ಉಪ್ಪಿನಂಗಡಿ: ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ರವರ ಸ್ಮರಣೆಯೊಂದಿಗೆ ಶಿಕ್ಷಕರಿಗೆ ಆಟೋಟ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಶಿಕ್ಷಕರ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೂರ್ಯಪ್ರಕಾಶ್ ಉಡುಪ ಮಾತನಾಡಿ, ಸರ್ವಪಳ್ಳಿ ರಾಧಾಕೃಷ್ಣನ್ರವರ ಜೀವನವನ್ನು ವಿವರಿಸಿದರಲ್ಲದೆ, ಇಂತಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮೌಲ್ಯಯುತ ಬದುಕು ನಮ್ಮದಾಗಲು ಸಾಧ್ಯ ಎಂದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಸುಪ್ರೀತಾ ಕುಳ್ಳಾಜೆ ಮಾತನಾಡಿ, ವಿದ್ಯಾರ್ಥಿ ಜೀವನದ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಗುರು ಎ. ಲಕ್ಷ್ಮಣ ಗೌಡ, ತಮ್ಮ ವರ್ತನೆ, ನಡವಳಿಕೆ ಹಾಗೂ ಬೋಧನೆಯಿಂದ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಡುವವರು ಶಿಕ್ಷಕರು. ಉತ್ತಮ ಶಿಕ್ಷಕನಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಈ ಸಂದರ್ಭ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳೇ ಶಿಕ್ಷಕರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಟ್ಟಿರುವುದು ವಿಶೇಷವಾಗಿತ್ತು. ಶಿಕ್ಷಕರು ತಮ್ಮ ಬಾಲ್ಯದ ಜೀವನವನ್ನು ಮೆಲುಕು ಹಾಕಿದರು. ನೃತ್ಯ ಶಿಕ್ಷಕಿ ಕುಮಾರಿ ಪೂಜಾ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಮಾನಸ ಸ್ವಾಗತಿಸಿದರು. ಕೀರ್ತನಾ ವಂದಿಸಿದರು. ಹರ್ಷ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು.