





- ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆ
ಪುತ್ತೂರು: ತಿಂಗಳಾಡಿ, ಕುಂಬ್ರ, ಮಾಡಾವು, ಮುಂಡೂರು ಇತ್ಯಾದಿ ಪ್ರದೇಶಗಳಿಗೆ ಒಳಪಟ್ಟಂತೆ ಎಲ್ಲಿಯೂ ಕೂಡ 108 ಆಂಬುಲೆನ್ಸ್ ವಾಹನ ಇಲ್ಲದೆ ಇರುವುದರಿಂದ ಈ ಭಾಗದಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ತೀರಾ ಕಷ್ಟವಾಗುತ್ತಿದೆ. ಇದರಿಂದ ಗಾಯಾಳುಗಳು ಪ್ರಾಣ ಕಳೆದುಕೊಳ್ಳಬೇಕಾದ ಪ್ರಮೇಯ ಒದಗಿಬಂದಿದೆ. ಈಗಾಗಲೇ ಕೆಲವು ಮಂದಿ ತುರ್ತು ಚಿಕಿತ್ಸೆ ಸಿಗದೇ ಇರುವುದರಿಂದ ಪ್ರಾಣ ಕಳೆದುಕೊಂಡ ಘಟನೆಯೂ ನಡೆದಿದೆ. ಆದ್ದರಿಂದ ತಿಂಗಳಾಡಿ ವ್ಯಾಪ್ತಿಗೆ ಈ ಕೂಡಲೇ 108 ಆಂಬುಲೆನ್ಸ್ ವಾಹನವನ್ನು ಒದಗಿಸುವಂತೆ ಪುತ್ತೂರು ಶಾಸಕರಿಗೆ ಮತ್ತು ಆರೋಗ್ಯ ಇಲಾಖೆಗೆ ಮನವಿ ಮಾಡಿಕೊಳ್ಳುವುದು ಎಂದು ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.








ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷರು, ಕುಂಬ್ರ, ತಿಂಗಳಾಡಿ,ಮಾಡಾವು, ಮುಂಡೂರು, ಕಾವು, ಈ ಭಾಗದಲ್ಲಿ ಎಲ್ಲಿಯೂ ಆಂಬುಲೆನ್ಸ್ ವಾಹನ ಇಲ್ಲ ಇದರಿಂದ ಯಾವುದೇ ಅಪಘಾತ ಸಂಭವಿಸಿದರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ತುಂಬಾ ಕಷ್ಟವಾಗುತ್ತಿದೆ. ಈಗಾಗಲೇ ಕೆಲವು ಮಂದಿ ಗಾಯಾಳುಗಳು ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳಬೇಕಾದ ಪ್ರಸಂಗವೂ ಬಂದಿದೆ. ಆಂಬುಲೆನ್ಸ್ ವಾಹನ ಬೇಕು ಎಂದು ಈಗಾಗಲೇ ಕುಂಬ್ರ ವರ್ತಕರ ಸಂಘದಿಂದಲೂ ಮನವಿ ಸಲ್ಲಿಸಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಈ ಕೂಡಲೇ ತಿಂಗಳಾಡಿ ಪ್ರದೇಶಕ್ಕೆ ಹೊಂದಿಕೊಂಡಂತೆ ಆಂಬುಲೆನ್ಸ್ ವಾಹನವನ್ನು ಒದಗಿಸಿಕೊಡುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರುರವರಿಗೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವ ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.
ಪರವಾನಗೆ ನವೀಕರಿಸಿ ಇಲ್ಲವೇ ದಂಡ ಪಾವತಿಸಿ-ಇದು ಕಡೇಯ ಸೂಚನೆ
ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸುವವರು ತಮ್ಮ ಪರವಾನಗೆಯನ್ನು ಈ ಕೂಡಲೇ ನವೀಕರಿಸಬೇಕು ಮತ್ತು ಪರವಾನಗೆ ಇಲ್ಲದೇ ವ್ಯಾಪಾರ ನಡೆಸುವವರು ಅ.5 ರೊಳಗೆ ಬಂದು ಪರವಾನಗೆ ಪಡೆದುಕೊಳ್ಳಬೇಕು ಎಂದು ನಿರ್ಣಯಿಸಲಾಯಿತು. ಅಕ್ರಮ ಕಟ್ಟಡದಲ್ಲಿ ಪರವಾನಗೆ ಇಲ್ಲದೆ ವ್ಯಾಪಾರ ಮಾಡುವವರಿಗೆ ದಂಡ ವಿಧಿಸುವುದು ಎಂದು ನಿರ್ಣಯಿಸಲಾಯಿತು. ಈಗಾಗಲೇ ಸುಮಾರು 26 ಮಂದಿಯ ವ್ಯಾಪಾರ ಪರವಾನೆಗೆ ನವೀಕರಣಕ್ಕೆ ಬಾಕಿ ಇದೆ ಹಾಗೂ ಪರವಾನಗೆ ಇಲ್ಲದವರಿಗೆ ಪರವಾನಗೆ ಪಡೆದುಕೊಳ್ಳುವಂತೆ ನೋಟೀಸ್ ನೀಡಿದರೂ ಯಾರೂ ಪರವಾನಗೆ ಮಾಡಿಕೊಂಡಿಲ್ಲ ಆದ್ದರಿಂದ ಅ.5ರೊಳಗೆ ಪಂಚಾಯತ್‌ಗೆ ಬಂದು ಪರವಾನಗೆ ಪಡೆದುಕೊಳ್ಳುವುದು ಮತ್ತು ನವೀಕರಣ ಮಾಡಿಕೊಳ್ಳುವುದು ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.
