ವಿಟ್ಲ: ನಮ್ಮ ಕೃಷಿಕರು ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಹೈನುಗಾರಿಗೆಯನ್ನು ಯುವಕರು ಉದ್ಯಮವಾಗಿ ಮಾಡಬೇಕು. ಹೈನುಗಾರಿಕೆಗೆ ಒತ್ತು ನೀಡುವ ಕೆಲಸ ಹಾಲು ಒಕ್ಕೂಟದಿಂದ ಆಗಲಿದೆ. ಆತ್ಮ ವಿಶ್ವಾಸದೊಂದಿಗೆ ಕೆಲಸ ನಿರ್ವಹಿಸಿದಾಗ ಯಶಸ್ಸು ಖಂಡಿತ. ಊರಿನ ಸಾಮರಸ್ಯದ ಬದುಕನ್ನು ಸಾಗಿಸಲು ಹೈನುಗಾರಿಕೆಯ ಪಾತ್ರವೂ ಅಪಾರವಿದೆ. ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘ ಇನ್ನಷ್ಟು ಬೆಳಗಲಿ ಎಂದು ಮಂಗಳೂರು ದ.ಕ. ಹಾಲು ಒಕ್ಕೂಟದ ಅಧ್ಯಕ್ಷರದ ಕೆ.ಪಿ.ಸುಚರಿತ ಶೆಟ್ಟಿರವರು ಹೇಳಿದರು.
ಅವರು ಸೆ.೨೨ರಂದು ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಮೃತ ಸಿಂಧು ಇದರ ರಜತ ಮಹೋತ್ಸವ ಕಾರ್ಯಕ್ರಮ ದಲ್ಲಿ ಸಾಂದ್ರ ಶೀತಲೀಕರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಹಣವನ್ನು ಪಾರ್ದರ್ಶಕವಾಗಿ ಅವರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ. ಹಾಲಿಗೆ ಹೆಚ್ಚುವರಿಯಾದ ೩ ರೂಪಾಯಿಯನ್ನು ರೈತರಿಗೆ ನೇರ ಸಿಗುವಂತೆ ಮಾಡುವಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಗ್ರಾಹಕರ ಹಿತವನ್ನು ಕಾಪಾಡುವ ಮೂಲಕ ಹೈನುಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬಹುದು. ವೈಜ್ಞಾನಿಕ ಹಾಗೂ ತಾಂತ್ರಿಕ ವ್ಯವಸ್ಥೆಯಲ್ಲಿ ಯೋಚಿಸಿ ಹೈನುಗಾರಿಕೆಯಲ್ಲಿ ನಾವು ತೊಡಗಿಕೊಳ್ಳಬೇಕಾಗಿದೆ. ರಾಜ್ಯದಲ್ಲೇ ದ.ಕ ಜಿಲ್ಲಾ ಹಾಲು ಒಕ್ಕೂಟ ಕ್ವಾಲಿಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಲು ಒಕ್ಕೂಟವನ್ನು ಗಟ್ಟಿಗೊಳಿಸುವ ಕೆಲಸ ಯುವಪೀಳಿಗೆಯಿಂದ ಆಗಬೇಕಾಗಿದೆ. ಎಲ್ಲರ ಸಹಕಾರವಿದ್ದಲ್ಲಿ ಸೂರ್ಯ ಹಾಲು ಉತ್ಪಾದಕರ ಸಂಘ ಇನ್ನಷ್ಟು ಎತ್ತರಕ್ಕೆ ಏರಲು ಸಾಧ್ಯ ಎಂದರು.
ದ.ಕ. ಹಾಲು ಉತ್ಯಾಪದಕರ ಒಕ್ಕೂಟ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ್ ರವರು ಮಾತನಾಡಿ ಇದೊಂದು ಇಪ್ಪತೈದನೇ ವರ್ಷಾಚರಣೆಯನ್ನುಆಚರಿಸುತ್ತಿರುವ ಸಂಭ್ರಮದ ಕ್ಷಣವಾಗಿದೆ. ಇದು ನಮ್ಮ ಎರಡು ಜಿಲ್ಲೆಯಲ್ಲಿನ ೧೪೭ನೇ ಬಿಎಂಸಿ ಘಟಕವಾಗಿದೆ. ನಮಗೆ ಬರುವಂತಹ ೮೦% ಹಾಲನ್ನು ಬಿಎಂಸಿ ಮೂಲಕವೇ ತರುವಂತಹ ವ್ಯವಸ್ಥೆಯನ್ನು ದ.ಕ. ಜಿಲ್ಲಾ ಹಾಲು ಒಕ್ಕೂಟ ಮಾಡಿದೆ. ಹೆಚ್ಚು ಹೆಚ್ಚು ಬಿಎಂಸಿ ಯನ್ನು ಗ್ರಾಮೀಣ ಭಾಗಗಳಲ್ಲಿ ಸ್ಥಾಪನೆ ಮಾಡುವ ಮೂಲಕ ಹಾಲನ್ನು ಅಲ್ಲೇ ಶೀತಲೀಕರಣ ಗೊಳಿಸಿ ಹಾಲಿನ ಗುಣಮಟ್ಟವನ್ನು ಕಾಪಾಡತಕ್ಕಂತದ್ದು, ರೈತರಿಗೆ ಹೆಚ್ಚಿನ ದರ ಸಿಗಲು ಅನುಕೂಲ ವಾಗುವಂತದನ್ನು ದ.ಕ. ಹಾಲು ಒಕ್ಕೂಟ ಮಾಡಿದೆ. ಇದರ ಉದ್ದೇಶವೆಂದರೆ ಗ್ರಾಮೀಣ ಭಾಗದ ಹಾಲು ಉತ್ಪಾದಕರ ಆಸಕ್ತಿ ಹೆಚ್ಚಿಸಲು, ಸಾಗಾಣಿಕೆ ವೆಚ್ಚ ತಪ್ಪಿಸುವುದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೈನುಗಾರಿಕೆಗೆ ಒತ್ತುಕೊಡುವ ವ್ಯವಸ್ಥೆ ಆಗಲಿದೆ ಎಂದರು.
