ಪುತ್ತೂರು:ಲಂಚ,ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಜನಾಂದೋಲನಕ್ಕೆ ರೋಟರಿ ಜಿಲ್ಲೆ 3181ರ ಗವರ್ನರ್ ಪ್ರಕಾಶ್ ಕಾರಂತ್ ಬೆಂಬಲ ಸೂಚಿಸಿದ್ದಾರೆ.
ದ.ಕ.,ಕೊಡಗು, ಮೈಸೂರು ಮತ್ತು ಚಾಮರಾಜನಗರ ಕಂದಾಯ ಜಿಲ್ಲಾ ವ್ಯಾಪ್ತಿಯಲ್ಲಿರುವ 9 ವಲಯಗಳ 81 ರೋಟರಿ ಕ್ಲಬ್‌ಗಳನ್ನು ಹೊಂದಿರುವ ರೋಟರಿ ಜಿಲ್ಲೆ 3181ರ ಗವರ್ನರ್ ಆಗಿರುವ ಪ್ರಕಾಶ್ ಕಾರಂತ್ ಅವರನ್ನು, ಬಂಟ್ವಾಳದ ಅವರ ಕಛೇರಿಯಲ್ಲಿ ಸುದ್ದಿ ಜನಾಂದೋಲನ ವೇದಿಕೆ ಮುಖ್ಯಸ್ಥ ಡಾ.ಯು.ಪಿ.ಶಿವಾನಂದ ಹಾಗೂ ವೇದಿಕೆಯ ಪ್ರಮುಖರು ಭೇಟಿಯಾಗಿ, ಲಂಚ-ಭ್ರಷ್ಟಾಚಾರ ವಿರುದ್ಧದ ಫಲಕವನ್ನು ನೀಡಿದರು.ಫಲಕವನ್ನು ಪಡೆದುಕೊಂಡ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮತ್ತು ಕಾರ್ಯದರ್ಶಿ ನಾರಾಯಣ ಹೆಗ್ಡೆಯವರು ಸುದ್ದಿ ಜನಾಂದೋಲನಕ್ಕೆ ಬೆಂಬಲ ಸೂಚಿಸಿದರು.
ಉತ್ತಮ ಸೇವೆಗೆ ಪುರಸ್ಕಾರ ರೋಟರಿ ಸಂಸ್ಥೆಯ ಸದಸ್ಯರ ಉದ್ದೇಶವೂ ಹೌದು. ಸರಕಾರಿ ಕಛೇರಿಯಲ್ಲಿ ಲಂಚ ರಹಿತ ಉತ್ತಮ ಸೇವೆ ನೀಡುವ ಅಧಿಕಾರಿಯನ್ನು ಗುರುತಿಸುವ ಮೂಲಕ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಲಂಚಕೋರ ಅಽಕಾರಿಗಳ ಮನಪರಿವರ್ತನೆ ಮಾಡುತ್ತಿರುವ ಸುದ್ದಿ ಜನಾಂದೋಲನ ಕಾರ್ಯವನ್ನು ಪ್ರಕಾಶ್ ಕಾರಂತ್ ಶ್ಲಾಸಿದರು. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಸುದ್ದಿ ಜನಾಂದೋಲನದ ವೇದಿಕೆಯ ಘೋಷಣೆಯನ್ನು ಜನರಿಗೆ ತಲುಪಿಸುವುದು ಎಲ್ಲರ ಕರ್ತವ್ಯವಾಗಿದೆ. ತಮ್ಮ ಅಧಿಕಾರ ವ್ಯಾಪ್ತಿಯ ರೋಟರಿ ಸಂಸ್ಥೆಗಳ ಮೂಲಕ ಆ ಯೋಜನೆಯನ್ನು ಯಶಸ್ವಿ ಮಾಡಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಆಗಿರುವ ಪ್ರಕಾಶ್ ಕಾರಂತ್ ಅವರನ್ನು ಸುದ್ದಿ ಸೇವಾ ಟ್ರಸ್ಟ್‌ನ ಮುಖ್ಯಸ್ಥರೂ ಆಗಿರುವ ಸುದ್ದಿ ಜನಾಂದೋಲನದ ರೂವಾರಿ ಡಾ.ಯು.ಪಿ.ಶಿವಾನಂದ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು, ರೋಟರಿ ಲೆಫ್ಟಿನೆಂಟ್ ಡಾ|ಹರ್ಷ ಕುಮಾರ್ ರೈ ಮಾಡಾವು, ಸುದ್ದಿ ಜನಾಂದೋಲನ ವೇದಿಕೆ ಪುತ್ತೂರು ಮುಖ್ಯಸ್ಥರಾಗಿರುವ ಪುತ್ತೂರು ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್.ಕಲ್ಲರ್ಪೆರವರು ಸನ್ಮಾನಿಸಿ ಗೌರವಿಸಿದರು.