ನೆಲ್ಯಾಡಿ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಸುಬ್ರಹ್ಮಣ್ಯ ಕ್ರಾಸ್‌ನಲ್ಲಿ ಅ.6ರಂದು ರಾತ್ರಿ 8 ಗಂಟೆ ವೇಳೆಗೆ ನಡೆದಿದೆ.
ಸ್ಕೂಟರ್ ಸವಾರ ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕ ನಿವಾಸಿ ಸಯ್ಯದ್ ಸಿನಾನುದ್ದೀನ್(18)ಹಾಗೂ ಸಹ ಸವಾರ ಅಬ್ದುಲ್ ತಮೀಮ್ ಎಂಬವರು ಗಾಯಗೊಂಡವರಾಗಿದ್ದಾರೆ. ಈ ಪೈಕಿ ಗಂಭೀರ ಗಾಯಗೊಂಡಿರುವ ಸಹಸವಾರ ಅಬ್ದುಲ್ ತಮೀಮ್ ಎಂಬವರು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿನಾನುದ್ದೀನ್ ಹಾಗೂ ಅಬ್ದುಲ್ ತಮೀಮ್‌ರವರು ಮಠದಿಂದ ಉಪ್ಪಿನಂಗಡಿ ಕಡೆಗೆ ಸ್ಕೂಟರ್(ಕೆಎ 21 ಇಬಿ 9773)ನಲ್ಲಿ ಹೋಗುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಬರುತ್ತಿದ್ದ ಕಾರನ್ನು (ಕೆಎ 21 ಝೆಡ್ 3134)ಅದರ ಚಾಲಕ ಅನ್ವೇಷ್ ಎಂಬವರು ಸುಬ್ರಹ್ಮಣ್ಯ ಕ್ರಾಸ್ ಬಳಿ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿಯಾಗಿ ತಿರುಗಿಸಿದ ಪರಿಣಾಮ ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಸ್ಕೂಟರ್ ಸವಾರ ಸಿನಾನುದ್ದೀನ್‌ರವರಿಗೆ ಎಡಕಣ್ಣಿನ ಬಳಿ ರಕ್ತಗಾಯ, ಎಡ ಕೆನ್ನೆಗೆ, ಎಡಕಾಲಿಗೆ ತರಚಿದ ಗಾಯ, ಎಡಕಾಲಿನ ಪಾದಕ್ಕೆ ರಕ್ತಗಾಯ ಆಗಿದೆ. ಸಹಸವಾರ ಅಬ್ದುಲ್ ತಮೀಮ್‌ರವರ ಮುಖಕ್ಕೆ ರಕ್ತಗಾಯ, ಎಡಕಾಲಿನ ಮೊಣಗಂಟಿಗೆ ರಕ್ತಗಾಯ, ಎಡಕೈಗೆ, ಎದೆಗೆ ಗುದ್ದಿದ ಗಾಯವಾಗಿದೆ. ಇಬ್ಬರು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದು ಈ ಪೈಕಿ ಅಬ್ದುಲ್ ತಮೀಮ್‌ರವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.