ನೀರಿನ ಬಿಲ್ ಬಾಕಿಯಾದರೆ ಸಂಪರ್ಕ ಕಡಿತ
ಈಗಾಗಲೇ ಒಂದಷ್ಟು ಮಂದಿಯ ನೀರಿನ ಬಿಲ್ ಬಾಕಿ ಇದ್ದು ಇವರಿಗೂ ನೋಟೀಸ್ ನೀಡಿದರೂ ಬಿಲ್ ಪಾವತಿಸುತ್ತಿಲ್ಲ ಎಂಬ ವಿಷಯ ಸಭೆಯಲ್ಲಿ ಚರ್ಚೆಯಾಯಿತು. ನೀರಿನ ಬಿಲ್ ಬಾಕಿ ಇರುವವರ ಪಟ್ಟಿಯನ್ನು ತಯಾರಿಸಲಾಗಿದೆ ಮತ್ತು ಪಟ್ಟಿಯಲ್ಲಿರುವವರ ಮನೆಗೆ ತೆರಳಿ ಅವರಿಗೆ ಬಿಲ್ ಪಾವತಿಸುವಂತೆ ಮತ್ತೊಮ್ಮೆ ಅರಿವು ಮೂಡಿಸುವುದು ತದನಂತರವೂ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವುದು ಎಂದು ಅಧ್ಯಕ್ಷರು ತಿಳಿಸಿದರು. ತಿಂಗಳಾಡಿ ಅಂಗನವಾಡಿಗೆ ನೀರಿನ ವ್ಯವಸ್ಥೆಗೆ ಟ್ಯಾಂಕ್ ಕೊಡುವುದು ಎಂದು ನಿರ್ಣಯಿಸಲಾಯಿತು.
ಅವಶ್ಯವಿದ್ದಲ್ಲಿ ರಸ್ತೆ ದುರಸ್ತಿ ಮಾಡುವುದು
ಇನ್ನೇನು ಮಳೆಗಾಲ ಮುಗಿಯುತ್ತಾ ಬಂದಿದ್ದು ರಸ್ತೆಯ ಇಕ್ಕೆಲಗಳಲ್ಲಿ ಪೊದೆ,ಗಿಡಗಂಟಿಗಳು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತೀರಾ ಸಮಸ್ಯೆ ಇರುವ ಕಡೆಗಳಲ್ಲಿ ರಸ್ತೆ ದುರಸ್ತಿ ಮತ್ತು ಗಿಡಗಂಟಿಗಳನ್ನು ತೆರವು ಮಾಡುವುದು ಈ ಬಗ್ಗೆ ವಾರ್ಡ್ ಸದಸ್ಯರಿಗೆ ಜವಬ್ದಾರಿ ನೀಡುವುದು ಎಂದು ನಿರ್ಣಯಿಸಲಾಯಿತು.
