ಪುತ್ತೂರು: ಬಹುಮುಖ ಪ್ರತಿಭೆಯಾಗಿರುವ ಕುರಿಯ ನಿವಾಸಿ ಕು. ಜ್ಞಾನ ರೈಯವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಶಿವಶರಣೆ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಭಾಗ್ಯ ಜ್ಯೋತಿ ಸಾಂಸ್ಕೃತಿಕ ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಂಗ ಬದುಕು ಟ್ರಸ್ಟ್ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಶಿವಶರಣೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಹಾಗೂ ಪುನೀತ್ ರಾಜಕುಮಾರ್ ನೆನಪು ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಜ್ಞಾನ ರೈ ಯವರಿಗೆ ನಂದಿಪುರ ಕ್ಷೇತ್ರದ ಡಾ. ಮಹೇಶ್ವರ ಸ್ವಾಮೀಜಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ. ಆರ್. ಭೀಮ ಸೇನಾ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ .ಕಪ್ಪಣ್ಣ, ರಾಜ್ಯ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಕೆಂಚನೂರು ಶಂಕರ್ ಮತ್ತು ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್ ರಾಜ್ಯಾಧ್ಯಕ್ಷೆ ಹೆಲನ್ ಮೈಸೂರು ಅವರು ಶಿವಶರಣೆ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸಿದ್ದಗಂಗಾಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ವಿಶ್ವ ಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿ, ಸಮಾಜ ಸೇವಾ ರತ್ನ ರಾಜ್ಯಪ್ರಶಸ್ತಿ, ಕರುನಾಡ ತಾರೆ ರಾಜ್ಯ ಪ್ರಶಸ್ತಿ, ಆದಿಗ್ರಾಮೋತ್ಸವ ಪ್ರತಿಭಾ ಸಿರಿ ಗೌರವ ಪ್ರಶಸ್ತಿ, ಸುದ್ದಿ ಬಿಡುಗಡೆಯ ಪ್ರತಿಭಾ ದೀಪ ಪ್ರಶಸ್ತಿ ಮತ್ತು ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪುರಸ್ಕೃತೆಯಾಗಿರುವ ಬಾಲಪ್ರತಿಭೆ ಜ್ಞಾನ ರೈ ಕುರಿಯ ಅವರು ಕನ್ನಡ ಹಾಗೂ ತುಳು ಸಿನಿಮಾಗಳು, ಕಿರುಚಿತ್ರ ಹಾಗೂ ಆಲ್ಬಂ ಸಾಂಗ್ ಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ನೃತ್ಯ, ಅಭಿನಯ ಮಾತ್ರವಲ್ಲದೆ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಲವಾರು ಫೋಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತೆಯಾಗಿರುವ ಇವರು ಜಾಹೀರಾತಿನಲ್ಲೂ ನಟಿಸಿದ್ದಾರೆ.
ಧಾರ್ಮಿಕ ಶಿಕ್ಷಣದತ್ತ ಒಲವು ತೋರಿರುವ ಇವರು ಕೂಡ್ಲಿಗಿಯ ಗುರುದೇವ ಗುರುಕುಲದ ಶಶಿಧರ್ ಗುರೂಜಿಯವರಿಂದ ಭಗವದ್ಗೀತೆ ಪಠಣ, ನಿತ್ಯ ಶ್ಲೋಕಗಳು, ಅಬಾಕಸ್, ಗಾಂಧಾರಿ ವಿದ್ಯೆಯನ್ನು ಕಲಿತಿದ್ದಾರೆ. ಪ್ರಸ್ತುತ ಭರತನಾಟ್ಯ, ಸಂಗೀತ, ಯಕ್ಷಗಾನ, ಕರಾಟೆ, ಯೋಗ, ಅಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಹನ್ನೊಂದರ ಹರೆಯದ ಜ್ಞಾನ ರೈಯವರು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಾರೆ. ಜ್ಞಾನ ರೈ ಅವರು ಕುರಿಯ ಅಡ್ಯೆತ್ತಿಮಾರಿನ ಉದ್ಯಮಿ ಜಯರಾಮ ರೈ ಹಾಗೂ ಸುದ್ದಿ ಚಾನೆಲ್ ನಿರೂಪಕಿ ಹೇಮಾ ಜಯರಾಮ್ ರೈಯವರ ಪುತ್ರಿ.