾಗಿ ನಡೆದಿದೆ. ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಯಾಗಿರುವ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ರಾಜಕೀಯ ಕಾರಣಕ್ಕಾಗಿ ಸುಳ್ಳು ಆರೋಪ ಮಾಡಲಾಗಿದೆ. ಅವರ ವಿರುದ್ಧ ಪಿತೂರಿ ಮಾಡಲಾಗಿದೆ. ಪಂಚಾಯತ್ ವ್ಯವಸ್ಥೆಯಲ್ಲಿ ರಾಜಕೀಯ ಮಾಡಲು ಅವಕಾಶ ಇಲ್ಲ. ಅವಿಶ್ವಾಸ ಮಂಡನೆಗೆ ಅವಕಾಶ ನೀಡಿದರೆ ಆಡಳಿತ ವ್ಯವಸ್ಥೆಗೆ, ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ಆಗುತ್ತದೆ ಎಂದು ಹಿರಿಯ ವಕೀಲ ಪಿ.ಪಿ.ಹೆಗ್ಡೆಯವರು ಹೈಕೋರ್ಟ್ ನ್ಯಾಯಪೀಠದ ಗಮನ ಸೆಳೆದಿದ್ದರು. ಪಿ.ಪಿ.ಹೆಗ್ಡೆಯವರ ವಾದ ಪುರಸ್ಕರಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಪಂಚಾಯತ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಮಂಡನೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಮುಂದೂಡಿದರು. ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಕಾರ್ಯದರ್ಶಿ, ಪುತ್ತೂರು ಸಹಾಯಕ ಕಮೀಷನರ್ ಹಾಗೂ ಐತ್ತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯವರನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

ಬಡ ಮಹಿಳೆ ಎನ್ನುವ ಕಾರಣ ಬಿಜೆಪಿಯವರು ತುಳಿದಿದ್ದಾರೆ-ಶ್ಯಾಮಲ

ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಪ್ರತಿಕ್ರಿಯೆ ನೀಡಿ, ನಾನೊಬ್ಬ ಬಡ ಮಹಿಳೆ ಅನ್ನುವ ಕಾರಣಕ್ಕೆ ಬಿಜೆಪಿಯವರು ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರ ಪ್ರಯತ್ನ ಫಲ ಕೊಡಲಿಲ್ಲ ಇದಕ್ಕೆ ನನ್ನ ಪಕ್ಷದ ಮುಖಂಡರು ಅವಕಾಶ ನೀಡಲಿಲ್ಲ, ನಾನು ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಧ್ಯಕ್ಷರ ಸರ್ವಾಧಿಕಾರ ಧೋರಣೆಯೇ ಅವಿಶ್ವಾಸಕ್ಕೆ ಕಾರಣ-ವಾಡ್ಯಪ್ಪ ಗೌಡ ಎರ್ಮಾಯಿಲ್

ಸುಳ್ಯ ಮಂಡಲ ಬಿಜೆಪಿ ಉಪಾಧ್ಯಕ್ಷ ವಾಡ್ಯಪ್ಪ ಗೌಡ ಅವರು ಪ್ರತಿಕ್ರಿಯಿಸಿ ಐತ್ತೂರು ಗ್ರಾ.ಪಂ.ನಲ್ಲಿ ಅಧ್ಯಕ್ಷರ ಸರ್ವಾಧಿಕಾರ ಧೋರಣೆಯೇ ಅವರ ವಿರುದ್ದ ಅವಿಶ್ವಾಸ ಮೂಡಲು ಕಾರಣವಾಗಿದೆ. ಬಿಜೆಪಿಯ ಆರು ಮಂದಿ ಸದಸ್ಯರಲ್ಲಿ ನಾಲ್ಕು ಜನ ಸದಸ್ಯರು ಮಹಿಳೆಯರೇ ಆಗಿದ್ದಾರೆ. ಉಪಾಧ್ಯಕ್ಷರ ಸಹಿತ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸದಸ್ಯರ ಗಮನಕ್ಕೆ ಬಾರದೆ ಪಂಚಾಯತ್ ನಿರ್ಣಯಗಳನ್ನು ಮಾಡುವುದು, ಅನುದಾನ ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡುವುದು ಮೊದಲಾದ ಸರ್ವಾಧಿಕಾರದಿಂದ ಅಧ್ಯಕ್ಷರ ವಿರುದ್ದ ಸದಸ್ಯರೇ ಎ.ಸಿ.ಯವರಿಗೆ ಅವಿಶ್ವಾಸ ಮಂಡನೆ ಮಾಡಿದ್ದು ಹೊರತು ಬಿಜೆಪಿ ಅಲ್ಲ. ಈಗಾಗಲೇ ಪಂಚಾಯತ್‌ಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಹಳಷ್ಟು ಅನುದಾನ ನೀಡುತ್ತಿದೆ, ಇದರ ಸದುಪಯೋಗ ಆಗಬೇಕು, ಪಂಚಾಯತ್‌ನಲ್ಲಿ ರಾಜಕೀಯ ಮಾಡಿದರೆ ನಾವು ಸಹಿಸಲು ಸಾಧ್ಯವಿಲ್ಲ, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತಾ ಮುಂದೆ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬೇಟಿ ಬಚಾವೋ, ಬೇಟಿ ಪಡಾವೋ ಹೇಳಿಕೆಗೆ ಮಾತ್ರ-ಬಾಲಕೃಷ್ಣ ಬಳ್ಳೇರಿ

