- ಐಟಿ ಉದ್ಯಮ ಕ್ಷೇತ್ರದ ಸಾಧಕನಿಗೆ ಯುಎಇ ಸರಕಾರದಿಂದ ಗೌರವ
ಪುತ್ತೂರು: ದುಬೈಯಲ್ಲಿ ಐಟಿ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಯಶಸ್ವೀ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಈಶ್ವರಮಂಗಲ ಸಮೀಪದ ಪಟ್ರೋಡಿ ನಿವಾಸಿ ಯೂಸುಫ್ ಅವರಿಗೆ ಯುಎಇ ಸರಕಾರದಿಂದ ಪ್ರತಿಷ್ಠಿತ ಗೋಲ್ಡನ್ ವಿಸಾ ಲಭಿಸಿದೆ.
ಅನೇಕ ವಿಶೇಷತೆಗಳನ್ನೊಳಗೊಂಡಿರುವ ಗೋಲ್ಡನ್ ವಿಸಾವು ಅತೀ ವಿರಳ ಜನರಿಗೆ ಸಿಗುವ ವಿಶೇಷ ಮಾನ್ಯತೆಯಾಗಿದೆ. ಆರ್ಥಿಕ, ಸಾಮಾಜಿಕ, ಉನ್ನತ ಕೊಡುಗೆ ನೀಡಿದವರಿಗೆ ನೀಡಿ ಗೌರವಿಸುವ ಪದವಿಯಾಗಿರುವ ಗೋಲ್ಡನ್ ವಿಸಾಗೆ ಹೂಡಿಕೆದಾರರು, ಸಾಧಕ ಉದ್ಯಮಿಗಳು, ವಿಜ್ಞಾನಿಗಳು, ಅತ್ಯುತ್ತಮ ವಿದ್ಯಾರ್ಥಿಗಳು ಮತ್ತು ಪದವೀಧರರು, ಮಾನವೀಯ ಪ್ರವರ್ತಕರು ಮತ್ತು ಮುಂಚೂಣಿ ನಾಯಕರು ಅರ್ಹರಾಗುತ್ತಾರೆ.
ಯುಎಇ ಪೌರತ್ವ ರೀತಿಯ ಸಮಾನ ಗೌರವ ಇದಕ್ಕಿದ್ದು ಅಲ್ಲಿನ ನಾಗರಿಕರಿಗೆ ಸಿಗುವ ಎಲ್ಲ ಅವಕಾಶ, ಗೌರವವನ್ನೂ ಇದು ಒಳಗೊಂಡಿರುತ್ತದೆ.
ಯೂಸುಫ್ ಪಟ್ರೋಡಿಯವರು ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಈಶ್ವರಮಂಗಲದಲ್ಲಿ, ಪಿಯುಸಿ ಡಿಗ್ರಿ ವಿದ್ಯಾಭ್ಯಾಸವನ್ನು ಪುತ್ತೂರು ಸಂತ ಫೀಲೋಮಿನಾ ಕಾಲೇಜಿನಲ್ಲಿ ಪಡೆದಿದ್ದರು. ಉನ್ನತ ವಿದ್ಯಾಭ್ಯಾಸವನ್ನು ಬೆಂಗಳೂರು ಐಐಎಚ್‌ಟಿಯಲ್ಲಿ ಐಟಿ ತರಬೇತಿ ಪಡೆದು ಬೆಂಗಳೂರಿನ ಹಲವು ಕಂಪೆನಿಗಳಲ್ಲಿ ಉದ್ಯೋಗ ಮಾಡಿದ್ದ ಇವರು ನಂತರ ದುಬೈಗೆ ತೆರಳಿ ಅಲ್ಲಿ ಏಳು ವರ್ಷ ಐ.ಟಿ ರಂಗದಲ್ಲಿ ಕೆಲಸ ಮಾಡಿದ್ದರು.
ನಂತರ ತನ್ನದೇ ಸ್ವಂತ ಐ.ಟಿ ಸಮುಚ್ಚಯವನ್ನು ಕಟ್ಟಿ ಬೆಳೆಸಿದ ಇವರು ಅದರಲ್ಲಿ ಯಶಸ್ಸು ಸಾಧಿಸಿದ್ದರು. ಈದೀಗ ಸಂಸ್ಥೆಯ 10ನೇ ವರ್ಷಾಚರಣೆ ಸಂದರ್ಭದಲ್ಲಿ ಯುಎಇ ಸರಕಾರ ಐ.ಟಿ ಬಿಸಿನೆಸ್ ರಂಗದ ಕೊಡುಗೆ ಮತ್ತು ಸಾಧನೆಗಾಗಿ ಗೋಲ್ಡನ್ ವಿಸಾ ನೀಡಿ ಗೌರವಿಸಿದೆ.