ರಸ್ತೆ ಅಭಿವೃದ್ಧಿಗೆ ಶಾಸಕರಿಗೆ ಮನವಿ
ಸಾರೆಪುಣಿಯಿಂದ ಸನ್ಯಾಸಿಗುಡ್ಡೆ ರಸ್ತೆಯು ತೀರಾ ನಾದುರಸ್ತಿಯಲ್ಲಿದ್ದು ಈ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಹಾಗೂ ತಿಂಗಳಾಡಿಯಿಂದ ಕೊಡಂಕೀರಿಗೆ ಹೋಗುವ ರಸ್ತೆಯು ಹದಗೆಟ್ಟಿದ್ದು ಈ ರಸ್ತೆ ಅಭಿವೃದ್ಧಿಗೂ ಅನುದಾನ ಒದಗಿಸುವಂತೆ ಶಾಸಕ ಸಂಜೀವ ಮಠಂದೂರುರವರಿಗೆ ಮನವಿ ಮಾಡಿಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಮನವಿ ಮಾಡಿಕೊಂಡರೂ ಮರ ತೆರವು ಮಾಡಿಲ್ಲ
ಕುಂಬ್ರದಿಂದ ತಿಂಗಳಾಡಿಗೆ ಬರುವ ರಾಜ್ಯ ಹೆದ್ದಾರಿಯಲ್ಲಿ ಕೊಲ್ಲಾಜೆ ಎಂಬಲ್ಲಿ ಅಪಾಯಕಾರಿ ಮರವೊಂದು ರಸ್ತೆ ಬದಿಯಲ್ಲಿದ್ದು ಈ ಮರವನ್ನು ಅಥವಾ ಮರದ ಕೊಂಬೆಗಳನ್ನು ತೆರವು ಮಾಡುವಂತೆ ಈಗಾಗಲೇ ಅರಣ್ಯ ಇಲಾಖೆಗೆ ಮನವಿ ಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮರ ಅಪಾಯದ ಸ್ಥಿತಿಯಲ್ಲಿದ್ದು ಇದರ ಪಕ್ಕದಲ್ಲೇ ಬಸ್ಸು ತಂಗುದಾಣವೂ ಇದೆ. ವಾಹನ ಸವಾರರು ಸೇರಿದಂತೆ ಹಲವು ಮಂದಿ ಈ ಮರದಡಿಯಲ್ಲಿ ನಿಂತುಕೊಂಡಿರುತ್ತಾರೆ. ಪ್ರಾಣ ಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಒಳಿತು ಎಂದು ಕೃಷ್ಣ ಕುಮಾರ್ ಇದ್ಯಪೆ ಸಭೆಯ ಗಮನಕ್ಕೆ ತಂದರು. ಇದು ಅರಿಯಡ್ಕ ಗ್ರಾಪಂ ವ್ಯಾಪ್ತಿಗೆ ಬರುತ್ತದೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ಇರುವುದರಿಂದ ನಾವು ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೂ ತಂದಿದ್ದೇವೆ ಎಂದು ಅಧ್ಯಕ್ಷರು ತಿಳಿಸಿದರು.
ಸೋಲಾರ್ ದೀಪ ಸರಿಪಡಿಸಿ
ಸೋಲಾರ್ ದೀಪಗಳು ಉರಿಯದೇ ಇರುವ ಬಗ್ಗೆ ವಿಠಲ ರೈ ಮಿತ್ತೋಡಿಯವರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಉತ್ತರಿಸಿದ ಅಧ್ಯಕ್ಷ ರತನ್ ರೈಯವರು ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ 18 ಸೋಲಾರ್ ದೀಪಗಳ ಹಾಳಾಗಿದ್ದು ಇದನ್ನು ದುರಸ್ತಿ ಮಾಡುವುದಕ್ಕೆ ಬಹಳಷ್ಟು ಖರ್ಚು ತಗಲುತ್ತದೆ ಆದ್ದರಿಂದ ಅಗತ್ಯ ಇರುವ ೮ ಕಡೆಯ ಸೋಲಾರ್ ದೀಪಗಳನ್ನು ದುರಸ್ತಿ ಮಾಡುವುದು ಮತ್ತು ಇತರ ಕಡೆಗಳಲ್ಲಿ ವಿದ್ಯುತ್ ದಾರಿ ದೀಪಗಳನ್ನೆ ಬಳಸಿಕೊಳ್ಳುವುದು ಎಂದು ತಿಳಿಸಿದರು.
ಖಂಡನಾ ನಿರ್ಣಯ
ಜಿನಸು ಸಾಮಾಗ್ರಿ ಖರೀದಿಸಲು ಅಂಗಡಿಗೆ ಬಂದ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕೆದಂಬಾಡಿ ಗ್ರಾಪಂ ವ್ಯಾಪ್ತಿಯ ತಿಂಗಳಾಡಿಯಲ್ಲಿ ನಡೆದಿರುವುದು ವಿಷಾದನೀಯ ಇಂತಹ ಘಟನೆ ಮರುಕಳಿಸಬಾರದು, ಇಂತಹ ಘಟನೆಗೆ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕೃಷ್ಣ ಕುಮಾರ್ ಇದ್ಯಪೆ ಆಗ್ರಹಿಸಿದರು ಅದರಂತೆ ನಿರ್ಣಯ ತೆಗೆದುಕೊಳ್ಳಲಾಯಿತು.
ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣ ಕುಮಾರ್ ಇದ್ಯಪೆ, ಜಯಲಕ್ಷ್ಮೀ ಬಲ್ಲಾಳ್, ಸುಜಾತ ಮುಳಿಗದ್ದೆ, ರೇವತಿ ಬೋಳೋಡಿ, ವಿಠಲ ರೈ ಮಿತ್ತೋಡಿ, ಸುಜಾತ, ಅಸ್ಮಾ ಚರ್ಚೆಯಲ್ಲಿ ಪಾಲ್ಗೊಂಡರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸರಕಾರದ ಸುತ್ತೋಲೆಗಳನ್ನು ಓದಿದರು. ಕಾರ್ಯದರ್ಶಿ ಸುನಂದ ರೈ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿ ಜಯಂತ ಮೇರ್ಲ ಅರ್ಜಿಗಳನ್ನು ಓದಿದರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್, ಮೃದುಳ, ಶಶಿಪ್ರಭಾ ಸಹಕರಿಸಿದ್ದರು.







