ಅಡಿಕೆ ಮರವೇರಲು ಟ್ರೀ ಸೈಕಲ್ ತಯಾರಿ: ಚಾರ್ವಾಕದ ಗ್ರಾಮೀಣ ಯುವಕನ ವಿಶೇಷ ಸಾಧನೆ

0

ಟ್ರೀ ಸೈಕಲ್‌ಗೆ ಎಲ್ಲೆಲ್ಲೂ ಬೇಡಿಕೆ- ರೈತರಿಂದ ಉತ್ತಮ ಸ್ಪಂದನೆ

ವರದಿ: ಸುಧಾಕರ್ ಕಾಣಿಯೂರು

ಕಾಣಿಯೂರು: ವಾಣಿಜ್ಯ ಬೆಳೆ ಅಡಕೆ ಧಾರಣೆ ಏರುತ್ತಲೇ ಇರುವುದು ಒಂದೆಡೆಯಾದರೆ ಅಡಿಕೆಗೆ ಔಷಧ ಬಿಡುವ, ಅಡಿಕೆ ಕೊಯ್ಯುವ ನುರಿತ ಕಾರ್ಮಿಕರ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ಇದಕ್ಕೊಂದು ಪರಿಹಾರ ಹುಡುಕಲು ಹೊರಟ ಕಡಬ ತಾಲೂಕು ಚಾರ್ವಾಕ ಗ್ರಾಮದ ಖಂಡಿಗ (ಕಾಪಿನಕಾಡು) ಎಂಬಲ್ಲಿನ ಯುವ ಕೃಷಿಕನೋರ್ವ ಮರವೇರುವ “ಟ್ರೀ ಸೈಕಲ್” ಉಪಕರಣವೊಂದನ್ನು ಆವಿಷ್ಕರಿಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಂದೆ ,ತಾಯಿ, ಪತ್ನಿ, ಪುತ್ರ ನೊಂದಿಗೆ ಚಿಕ್ಕ ಸಂಸಾರದಲ್ಲಿ ವಾಸಿಸುತ್ತಿರುವ ಭಾಸ್ಕರ ಅವರದು ಅಪ್ಪಟ ಕೃಷಿ ಕುಟುಂಬ. ಕಾರಣಾಂತರಗಳಿಂದ ಪ್ರಾಥಮಿಕ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಭಾಸ್ಕರ್ ಕೃಷಿಯತ್ತ ಮುಖ ಮಾಡಿದರು. ಅಡಿಕೆ ತೋಟವನ್ನು ಹೊಂದಿರುವ ಇವರಿಗೆ ಕಾರ್ಮಿಕರ ಸಮಸ್ಯೆಯ ಬಗ್ಗೆ ಅರಿವಿತ್ತು. ಸರಿಯಾದ ಸಮಯದಲ್ಲಿ ಔಷಧ ಬಿಡದೆ ಅಡಿಕೆ ಬೆಳೆ ನಾಶವಾದ ಉದಾಹರಣೆಗಳೂ ಇವೆ. ಇದರಿಂದಾಗಿ ಸಣ್ಣ ಕೃಷಿಕರಿಗೆ ಉಪಕಾರಿಯಾಗಲಿ ಎನ್ನುವ ಕಾರಣಕ್ಕೆ ಈ ಮರ ಹತ್ತುವ ಟ್ರೀ ಸೈಕಲ್ ಅನ್ನು ಸಿದ್ಧಪಡಿಸಿದ್ದಾರೆ.

ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಈ ಉಪಕರಣವನ್ನು ನಿರ್ಮಿಸಿರುವ ಭಾಸ್ಕರ್ 3 ವರ್ಷದ ಹಿಂದೆ ಈ ಕಾರ್ಯದಲ್ಲಿ ತೊಡಗಿದ್ದಾರೆ. ಮೂರು ವರ್ಷಗಳ ಕಾಲ ಹಲವು ಮಾರ್ಪಾಡು ಮತ್ತು ಲೋಪದೋಷಗಳನ್ನು ಸರಿಪಡಿಸಿ ಈ ಉಪಕರಣವನ್ನು ಎಲ್ಲಾ ರೀತಿಯ ಪ್ರಯೋಗಕ್ಕೆ ಒಳಪಡಿಸಿ ಇದೀಗ ಯಶಸ್ವಿಯಾಗಿದ್ದಾರೆ. ತನ್ನ ತೋಟ ಮಾತ್ರವಲ್ಲದೆ ಇತರ ತೋಟಗಳಲ್ಲೂ ಇದೀಗ ಔಷಧ ಬಿಡುವ ಮತ್ತು ಅಡಿಕೆ ಕೊಯ್ಯುವ ಕೆಲಸಕ್ಕೆ ಭಾಸ್ಕರ್ ಇದೇ ಉಪಕರಣವನ್ನು ಬಳಸುತ್ತಿದ್ದಾರೆ. ಅಡಿಕೆ ಮರಕ್ಕೆ ಚೈನ್ ಮೂಲಕ ಲಾಕ್ ಮಾಡಿ , ಕೈ ಹಾಗು ಕಾಲಿನ ಮೂಲಕ ಈ ಉಪಕರಣವನ್ನು ಉಪಯೋಗಿಸಿ ಮರವನ್ನು ಸಲೀಸಾಗಿ ಹತ್ತಲಾಗುತ್ತದೆ. ಇದರ ಉಪಯೋಗವನ್ನು ಅರಿತ ಹಲವು ಕೃಷಿಕರಿಗೆ ಬಾಸ್ಕರ್ ಉಪಕರಣವನ್ನು ನೀಡಿದ್ದು, 6500 ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಉಪಕರಣ ಪಡೆಯಲು ಬರುವ ಕೃಷಿಕನಿಗೆ ತನ್ನ ಅಡಿಕೆ ತೋಟದಲ್ಲೇ ತರಬೇತಿ ನೀಡಿದ ಬಳಿಕವೇ ಉಪಕರಣವನ್ನು ಮಾರಾಟ ಮಾಡುತ್ತಾರೆ.

