ಉಪ್ಪಿನಂಗಡಿ: ಗ್ರಾ.ಪಂ. ಸಿಬ್ಬಂದಿಯ ಪತಿ ಹಾಗೂ ಇತರರು ಗ್ರಾ.ಪಂ. ಸದಸ್ಯನೋರ್ವರಿಗೆ ಹಲ್ಲೆ ನಡೆಸಿದ ಘಟನೆ ಸೆ.29ರಂದು ಹಿರೇಬಂಡಾಡಿ ಗ್ರಾ.ಪಂ. ಆವರಣದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಹಲ್ಲೆಗೊಳಗಾದ ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ಸೆ.29ರಂದು ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಸಾಮಾನ್ಯ ಸಭೆ ನಿಗದಿಯಾಗಿತ್ತು. ಸಭೆ ಮುಗಿಸಿ ನಾನು ಹೊರಗಡೆ ಬರುತ್ತಿದ್ದಂತೆಯೇ ಇಲ್ಲಿನ ಗ್ರಾ.ಪಂ. ಸಿಬ್ಬಂದಿಯ ಪತಿ ನೋಣಯ್ಯ ಗೌಡ ಎಂಬಾತ ನನಗೆ ಹಲ್ಲೆ ನಡೆಸಿದ್ದು, ಈತನಿಗೆ ಐದು ಮಂದಿ ಗ್ರಾ.ಪಂ. ಸದಸ್ಯರು ಸಹಕಾರ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಗ್ರಾ.ಪಂ.ನ ಕೆಲವರು ಪ್ರವಾಸ ತೆರಳಿದ್ದು, ಆಗ ತೆಗೆದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ನಾನೇ ವೈರಲ್ ಮಾಡಿದ್ದೆಂದು ಭ್ರಮಿಸಿ, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಅಲ್ಲಿ ಮಾತುಕತೆಯ ಮೂಲಕ ಈ ವಿಷಯ ಬಗೆ ಹರಿದಿದ್ದು, ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಾನು ಕ್ಷಮಾಪಣೆಯನ್ನೂ ಕೇಳಿದ್ದೇನೆ. ಈ ವಿಷಯವನ್ನು ಇಲ್ಲಿಗೆ ಮುಗಿಸಿಬಿಡಬೇಕೆಂದೂ ಸಭೆಯಲ್ಲಿ ಚರ್ಚೆ ನಡೆದಿದೆ. ಅದೆಲ್ಲಾ ಆದ ಬಳಿಕ ಸಭೆ ಮುಗಿಸಿ ಹೊರ ಬಂದಾಗ ಇದೇ ವಿಷಯಕ್ಕೆ ಸಂಬಂಽಸಿ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೂ ದೂರು ನೀಡಿದ್ದೇನೆ’ ಎಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗ್ರಾ.ಪಂ. ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ.