ಹೋರಾಟದ ಮೂಲಕ ಸೌಲಭ್ಯವನ್ನು ಪಡೆಯುವ ಹಕ್ಕನ್ನು ರಕ್ಷಿಸಿಕೊಳ್ಳಬೇಕು-ಶಿವಪ್ಪ ರಾಥೋಡ್
ಉಪ್ಪಿನಂಗಡಿ: ವಿಕಲಚೇತನರ ಕಲ್ಯಾಣಕ್ಕಾಗಿ ಸರಕಾರ 2016ರಲ್ಲಿ ಉತ್ತಮ ಕಾನೂನನ್ನು ಜಾರಿಗೆ ತಂದಿದೆಯಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೌಲಭ್ಯಗಳು ಮರೀಚಿಕೆಯಾಗಿದೆ. ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ದಾಖಲಾತ್ಮಕವಾಗಿ ಪತ್ರ ವ್ಯವಹಾರ ನಡೆಸುವ ಮೂಲಕ ಅನಿವಾರ್ಯವಾದರೆ ಹೋರಾಟ ನಡೆಸುವ ಮೂಲಕ ಸೌಲಭ್ಯವನ್ನು ಪಡೆಯುವ ಹಕ್ಕನ್ನು ರಕ್ಷಿಸಿಕೊಳ್ಳಬೇಕೆಂದು ಅಂಗವಿಲಕ ನೌಕರರ ಸಂಘದ ಮುಂದಾಳು ಶಿವಪ್ಪ ರಾಥೋಡ್ ಹೇಳಿದರು.
ಅವರು ಸೆ. 11ರಂದು ಉಪ್ಪಿನಂಗಡಿ ಸಂಗಮ ಕೃಪಾ ಸಭಾಂಗಣದಲ್ಲಿ ನಡೆದ ಎಂಡೋ ಪೀಡಿತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ ಸರಕಾರವು 21 ಬಗೆಯ ಅಂಗವಿಕಲತೆಯನ್ನು ಗುರುತಿಸಿದ್ದು, ಕಡ್ದಾಯ ಶಿಕ್ಷಣ ಯೋಜನೆಯಡಿ ಆರರಿಂದ ಹದಿನಾರು ವರ್ಷದೊಳಗಿನ ಯಾವುದೇ ವಿಕಲ ಚೇತನ ಮಗು ಆತ ಬಯಸಿದ ಶಾಲೆಯಲ್ಲಿ ಉಚಿತ ಶಿಕ್ಷಣವನ್ನು ಪಡೆಯಲು ಹಕ್ಕು ಉಳ್ಳವನಾಗಿದ್ದಾನೆ. ಹಾಗೂ ಎಲ್ಲಾ ಬಗೆಯ ಸ್ಕಾಲರ್ಶಿಪ್ ಪಡೆಯಲು ಆತ ಅರ್ಹನಾಗಿರುತ್ತಾನೆ. ಫಿಸಿಯೋಥೆರಫಿ ಚಿಕಿತ್ಸೆ ಪಡೆಯಬೇಕಾದರೆ ಆತನಿಗೆ ಪ್ರಯಾಣ ಭತ್ಯೆ ಹಾಗೂ ಆತನ ಪೋಷಕರಿಗೆ ಬೆಂಗಾವಲು ಭತ್ಯೆಯನ್ನು ನೀಡಬೇಕಾಗಿದೆ ಎಂದರು.
