ಗೆಲುವೊಂದೇ ವಿದ್ಯಾರ್ಥಿಗಳ ಮೂಲಮಂತ್ರವಾಗಬೇಕು -ಇ.ಸಿ.ಒ ಹರಿಪ್ರಸಾದ್
ನೆಲ್ಯಾಡಿ: ಪ್ರತಿಯೊಬ್ಬ ವಿದ್ಯಾರ್ಥಿಯ ಚಿತ್ತ ಗೆಲುವಿನತ್ತ ಇರಬೇಕು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಇ.ಸಿ.ಒ ಹರಿಪ್ರಸಾದ್ ಹೇಳಿದರು. ಅವರು ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ನಿಜವಾದ ವೇದಿಕೆ ಪ್ರತಿಭಾ ಕಾರಂಜಿಯಾಗಿದೆ ಎಂದರು. ಸಂಸ್ಥೆಯ ಸಂಚಾಲಕ ರೆ.ಫಾ.ಹನಿ ಜೇಕಬ್ ಮಾತನಾಡಿ, ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ. ವಿದ್ಯಾರ್ಥಿಗಳು ತಾವು ಬೆಳಗಿ ಇತರರ ಜೀವನದ ದಾರಿ ದೀಪವಾಗ ಬೇಕು. ಆಗ ಮಾತ್ರ ಸಮಾಜದ ಒಂದು ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು.
ಕಡಬ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಾಂತಾರಾಮ ಓಡ್ಲ, ಕಡಬ ಸಹಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ಸತ್ಯನಾರಾಯಣ ಎಚ್, ಕಡಬ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ರಾಜೇಶ್ ರೈ ಎಸ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್, ಅಶ್ರಫ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿಮ್ಸನ್ ಕೆ.ಜೆ, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಂದರ ಗೌಡ ಬಳಕ್ಕಳ, ಉಪಾಧ್ಯಕ್ಷೆ ಪುಷ್ಪಾವತಿ, ಉಪ್ಪಿನಂಗಡಿ ಪ್ರತಿಭಾಕಾರಂಜಿ ನೋಡಲ್ ಅಧಿಕಾರಿ ಶ್ರೀಧರ ಗೌಡ ಬಿ, ಉದನೆ ಬಿಷಪ್ ಪೋಲಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನ ಮುಖ್ಯಗುರು ಸಿಬಿಚ್ಚನ್ ಟಿ.ಸಿ. ಉಪಸ್ಥಿತರಿದ್ದರು.
ಸೈಂಟ್ ಆಂಟನೀಸ್ ಸಂಸ್ಥೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಹಾಗೂ ಪ್ರತಿಭಾ ಕಾರಂಜಿ ಉಪ್ಪಿನಂಗಡಿ ವಲಯ ನೋಡಲ್ ಅಧಿಕಾರಿ ಶ್ರೀಧರ ಗೌಡ ಸ್ವಾಗತಿಸಿ, ಹಿರಿಯ ಶಿಕ್ಷಕ ಬಾಲಕೃಷ್ಣ ಗೌಡ ವಂದಿಸಿದರು. ಸಹಶಿಕ್ಷಕ ಯಶೋಧರ ಕಾರ್ಯಕ್ರಮ ನಿರೂಪಿಸಿದರು.