ಕಾಂಚನ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆ, ಪೋಷಕರ ಸಭೆ

0

ನೆಲ್ಯಾಡಿ: ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಸುಮಾರು 5 ಲೀಟರ್ ನಷ್ಟು ನೀರನ್ನು ಕುಡಿಯಬೇಕು. ಮಾರುಕಟ್ಟೆಯಲ್ಲಿರುವ ಉತ್ಪನ್ನಗಳಿಗೆ ಮಾರು ಹೋಗದೆ ನಮ್ಮ ಮನೆಯಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಸಿದ ಹಣ್ಣು ತರಕಾರಿಗಳನ್ನು ಹೆಚ್ಚು ಆಹಾರದಲ್ಲಿ ಬಳಸಿಕೊಳ್ಳಬೇಕು ಎಂದು ಆಲಂಕಾರಿನ ಪ್ರಸಿದ್ಧ ವೈದ್ಯ ಡಾ. ಹರಿದಾಸ್ ಭಟ್ ಹೇಳಿದರು.

 

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೊಳಪಟ್ಟ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆದ ಪೋಷಣಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಜನರು ಹಣ ಹೆಚ್ಚು ಕೊಟ್ಟ ವಸ್ತು ಶ್ರೇಷ್ಠ ಎಂಬುದನ್ನು ತಿಳಿದುಕೊಳ್ಳದೇ ನಮ್ಮ ಸುತ್ತ ಮುತ್ತಲಿನ ರಾಸಾಯನಿಕ ವಸ್ತುಗಳನ್ನು ಬಳಸದ ಆಹಾರ ವಸ್ತುಗಳನ್ನು ಹೆಚ್ಚು ಉಪಯೋಗಿಸಬೇಕು ಎಂದು ಡಾ.ಹರಿದಾಸ ಭಟ್ ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಸೂರ್ಯಪ್ರಕಾಶರವರು ಧರ್ಮಸ್ಥಳದ ಆಡಳಿತ ಮಂಡಳಿ ನೀಡುವ ಸಹಾಯವನ್ನು ಸ್ಮರಿಸಿ, ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಹಾಗೂ ಶುಚಿತ್ವದ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

ಅತಿಥಿಯಾಗಿದ್ದ ಬಾಲಕೃಷ್ಣ ಎಡಪಡಿತ್ತಾಯರವರು ಮಾತನಾಡಿ, ಪ್ರಧಾನಿಯವರು ಜಾರಿಗೊಳಿಸಿದ ಯೋಜನೆಯನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಲ್ಲಿ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಸುಮಲತಾ ಅವರನ್ನು ಸನ್ಮಾನಿಸಲಾಯಿತು. ದೀಪ್ತಿ ಶ್ರೀಧರ್‌ರವರ ಸುಕನ್ಯಾ ಎಂಡೋಮೆಂಟ್ ದತ್ತಿ ನಿಧಿ ಯೋಜನೆ ಅಡಿಯಲ್ಲಿ ಶಾಲೆಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಾದ ಶರಣ್ಯ, ಶ್ರೇಯಾ, ಲಿಖಿತಾ, ಮೋಕ್ಷಿತಾ, ರಕ್ಷಾ, ನಿಕ್ಷಿತಾರವರಿಗೆ ಕಲಿಕಾ ಪರಿಕರಗಳನ್ನು ನೀಡಲಾಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೇಣುಗೋಪಾಲ್ ಕುಳ್ಳಾಜೆರವರು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿ ಸಹನಾಳಿಗೆ ಸೋಲಾರ್ ದೀಪವನ್ನು ನೀಡಿದರು. ಶಾಲೆಯ ಸಭಾಂಗಣದಲ್ಲಿ ಪೌಷ್ಟಿಕ ಆಹಾರ ಪ್ರದರ್ಶನವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಹರಿಶ್ಚಂದ್ರ ಗೌಡ, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚರಣ್ ಸ್ವಾಗತಿಸಿ, ಗಣಕಯಂತ್ರ ಶಿಕ್ಷಕಿ ಸುಜಾತಾ ವಂದಿಸಿದರು .ಕಾರ್ಯಕ್ರಮದ ಬಳಿಕ ಪೋಷಕರ ಸಭೆ ನಡೆಯಿತು.

LEAVE A REPLY

Please enter your comment!
Please enter your name here