ಪಂಚಾಯತ್ ತನ್ನ ವಾರ್ಷಿಕ ನಿರ್ಣಯದಲ್ಲಿ ಶೇಕಡಾ 5ನ್ನು ಹಾಗೂ ಪ್ರತಿ ಶಾಸಕರು ಪ್ರತಿ ವರ್ಷ 20 ಲಕ್ಷ ರೂಪಾಯಿ ಹಣವನ್ನು ವಿಕಲಚೇತನರ ಕಲ್ಯಾಣಕ್ಕಾಗಿ ಮೀಸಲಿರಿಸಬೇಕು. ಸ್ವಂತ ಉದ್ಯೋಗವನ್ನು ಪೋಷಕರ ಜೊತೆಗೂಡಿ ಮಾಡುವ ಹಂಬಲ ವ್ಯಕ್ತಪಡಿಸಿದರೆ 50 ಶೇಕಡಾ ಸಬ್ಸಿಡಿ ಹೊಂದಿರುವ ಒಂದು ಲಕ್ಷ ರೂಪಾಯಿ ಸಾಲ ಪಡೆಯಲು, ಶಸ್ತ್ರ ಚಿಕಿತ್ಸೆಯಿಂದ ಅಂಗವೈಕಲ್ಯತೆಯ ಪ್ರಮಾಣವನ್ನು ತಗ್ಗಿಸಲು ಸಾಧ್ಯವಿದ್ದರೆ ರೂಪಾಯಿ ಒಂದು ಲಕ್ಷ ವರೆಗಿನ ವೈದ್ಯಕೀಯ ಮರು ಪಾವತಿ ಯೋಜನೆಯು ಲಭ್ಯವಿದೆ ಎಂದು ರಾಥೋಡ್ ವಿವರಿಸಿದರು.ಎಂಡೋ ಸಂತ್ರಸ್ತರ ಪರ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಮಾತನಾಡಿ ಸರಕಾರದ ತಪ್ಪಿನಿಂದಾಗಿ ಸಹಜ ಬದುಕು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿರುವ ಎಂಡೋ ಸಂತ್ರಸ್ತರಿಗೆ ಸರಕಾರ ಜಾರಿಗೆ ತಂದ ಯೋಜನೆಯ ಹೊರತಾಗಿಯೂ ಸೌಲಭ್ಯಗಳು ದೊರಕುತ್ತಿಲ್ಲ. ಎಂಡೋ ಸಂತ್ರಸ್ತರಿಗೆ 4 ಸಾವಿರ ಪ್ರತಿ ತಿಂಗಳು ಮಾಸಾಶನ ಮಂಜೂರಾತಿಯ ಆದೇಶ ಪ್ರತಿ ಬಂದಿದ್ದರೂ 2000 ಮಾತ್ರ ಬರುತ್ತಿದೆ. ಯುಡಿಐಡಿ. ಕಾರ್ಡ್ಗಾಗಿ ಅಲೆದಾಡುತ್ತಿದ್ದರೂ ಯಾವುದೇ ಸ್ಪಂದನವಿಲ್ಲ. ತಿಂಗಳುಗಟ್ಟಲೆ ಬಾಕಿಯಿರಿಸಿರುವ ಪಿಂಚಣಿ ಮೊತ್ತವನ್ನು ಪಾವತಿಸಲು ಅಧಿಕಾರಿಗಳ ನಿರ್ಲಕ್ಷ್ಯ, ಈಡೇರದ ಉಚಿತ ಪೌಷ್ಠಿಕ ದವಸಧಾನ್ಯಗಳ ವಿತರಣೆಯ ಭರವಸೆ, ಅಸಮರ್ಪಕ ಸಂಚಾರಿ ಫಿಸಿಯೋಥೆರಪಿ ವ್ಯವಸ್ಥೆ, ಅಂಗವಿಕಲರ ಸಮಸ್ಯೆಗೆ ಸ್ಪಂದಿಸಬೇಕಾದ ಇಲಾಖೆಗೆ ಇನ್ನೂ ಆಯುಕ್ತರ ನೇಮಕಕ್ಕೆ ಸರಕಾರ ಆಸಕ್ತಿ ತಾಳದಿರುವುದು ಖೇದಕರವೆಂದು ಬಣ್ಣಿಸಿದ ಅವರು ಹೋರಾಟವೊಂದೇ ನಮಗೆಲ್ಲರಿಗೂ ಉಳಿದಿರುವ ಏಕೈಕ ಮಾರ್ಗ ಎಂದು ಹೇಳಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಸಂಜೀವ ಕಬಕ, ತುಕ್ರಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು., ಸಂತ್ರಸ್ತರ ಪರವಾಗಿ ಅವ್ವಮ್ಮ, ಜೋಯಿ ಜೋಸೆಫ್, ಜಲಜಾಕ್ಷಿ ಸಮಸ್ಯೆಗಳನ್ನು ವ್ಯಕ್ತಪಡಿಸಿದರು.