ಅಡಿಕೆ ಮರಗಳಿಗೆ ಸಲೀಸಾಗಿ ಹತ್ತಲು ಉಪಕಾರಿಯಾಗುವ ಈ ಉಪಕರಣದಿಂದ ಅಡಿಕೆಗೆ ಔಷಧ ಬಿಡುವ, ಅಡಿಕೆ ಕೊಯ್ಯವ ಕೆಲಸವನ್ನು ಮಾಡಬಹುದಾಗಿದ್ದು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರೂ ಈ ಉಪಕರಣವನ್ನು ಬಳಸಿ ಅಡಿಕೆ ಮರವನ್ನು ಹತ್ತಬಹುದಾಗಿದೆ. ಮರವೇರುವ ಈ ಉಪಕರಣವನ್ನು ಇದೀಗ ಹಲವೆಡೆ ಬಳಕೆ ಮಾಡಲಾಗುತ್ತಿದೆ. ಸುಲಭವಾಗಿ ಮರ ಏರಬಲ್ಲ ಮತ್ತು ಅಷ್ಟೇ ಸುರಕ್ಷತೆಯನ್ನು ನೀಡಬಲ್ಲ ಕಾರಣ ಸಣ್ಣ ಕೃಷಿಕರು ತಾವೇ ಅಡಿಕೆಗೆ ಮದ್ದು ಬಿಡುವ ಮತ್ತು ಕೊಯ್ಯವ ಕೆಲಸ ಮಾಡಬಹುದಾಗಿದೆ. ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಅಡಿಕೆ ಬೆಳೆಗಾರನಿಗೆ ಈ ಉಪಕರಣ ಬಹಳ ಉಪಕಾರಿಯಾಗಲಿದೆ ಎಂಬ ಆಶಾಭಾವನೆ ಕೃಷಿಕರಲ್ಲಿದೆ.

ಅಡಿಕೆ ಕೊಳೆ ರೋಗ ಬಾರದಂತೆ ಮದ್ದು ಸಿಂಪರಣೆ ಹಾಗೂ ಅಡಿಕೆ ಫಸಲು ಕೊಯ್ಲು ಕಾರ್ಯಕ್ಕೆ ಸಣ್ಣ ಮಟ್ಟಿನ ಕೃಷಿಕರು ಪರದಾಡುತ್ತಿದ್ದಾರೆ. ಇದನ್ನು ಮನಗಂಡು ಅತೀ ಸುಲಭದಲ್ಲಿ ಅಡಿಕೆ ಮರವೇರುವ ಟ್ರೀ ಸೈಕಲ್‌ನ್ನು ತಯಾರಿಸಲಾಗಿದೆ. ಇದಕ್ಕೆ ರೈತರಿಂದ ಪೂರಕ ಸ್ಪಂದನೆ ದೊರೆಯುತ್ತಿದ್ದು, ಸರಕಾರದ ಮಟ್ಟದಿಂದಲೂ ಬೆಂಬಲ ಸಿಗಬೇಕಾಗಿದೆ. ಸದ್ಯಕ್ಕೆ ಅಡಿಕೆ ಮರವೇರುವ ವ್ಯವಸ್ಥೆಯನ್ನು ಉಪಕರಣದಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ತೆಂಗಿನ ಮರ ಏರುವಂತೆಯೂ ಅಭಿವೃದ್ಧಿ ಪಡಿಸಲಾಗುವುದು.

ಭಾಸ್ಕರ್ ಖಂಡಿಗ (ಕಾಪಿನಕಾಡು), ಟ್ರೀ ಸೈಕಲ್ ತಯಾರಕ

LEAVE A REPLY

Please enter your comment!
Please enter your name here