ದ.ಕ.ಹಾಲು ಒಕ್ಕೂಟ ಮಂಗಳೂರು ಇದರ ನಿರ್ದೇಶಕರಾದ ಸುಧಾಕರ ರೈರವರು ಮಾತನಾಡಿ ಸಹಕಾರಿಯಲ್ಲಿ ಬಹುದೊಡ್ಡ ಹೆಸರು ಮಾಡಿರುವ ಗ್ರಾಮ ಇಡ್ಕಿದು ಆಗಿದೆ. ಶ್ರಮಜೀವನದಿಂದ ಎಲ್ಲವನ್ನು ಸಾಧಿಸಲು ಸಾದ್ಯ. ಹೈನುಗಾರಿಕೆಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡವ ಕೆಲಸ ಹಾಲು ಒಕ್ಕೂಟದಿಂದ ಆಗಲಿದೆ. ಸೂರ್ಯ ಹಾಲು ಉತ್ಪಾದಕ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಸುಧೀರ್ ಕುಮಾರ್ ಶೆಟ್ಟಿಯವರು ಮಾತನಾಡಿ ಈ ಒಂದು ಹಾಲು ಉತ್ಪಾದಕರ ಸಂಘದ ಇಪ್ಪತ್ತೈದು ವರ್ಷಗಳ ಹಿಂದಿನ ದಿನವನ್ನು ನಾವು ಮನನ ಮಾಡಬೇಕಾದ ಅಗತ್ಯವಿದೆ. ಆ ಕಷ್ಟದ ದಿನಗಳಲ್ಲಿ ಹಾಲು ಉತ್ಪಾದಕರ ಸಂಘವನ್ನು ಕಟ್ಟಿಬೆಳೆಸಿದವರ ಶ್ರಮ ಅದು ಅವಿಶ್ಮರಣೀಯವಾಗಿದೆ. ಯಾಂತ್ರೀಕೃತ ಯುಗದಲ್ಲಿ ನಾವಿದ್ದೇವೆ. ಆದ್ದರಿಂದ ಆಗಿನ ಕಾಲಘಟ್ಟಕ್ಕೂ ಈಗಿನ ಕಾಲಘಟ್ಟಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಸಂಸ್ಥೆ ಬೆಳೆದಿದೆ ಅದನ್ನು ಎಲ್ಲರ ಸಹಕಾರದಲ್ಲಿ ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ಥಾಪಕ ಅಧ್ಯಕ್ಷ ಕೃಷ್ಣ ಭಟ್‌ರವರು ಮಾತನಾಡಿ ಇಪ್ಪತೈದು ವರುಷಗಳ ಸುದೀರ್ಘ ಇತಿಹಾಸವನ್ನು ನೆನಪು ಮಾಡಿಕೊಂಡರೆ ಅದರಲ್ಲಿ ಹಲವರ ತ್ಯಾಗ ಪರಿಶ್ರಮವಿದೆ. ನೂರು ವರುಷಗಳ ಇತಿಹಾಸವಿರುವ ಇಡ್ಕಿದು ಸೇವಾ ಸಹಕಾರಿ ಸಂಘದ ಅಧಿನದಲ್ಲಿ ಹಿರಿಯರ ನೇತೃತ್ವದಲ್ಲಿ ಇಡ್ಕಿದು ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಾಪನೆಯಾಯಿತು. ನಂತರ ಮಿತ್ತೂರು ಹಾಗೂ ಸೂರ್ಯದಲ್ಲಿ ಹಾಲು ಸಂಗ್ರಹವಾಗುತ್ತಿರುವ ಸಂದರ್ಭದಲ್ಲಿ ಸೂರ್ಯದಲ್ಲಿ ಒಂದು ಸ್ವಾತಂತ್ರ್ಯ ಹಾಲು ಉತ್ಪಾದಕರ ಸಂಘದ ಸ್ಥಾಪನೆಯಾಯಿತು. ಆ ಬಳಿಕ ಮಿತ್ತೂರಿನಲ್ಲಿ ಪ್ರಾರಂಭವಾಯಿತು. ಆರಂಭದ ದಿನಗಳಲ್ಲಿ ಬಹಳಷ್ಟು ಕಷ್ಟವಿತ್ತು. ಹಲವಾರು ಮರೆಯಲಾಗದ ವ್ಯಕ್ತಿಗಳ ಶ್ರಮ ಇದರಲ್ಲಿದೆ. ರಜತಮಹೋತ್ಸವದ ಸಂದರ್ಭದಲ್ಲಿ ಸಂಸ್ಥೆಗೆ ಹೊಸ ಹುಟ್ಟು ಸಿಕ್ಕಿದೆ. ಉತ್ತಮ ಅಧ್ಯಕ್ಷರ ನೇತೃತ್ವದಲ್ಲಿ ಸಂಘ ಮುನ್ನಡೆಯುತ್ತಿದೆ. ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸೇವೆಯೂ ಇಲ್ಲಿ ಅವಿಸ್ಮರಣೀಯ ಸಂಸ್ಥೆ ಉಜ್ವಲವಾಗಿ ಬೆಳಗಲಿ ಎಂದರು.
ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಈಶ್ವರ ಗೌಡವರು ಮಾತನಾಡಿ ಎಲ್ಲರ ಸಹಕಾರದಿಂದ ನಮ್ಮ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇಷ್ಟೊಂದು ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಸಂಘದ ಬೆಳವಣಿಗೆಯಲ್ಲಿ ಎಲ್ಲರ ಪಾಲು ಇದೆ. ದ.ಕ. ಹಾಲು ಒಕ್ಕೂಟದಿಂದ ನಮಗೆ ಹೆಚ್ಚಿನ ಸಹಕಾರ ಬೇಕಾಗಿದೆ. ಉತ್ತಮ ಸಂಘ ಎಂದು ಹೆಸರು ಬರುವಂತೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.
ದ.ಕ ಹಾಲು ಒಕ್ಕೂಟ ಮಂಗಳೂರು ಇದರ ನಿರ್ದೇಶಕರಾದ ಸುಭದ್ರಾ ರಾವ್ ಹಾಗೂ ಸವಿತಾ ಯನ್. ಶೆಟ್ಟಿರವರು ಸಾಂದ್ರಶೀತಲೀಕರಣ ಘಟಕದ ನಾಮಫಲಕ ಅನಾವರಣ ಮಾಡಿ ಶುಭಹಾರೈಸಿದರು.
ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್.ಮುಕ್ಕುಡರಾವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕರಾದ ಬಿ.ಲಿಂಗಪ್ಪ ಗೌಡ ಬಂಗೇರಕೋಡಿ, ಕೆ.ಪ್ರೇಮ ಕೊಪ್ಪಳ, ದಿನೇಶ್ ಗೌಡ ಪೊಯ್ಯೆ, ಕುಶಾಲಪ್ಪ ಗೌಡ ಕೊಪ್ಪಳ, ಕೆ.ಕೂಸಪ್ಪ ಗೌಡ, ಗೀತಾ ಮುಂಡ್ರಬೈಲು, ಯನ್ ಸುಂದರಿ ನಾಯ್ಕ್, ಯಸ್.ಪಾರ್ವತಿ ಸೂರ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಲಸಮಯಗಳ ಹಿಂದೆ ಮೃತಪಟ್ಟ ಸಂಘದ ನಿರ್ದೇಶಕರಾದ ಯಸ್.ಲಲಿತಾ ಸೂರ್ಯರವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಕಾರ್ಯದರ್ಶಿ ಪೂವಪ್ಪ, ವಿಸ್ತರಣಾಧಿಕಾರಿ ಜಗದೀಶ್, ಹಾಲು ಪರೀಕ್ಷಕಿಯಾಗಿದ್ದ ಉಮಾ, ಕಟ್ಟಡ ನಿರ್ಮಾಣ ಹಂತದಲ್ಲಿ ಸಹಕರಿಸಿದ ರಮೇಶ್, ಡಾ. ಶ್ರೀನಿವಾಸ, ರುಕ್ಮಿಣಿ ಹಾಗೂ ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ. ಸುಚರಿತ ಶೆಟ್ಟಿರವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಇಡ್ಕಿದು ಸೇವಾ ಸಹಕಾರಿ ಸಂಘದ ಸಿಬ್ಬಂದಿ ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾದ ನಾಗೇಶ್ ವಂದಿಸಿದರು. ವಿವೇಕ್ ಪ್ರಾರ್ಥಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಕಾರ್ತಿಕ್ ಕೆ., ಸುಜಾತ, ದಿವ್ಯಶ್ರೀ ಸಹಕರಿಸಿದರು.