ಕಾಂಗ್ರೆಸ್ ಮುಖಂಡ ಬಾಲಕೃಷ್ಣ ಬಳ್ಳೇರಿಯವರು ಮಾತನಾಡಿ, ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದು ಬಿಜೆಪಿಯ ಹೇಳಿಕೆ ಮಾತ್ರ ತಳಮಟ್ಟದಲ್ಲಿ ಸಾಮಾನ್ಯ ಮಹಿಳೆಗೆ ಅಗೌರವ ತೋರುವ ಕೆಲಸ ಬಿಜೆಪಿ ಮಾಡಿದೆ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಕೆಲಸದಲ್ಲಿ ಬಿಜೆಪಿ ಸೋತಿದೆ ಮುಂದೆಯೂ ಅವರ ಇಂತಹ ಕೆಲಸ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಕಾನೂನು ಹೋರಾಟ ಮಾಡಲಾಗುವುದು -ರೋಹಿತ್, ಗ್ರಾ.ಪಂ. ಉಪಾಧ್ಯಕ್ಷ

ಗ್ರಾಮ ಪಂಚಾಯತ್ ಉಪಾಧ್ಯಕ್ಷ ರೋಹಿತ್ ಅವರು ಪ್ರತಿಕ್ರಿಯೆ ನೀಡಿ, ಅಧ್ಯಕ್ಷರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದಾರೆ, ಇವತ್ತಿನ ಅವಿಶ್ವಾಸ ಗೊತ್ತುವಳಿಗೆ ನ್ಯಾಯಾಲಯದ ತಡೆಯಾe ಬಂದಿರುತ್ತದೆ, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತಾ ನಾವು ಮುಂದೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಧ್ಯಕ್ಷರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ-ವಿ.ಯಂ.ಕುರಿಯನ್

ಐತ್ತೂರು ಗ್ರಾ.ಪಂ.ಸದಸ್ಯ ವಿ.ಯಂ. ಕುರಿಯನ್ ಪ್ರತಿಕ್ರಿಯೆ ನೀಡಿ, ಐತ್ತೂರು ಗ್ರಾಮದ ಒಳಿತನ್ನು ಬಯಸಿದ ಅಧ್ಯಕ್ಷೆ ಶ್ಯಾಮಲ ಅವರನ್ನು ತುಳಿಯುವ ಕೆಲಸ ನಡೆದಿದೆ, ಈ ಕಾರ್ಯ ಯಶಸ್ವಿಯಾಗದು ಮುಂದಿನ ದಿನಗಳಲ್ಲಿ ಅಧ್ಯಕ್ಷರಿಂದ ಐತ್ತೂರು ಗ್ರಾಮಕ್ಕೆ ಉತ್ತಮ ಆಡಳಿತ ದೊರೆಯಲಿದೆ ಎಂದು ಹೇಳಿದರು.

