ಮಾಡ್ನೂರಿನಲ್ಲಿ ನಡೆದಿದ್ದ ಕಳವು ಪ್ರಕರಣ: ಅಶ್ರಫ್, ಸಲಾಂ ದೋಷಮುಕ್ತ

0

ಪುತ್ತೂರು: ಮಾಡ್ನೂರು ಗ್ರಾಮದ ಕುಡ್ಪುನಡ್ಕ ಎಂಬಲ್ಲಿ ನಡೆದಿದ್ದ ಕಳವು ಪ್ರಕರಣದ ಈರ್ವರು ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಘಟನೆಯ ವಿವರ:
2021ರ ನವೆಂಬರ್ 21ರಂದು ರಾತ್ರಿ 2 ಗಂಟೆ ವೇಳೆಗೆ ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕುಡ್ಪುನಡ್ಕ ಎಂಬಲ್ಲಿರುವ ಸಿರಿ ಭೂಮಿ ಎಂಬ ಮಳಿಗೆಯ ಹಿಂಬದಿಯ ಮರದ ಬಾಗಿಲಿಗೆ ಬೀಗ ಅಳವಡಿಸಿರುವ ಅಳದಂಡೆಯ ಕೊಂಡಿಯನ್ನು ಮುರಿದು ಅಂಗಡಿಯ ಒಳಗೆ ಪ್ರವೇಶಿಸಿ ರೂಪಾಯಿ 8,೦೦೦ ಬೆಲೆ ಬಾಳುವ ಸಿ.ಸಿ.ಟಿ.ವಿಯ ಡಿವಿಆರ್, ಅಂಗಡಿಯಲ್ಲಿದ್ದ ಮೇಜಿನ ಕ್ಯಾಶ್ ಡ್ರಾವರಿಗೆ ಅಳವಡಿಸಿದ್ದ ಲಾಕ್ ಮುರಿದು ಅದರೊಳಗಿದ್ದ 16೦೦೦ ರೂ ಬೆಲೆ ಬಾಳುವ ಕ್ಯಾನನ್ ಕಂಪನಿಯ ಕ್ಯಾಮರಾ, 700 ರೂ ನಗದು ಹಣ ಹಾಗೂ ಅಂಗಡಿಯ ರ‍್ಯಾಕ್‌ಗಳಲ್ಲಿದ್ದ 16,೦೦೦ ರೂ ಬೆಲೆ ಬಾಳುವ ಸೋಪು, ಶ್ಯಾಂಪೂ, ಟೂತ್‌ಪೇಸ್ಟ್ ಮತ್ತು ಡೈಫುಟ್ಸ್ ಸೇರಿದಂತೆ ಒಟ್ಟು 40,7೦೦.೦೦ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 457, 380 ಜೊತೆಗೆ 34ಐ.ಪಿ.ಸಿ. ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಆರೋಪಿಗಳಾದ ಅಶ್ರಫ್ ತಾರಿಗುಡ್ಡೆ ಮತ್ತು ಮಹಮ್ಮದ್ ಸಲಾಂ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ದೇವರಾಜ್ ವೈ.ಎಚ್.ರವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರ ವಕೀಲರಾದ ದೇವಾನಂದ ಕೆ. ಮತ್ತು ಕು. ಹರಿಣಿ ವಾದಿಸಿದ್ದರು.

LEAVE A REPLY

Please enter your comment!
Please enter your name here