ಕೆಯ್ಯೂರಿನಲ್ಲಿ ನಡೆದಿದ್ದ ಕಳವು ಪ್ರಕರಣ: ನಾಲ್ವರು ದೋಷಮುಕ್ತ

0

ಪುತ್ತೂರು: ಕೆಯ್ಯೂರು ಗ್ರಾಮದ ಅರಿಕ್ಕಿಲದಲ್ಲಿ ಮನೆಯಿಂದ ಕಳವು ಮಾಡಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಘಟನೆಯ ವಿವರ:
2017ರ ಎಪ್ರಿಲ್ 16ರಂದು ರಾತ್ರಿ ಅಟೋ ರಿಕ್ಷಾದಲ್ಲಿ ಬಂದು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಅರಿಕ್ಕಿಲ ಎಂಬಲ್ಲಿ ಯಾರೂ ಇಲ್ಲದ ಮನೆಯ ಮುಂಬಾಗಿಲಿಗೆ ಅಳವಡಿಸಿದ್ದ ಲಾಕ್ ಅನ್ನು ಸ್ಕೂಡ್ರೈವರ್ ಮತ್ತು ಲಿವರ್ ಸಹಾಯದಿಂದ ಮೀಟಿ ತೆರೆದು ಮನೆಯ ಒಳಹೊಕ್ಕಿ ಮನೆಯ ಹಾಲ್‌ನಲ್ಲಿ ಗೋಡೆಯಲ್ಲಿರಿಸಿದ್ದ 15 ಸಾವಿರ ರೂ ಬೆಲೆಬಾಳುವ 32 ಇಂಚಿನ ಒನಿಡಾ ಟಿ.ವಿ, ಮನೆಯ ರೂಮ್‌ನ ಕಪಾಟಿನಲ್ಲಿ ಇರಿಸಿದ್ದ 6 ಸಾವಿರ ರೂ ಬೆಲೆ ಬಾಳುವ 4.370 ಗ್ರಾಂ ತೂಕ ಚಿನ್ನದ ಎರಡು ಉಂಗುರ, ಮತದಾನದ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಿಗೆ, ಅಧಾರ್ ಕಾರ್ಡ್, ರೂಮ್‌ನ ಕಪಾಟಿನಲ್ಲಿರಿಸಿದ್ದ 500 ರೂ ಬೆಲೆಬಾಳುವ ಎಮರ್ಜೆನ್ಸಿ ಲೈಟ್, 1500 ರೂ ಬೆಲೆಬಾಳುವ ಟಾರ್ಚ್ ಲೈಟ್, 1000 ರೂ ಬೆಲೆಬಾಳುವ ಸ್ಯಾಮ್‌ಸಂಗ್ ಮೊಬೈಲ್ ಫೋನ್ ಮತ್ತು 3000 ರೂ ಬೆಲೆಬಾಳುವ ರೇಡೋ ವಾಚ್ ಕಳವು ಮಾಡಲಾಗಿತ್ತು. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 457, 380, ಜೊತೆಗೆ 34 ಐಪಿಸಿಯಡಿ ಕೇಸು ದಾಖಲಾಗಿತ್ತು. ಬಳಿಕ ಆರೋಪಿಗಳಾದ ಅಶ್ರಫ್ ತಾರಿಗುಡ್ಡೆ, ಅನ್ವರ್ ಆಲಿ, ತೌಫಿಕ್ ಮತ್ತು ರಫೀಕ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ದೇವರಾಜ್ ವೈ.ಎಚ್.ರವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರ ವಕೀಲರಾದ ದೇವಾನಂದ ಕೆ. ಮತ್ತು ಕು. ಹರಿಣಿ ವಾದಿಸಿದ್ದರು.

LEAVE A REPLY

Please enter your comment!
Please enter your name here