ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದ ಲಲಿತಾಂಬಿಕಾ ವೇದಿಕೆಯಲ್ಲಿ ಗುರುವಾರ ನಡೆದ ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಚ್.ಜಿ. ಶ್ರೀಧರ್ ಮಾತನಾಡಿ, ಭಾಷೆ ಉಳಿಸುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಬಲಪಡಿಸಬೇಕು. ಆಧುನಿಕ ದಿನಮಾನಗಳಿಗೆ ಒಗ್ಗಿಕೊಳ್ಳುವ ನೆಲೆಯಲ್ಲಿ ಕನ್ನಡ ಶಾಲೆಗಳನ್ನು ಬಲಪಡಿಸುವ ಕೆಲಸ ನಡೆಯಬೇಕು. ಕನ್ನಡ ಶಾಲೆಗಳಿಗೆ ತಾರತಮ್ಯ ಮಾಡದೆ ಸರ್ಕಾರ ಅನುದಾನ ನೀಡುವ ಮೂಲಕ ಕನ್ನಡದ ಕಾಯಕಕ್ಕೆ ಬೆಂಬಲ ನೀಡಬೇಕು. ಮನೆಯ ಒಳಗಿನ ಪರಿಸರ ಕನ್ನಡಮಯವಾದಲ್ಲಿ ಶಾಲೆಯಲ್ಲಿ ಮಗು ಯಾವ ಮಾಧ್ಯಮದಲ್ಲಿ ಕಲಿತರೂ ಯಾವುದೇ ಪರಿಣಾಮ ಬೀರುವುದಿಲ್ಲ. ಮಕ್ಕಳಲ್ಲಿ ಕನ್ನಡಾಸಕ್ತಿ ಮೂಡಿರುತ್ತದೆ ಎಂದರು. ವರ್ತಮಾನದ ಜಗತ್ತು ತಂತ್ರಜ್ಞಾನದ ಮೇಲೆ ನಿಂತಿದ್ದು ಇಂದು ಎಲ್ಲರೂ ತಂತ್ರಜ್ಞಾನ ಅನಿವಾರ್ಯವಾಗಿ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸ್ಥಿತಿ ಎದುರಾಗಿದೆ. ಕನ್ನಡದ ಸಾವಿರಾರು ಪುಸ್ತಕಗಳು ಜಾಲತಾಣಗಳಲ್ಲಿ ಲಭ್ಯವಾಗುತ್ತಿದೆ. ಇಂತಹ ಪುಸ್ತಕಗಳನ್ನು ಓದುವುದಕ್ಕೂ ಆಧುನಿಕ ಟ್ಯಾಬ್ಗಳು ಬಂದಿವೆ. ಯುವಜನಾಂಗ ಇದರೆಡೆಗೆ ನಿಧಾನವಾಗಿ ಸರಿಯುತ್ತಿದೆ. ಆದರೆ ಇದು ಪುಸ್ತಕವನ್ನು ಖರೀದಿಸಿ ಓದುವ ಅನುಭವ ನೀಡುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ಗ್ರಾಮಾಂತರ ಪ್ರದೇಶವನ್ನು ತಲುಪಲು ಸಾಧ್ಯವಾಗಿದೆ ಸಾಹಿತ್ಯ ತಲುಪಲು ಸಾಧ್ಯವಾಗಿದೆ ಎಂದರು.
ಹೈಸ್ಕೂಲಿಗೆ ಕನ್ನಡ ಶಿಕ್ಷಕರ ಕೊರತೆಯ ಸೂಚನೆ: ಪದವಿ ಶಿಕ್ಷಣದ ಬಿ.ಎ. ತರಗತಿಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ಆಯ್ಕೆ ಮಾಡುವವರ ಸಂಖ್ಯೆ ತೀವ್ರಗತಿಯಲ್ಲಿ ಕುಸಿಯುತ್ತಿದೆ. ಇದು ಹೀಗೆಯೇ ಮುಂದುವರಿದರೆ ಹೈಸ್ಕೂಲ್ನಲ್ಲಿ ಕನ್ನಡ ಪಾಠ ಮಾಡುವ ಶಿಕ್ಷಕರ ಕೊರತೆ ತೀವ್ರವಾಗಲಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲೇ ಪರಿಹಾರವನ್ನು ಹುಡುಕುವುದು ಉತ್ತಮ. ಇದಕ್ಕೆ ಪರಿಹಾರವಾಗಿ ಹೊರನಾಡಿನಲ್ಲಿ ಕನ್ನಡ ಎಂ.ಎ. ಮಾಡುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ 25 ಸಾವಿರ ರೂ. ಸಹಾಯಧನ ನೀಡುವ ಪದ್ಧತಿ ಇದೆ. ಇದನ್ನು ಪದವಿ ಪೂರ್ವ ಮತ್ತು ಪದವಿ ತರಗತಿಯಲ್ಲಿ ಕನ್ನಡ ಐಚ್ಛಿಕವನ್ನು ಅಧ್ಯಯನಕ್ಕೆ ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ಸಾಹಿತ್ಯ ಪರಿಷತ್ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಡಾ| ಶ್ರೀಧರ್ ಎಚ್.ಜಿ. ಸಲಹೆ ನೀಡಿದರು.
ಕನ್ನಡದ ಲಿಖಿತ ಪರಂಪರೆಯನ್ನು ಉಲ್ಲೇಖಿಸುವಾಗ ಹಲ್ಮಿಡಿ ಶಾಸನದ ಹೆಸರು ಹೇಳುತ್ತೇವೆ. ಆದರೆ ಏಳು ವರ್ಷಗಳ ಹಿಂದೆ ಶಿಕಾರಿಪುರ ತಾಲೂಕಿನ ತಾಳಗುಂದದ ಪ್ರಣವೇಶ್ವರ ದೇಗುಲದ ಆವರಣದಲ್ಲಿ ನಡೆದ ಉತ್ಖನನದಲ್ಲಿ ಹೊಸ ಶಾಸನವೊಂದು ದೊರಕಿದೆ. ಇದು ಸುಮಾರು ಕ್ರಿ.ಶ. 400ರ ಆಸುಪಾಸಿನಲ್ಲಿ ರಚನೆಯಾಗಿರಬೇಕು. ಆದ್ದರಿಂದ ಹಲ್ಮಿಡಿಗಿಂತಲೂ ಸುಮಾರು 50 ವರ್ಷಗಳಷ್ಟು ಹಳೆಯ ಶಾಸನ ಇದಾಗಿದೆ ಎಂದರು. ಶಾಸನಶಾಸ, ಹಸ್ತಪ್ರತಿಶಾಸ, ವ್ಯಾಕರಣ, ನಿಘಂಟು, ಭಾಷಾವಿಜ್ಞಾನದಂತಹ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿರುವವರು ಬೆರಳೆಣಿಕೆಯಷ್ಟು ಮಂದಿ. ಅವರು ಸಹ ನಿವೃತ್ತಿಯ ಅಂಚಿಗೆ ಬಂದು ನಿಂತವರು. ಆದ್ದರಿಂದ ವಿದ್ವತ್ತಿನ ಕ್ಷೇತ್ರ ಬೆಳೆಯುವುದನ್ನು ಏನು ಮಾಡಬೇಕು ಎನ್ನುವುದನ್ನು ಹಿರಿಯರು ಯೋಚಿಸುವ ಅಗತ್ಯ ಇದೆ ಎಂದು ಹೇಳಿದರು.