ಪುತ್ತೂರು: ದಿನಸಿ ಸಾಮಾಗ್ರಿ ಖರೀದಿಸಲು ಅಂಗಡಿಗೆ ಬಂದಿದ್ದ ಹಿಂದೂ ಮಹಿಳೆಯೋರ್ವರ ಮೇಲೆ ಮುಸ್ಲಿಂ ಯುವಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಈ ರೀತಿಯ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳಿಂದ ಸೆ.15 ರಂದು ಬೆಳಿಗ್ಗೆ ತಿಂಗಳಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಆರಂಭದಲ್ಲಿ ತಿಂಗಳಾಡಿಯ ಮುಖ್ಯರಸ್ತೆಯಲ್ಲಿ ಜಾಥ ನಡೆಯಿತು. ಬಳಿಕ ಎಲ್ಲಾ ವರ್ತಕರು ಅರ್ಧಗಂಟೆ ಅಂಗಡಿಮುಂಗಟ್ಟು ಬಂದ್ ಮಾಡುವಂತೆ ಹಿಂದೂ ಮುಖಂಡರು ಮನವಿ ಮಾಡಿಕೊಂಡರು. ಅದರಂತೆ ಹಿಂದೂ ಮುಸ್ಲಿಂ ವರ್ತಕರು ತಮ್ಮ ಅಂಗಡಿಮುಂಗಟ್ಟುಗಳನ್ನು ಅರ್ಧಗಂಟೆ ಬಂದ್ ಮಾಡಿದ್ದರು. ಆ ಬಳಿಕ ಖಂಡನಾ ಸಭೆ ಮತ್ತು ತಿಂಗಳಾಡಿ ಜಂಕ್ಷನ್‌ನಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಯಿತು. ಹಿಂದೂ ಸಂಘಟನೆಗಳ ಮುಖಂಡರುಗಳಾದ ಮುರಳೀಕೃಷ್ಣ ಹಸಂತಡ್ಕ, ಅರುಣ್ ಕುಮಾರ್ ಪುತ್ತಿಲ, ಚಿನ್ಮಯಿ ಈಶ್ವರಮಂಗಲ, ಬೂಡಿಯಾರ್ ರಾಧಾಕೃಷ್ಣ ರೈರವರುಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಿಂದೂ ಮಹಿಳೆಯ ಮೇಲೆ ಕೈ ಹಾಕಿ ಲೈಂಗಿನ ದೌರ್ಜನ್ಯ ನಡೆಸಿದ ಆರೋಪಿ ಓಲೆಮುಂಡೋವು ಸೊರಕೆಯ ಬದ್ರುದ್ದೀನ್ ಎಂಬವರನ್ನು ಘಟನೆ ನಡೆದು 4 ಗಂಟೆಯೊಳಗೆ ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದರು. ಈಗಾಗಲೇ ಹಲವು ಕಡೆಗಳಲ್ಲಿ ಹಿಂದೂ ಸಮಾಜದ ಮೇಲೆ ಮತಾಂಧ ಶಕ್ತಿಗಳಿಂದ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಮತ್ತು ಹಿಂದೂ ಸಮಾಜದ ಸಹನೆಯನ್ನು ಪರೀಕ್ಷೆ ಮಾಡುತ್ತಿರುವ ಬಗ್ಗೆ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯ ಘಟನೆಗಳು ಇನ್ನು ಮುಂದೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ಘಟನೆಯಲ್ಲಿ ಸಿಕ್ಕಿಬಿದ್ದ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜಯಲಕ್ಷ್ಮೀ ಬಲ್ಲಾಳ್, ಸುಜಾತ ಮುಳಿಗದ್ದೆ, ರೇವತಿ ಬೋಳೋಡಿ, ವಿಠಲ ರೈ ಮಿತ್ತೋಡಿ ಅಲ್ಲದೆ ಬಿಜೆಪಿ ಮುಖಂಡರುಗಳಾದ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಸೀತಾರಾಮ ರೈ ಕೆದಂಬಾಡಿಗುತ್ತು, ನಿತೀಶ್ ಕುಮಾರ್ ಶಾಂತಿವನ, ರಾಜೇಶ್ ರೈ ಪರ್ಪುಂಜ, ನಾರಾಯಣ ಪೂಜಾರಿ ಕುರಿಕ್ಕಾರ ಸಹಿತಿ ಹಲವು ಮಂದಿ ಉಪಸ್ಥಿತರಿದ್ದರು. ರವಿಕುಮಾರ್ ಕೈತಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಮಾರ್ ಕೆದಂಬಾಡಿಮಠ ವಂದಿಸಿದರು. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.