ಬಿಜೆಪಿಯವರದ್ದು ಕುದುರೆ ವ್ಯಾಪಾರ ಮಾತ್ರ, ಅಭಿವೃದ್ದಿ ವಿಚಾರ ಇಲ್ಲ-ಸುಧೀರ್ ಕುಮಾರ್ ಶೆಟ್ಟಿ

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರು ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಕುದುರೆ ವ್ಯಾಪಾರ ಮಾತ್ರ ಗೊತ್ತು ಅಭಿವೃದ್ಧಿ ವಿಚಾರ ಗೊತ್ತೇ ಇಲ್ಲ, ಐತ್ತೂರು ಗ್ರಾ.ಪಂ.ನಲ್ಲಿ ಅಧ್ಯಕ್ಷೆ ಶ್ಯಾಮಲ ಅವರು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬರುವ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ಸರಿಯಾಗಿ ವಿನಿಯೋಗಿಸಿದ್ದಾರೆ. ಇದನ್ನು ಸಹಿಸದ ಬಿಜೆಪಿಯವರು ಇಂದು ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆ ಮಾಡಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಬಿಜೆಪಿಯವರಿಗೆ ನಂಬಿಕೆ ಇಲ್ಲದಂತಾಗಿದೆ. ಪ್ರಧಾನ ಮಂತ್ರಿಯಿಂದ ಗ್ರಾ.ಪಂ. ಸದಸ್ಯನವರೆಗೆ ಸಾಮಾಜಿಕ ನ್ಯಾಯ ಸಿಗಬೇಕು, ಆದರೆ ಬಿಜೆಪಿಯವರಿಗೆ ಇದೆಲ್ಲ ಬೇಡ, ಇಂದು ಬಿಜೆಪಿಯ ಹುನ್ನಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದೇವೆ, ಮುಂದೆ ಕಾನೂನು ಹೋರಾಟ ಮಾಡುತ್ತೇವೆ, ಬಿಜೆಪಿಯವರ ಕುತಂತ್ರವನ್ನು ಬಯಲಿಗೆಳೆಯುತ್ತೇವೆ ಎಂದು ಹೇಳಿದ್ದಾರೆ.

ಮಹಿಳೆಗೆ ಅಗೌರವ ನೀಡುವ ಬಿಜೆಪಿ ಕುತಂತ್ರ-ವಿಜಯ ಕುಮಾರ್ ರೈ

ಜಿಲ್ಲಾ ಕಾಂಗ್ರೆಸ್ ಮುಖಂಡ ವಿಜಯ ಕುಮಾರ್ ರೈ ಕರ್ಮಾಯಿ ಪ್ರತಿಕ್ರಿಯೆ ನೀಡಿ, ಸಾಂವಿಧಾನಿಕವಾಗಿ ಬಂದಿರುವ ಅಽಕಾರವನ್ನು ಕಿತ್ತೊಗೆಯುವ ಮೂಲಕ ಮಹಿಳೆಯರಿಗೆ ಅಗೌರವ ನೀಡುವ ಕುತಂತ್ರವನ್ನು ಬಿಜೆಪಿ ಮಾಡುತ್ತಿದೆ, ಇದಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿಯಿಂದ ಮಹಿಳೆಯರ ಶೋಷಣೆ -ಶಾರದಾದಿನೇಶ್

ಐತ್ತೂರು ಗ್ರಾ.ಪಂ. ಅಧ್ಯಕ್ಷರ ಅಭಿವೃದ್ದಿ ಕಾರ್ಯವನ್ನು ಸಹಿಸದ ಬಿಜೆಪಿಯವರು ಅವರನ್ನು ಕೆಳಗಿಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆದರೆ ಸಾಮಾಜಿಕ ನ್ಯಾಯವನ್ನು ನ್ಯಾಯಾಲಯ ಎತ್ತಿ ಹಿಡಿದು ಯಾವುದೇ ಭ್ರಷ್ಟಾಚಾರ ಮಾಡದ ಅಧ್ಯಕ್ಷೆ ಶ್ಯಾಮಲ ಅವರಿಗೆ ನ್ಯಾಯ ನೀಡಿದೆ. ಮುಂದೆ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಅಭಿವೃದ್ಧಿ ಆಗಲಿದೆ ಎಂದು ಮುಖಂಡರಾದ ಶಾರದಾ ದಿನೇಶ್ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here